ಬೆಂಗಳೂರು: ಅತಂತ್ರ ಫಲಿತಾಂಶದ ಎಡವಟ್ಟುಗಳ ಅನುಭವದ ಪಾಠ ಕಲಿತಿರುವ ವಿಪಕ್ಷ ಕಾಂಗ್ರೆಸ್ ಈ ಸಲ ಪೂರ್ಣ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ಭಗೀರಥ ಪ್ರಯತ್ನ ನಡೆಸಿದೆ. ಕನಿಷ್ಠ 125ರಿಂದ 140 ಕ್ಷೇತ್ರಗಳಲ್ಲಿ ಗೆಲ್ಲಬೇಕೆಂಬ ಟಾರ್ಗೆಟ್‌ಗೆ ಆ ಪಕ್ಷವನ್ನು “ದಕ್ಷಿಣ-ಉತ್ತರ’ ದ ಗುಮ್ಮ ಬಲವಾಗಿ ಕಾಡುತ್ತಿದೆ. ಇದರಿಂದ ಹೊರಬರುವುದು ಹೇಗೆ ಎಂಬುದೇ ಈಗ ಕೈ ಪಡೆಗೆ ದೊಡ್ಡ ಸವಾಲಾಗಿದೆ.
ಕಳೆದ ವಿಧಾನಸಭಾ ಚುನಾವಣ ಫಲಿತಾಂಶದಲ್ಲಿ ಬಿಜೆಪಿ ಅತ್ಯಧಿಕ 104, ಅನಂತರದ ಸ್ಥಾನದಲ್ಲಿ ಕಾಂಗ್ರೆಸ್ 80 ಹಾಗೂ ಜೆಡಿಎಸ್ 37 ಕ್ಷೇತ್ರಗಳಲ್ಲಿ ಜಯಗಳಿಸಿದ್ದವು. ಆದರೆ, ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಪತನಕ್ಕೆ ಕಾರಣವಾದ “ಆಪರೇಶನ್ ಕಮಲ’ ದ ಬಳಿಕ ಬಿಜೆಪಿ ತನ್ನ ಸಂಖ್ಯಾಬಲವನ್ನು 120ಕ್ಕೆ ವೃದ್ಧಿಸಿಕೊಂಡರೆ ಕಾಂಗ್ರೆಸ್ ಬಲ 69ಕ್ಕೆ ಕುಸಿಯಿತು. ಈಗಿನ ಸಂಖ್ಯಾಬಲ ಡಬಲ್ ಆದರೆ ಮಾತ್ರ ಕಾಂಗ್ರೆಸ್ ಕನಸು ಈಡೇರುತ್ತದೆ, ಇಲ್ಲದಿದ್ದರೆ ಭಗ್ನವಾಗುತ್ತದೆ.
ಈ ಟಾರ್ಗೆಟ್ ರೀಚ್ ಆಗಲು ದಕ್ಷಿಣ ಕರ್ನಾಟಕ (ಹಳೆ ಮೈಸೂರು) ದಲ್ಲಿ ಒಕ್ಕಲಿಗರು ಹಾಗೂ ಉತ್ತರ ಕರ್ನಾಟಕದಲ್ಲಿ ಲಿಂಗಾಯತರ ಮತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯಬೇಕು. ಆದರೆ ಈ ಕೆಲಸ ಅಷ್ಟೊಂದು ಸುಲಭವಾಗಿಲ್ಲ. ಕಾಂಗ್ರೆಸ್ ಇತ್ತೀಚಿನ ಚುನಾವಣೆಗಳಲ್ಲಿ ಬಹುಮತದ ದಡ ಸೇರಲು ಸಾಧ್ಯವಾಗದೇ ಇರುವುದಕ್ಕೆ ಈ ಎರಡೂ ಸಮುದಾಯಗಳು ಹೆಚ್ಚಿನ ಪ್ರಮಾಣದಲ್ಲಿ ಕೈ ಹಿಡಿಯದಿರುವುದೇ ಕಾರಣ ಎಂಬುದು ಕಾಂಗ್ರೆಸ್‌ನ ಆಂತರಿಕ ಲೆಕ್ಕಾಚಾರ. ಇದೊಂದು ರೀತಿ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿರುವ “ದಕ್ಷಿಣ-ಉತ್ತರ’ದ ಗುಮ್ಮನೆಂದೇ ಹೇಳಬಹುದು.
ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಈ ಸಲ ದಲಿತರು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ಕೈಹಿಡಿಯಬಹುದೆಂಬ ನಿರೀಕ್ಷೆ ಇದೆ. ಅದೇ ರೀತಿ ಸಿದ್ದರಾಮಯ್ಯ ಜತೆ ಕುರುಬರು ಇದ್ದಾರೆ. ಇನ್ನು ತನ್ನ ಸಾಂಪ್ರದಾಯಿಕ ಮತ ಬ್ಯಾಂಕ್ ಆಗಿರುವ ಹಿಂದುಳಿದ ವರ್ಗ ಹಾಗೂ ಮುಸ್ಲಿಂ ಸಮಾಜ ಕೂಡ ಕೈಜತೆಗಿದೆ. ಇವೆಲ್ಲದರ ಜತೆಗೆ ಒಕ್ಕಲಿಗರು-ಲಿಂಗಾಯತ ಸಮಾಜದ ಮತಗಳಿಸಲು ಕಾಂಗ್ರೆಸ್ ತನ್ನ ಎಲ್ಲ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದರೂ ಈಗಲೂ ಒಕ್ಕಲಿಗರು ಜೆಡಿಎಸ್, ಲಿಂಗಾಯತರು ಬಿಜೆಪಿ ಕಡೆ ಗಟ್ಟಿಯಾಗಿ ನಿಂತಿದ್ದಾರೆ ಎಂಬುದು ರಾಜಕೀಯ ತಜ್ಞರ ಅಭಿಮತ.
Related Articles
ಆ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನನಗೂ ಒಂದು ಅವಕಾಶ ಕೊಡಿ ಎಂದು ಒಕ್ಕಲಿಗರ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಕೈಮುಗಿದು ಬೇಡಿಕೊಳ್ಳುವ ಮೂಲಕ ಒಕ್ಕಲಿಗರನ್ನು ಸೆಳೆಯುವ ತಂತ್ರ ಅನುಸರಿಸುತ್ತಿದ್ದಾರೆ. ಇನ್ನೊಂದೆಡೆ ಬಿಜೆಪಿಯ ಅಗ್ರ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣ ರಾಜಕಾರಣದಿಂದ ದೂರ ಸರಿದ ಪರಿಸ್ಥಿತಿಯ ಲಾಭ ಪಡೆದು ಲಿಂಗಾಯತರ ಮತ ಸೆಳೆಯಲು ಕಾಂಗ್ರೆಸ್ ಒಳಗೊಳಗೆ ಹಲವು ಬಗೆಯ ತಂತ್ರಗಾರಿಕೆ ನಡೆಸುತ್ತಿದೆ. ಇಷ್ಟಾದರೂ ಲಿಂಗಾಯತರ ನಡೆ ಇನ್ನೂ ನಿಗೂಢವಾಗಿರುವುದು ಕೈಪಡೆಯನ್ನು ಚಿಂತೆಗೀಡು ಮಾಡಿದೆ.
ಒಕ್ಕಲಿಗರ ಪ್ರಾಬಲ್ಯವಿರುವ ಮಂಡ್ಯ, ಹಾಸನದಲ್ಲಿ ಕಾಂಗ್ರೆಸ್ ಬಲ ಶೂನ್ಯವಾಗಿದ್ದರೆ ಉಡುಪಿ, ಕೊಡಗು ಜಿಲ್ಲೆಯಲ್ಲೂ ಯಾವುದೇ ಕ್ಷೇತ್ರ ದಲ್ಲಿ ಗೆದ್ದಿಲ್ಲ. ಇನ್ನು ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಶಿವಮೊಗ್ಗ, ಮಂಗಳೂರು, ಚಿತ್ರದುರ್ಗ, ಹಾವೇರಿ, ಉತ್ತರ ಕನ್ನಡ, ಧಾರವಾಡ, ಗದಗ ಹಾಗೂ ಯಾದಗಿರಿ ಜಿಲ್ಲೆಗಳ 61 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕಳೆದ ಸಲ ಗೆದ್ದಿರುವುದು ತಲಾ ಒಂದೊಂದೇ. ಅಂದರೆ 11 ಕ್ಷೇತ್ರಗಳಲ್ಲಿ ಮಾತ್ರ. ಅತ್ಯಧಿಕ 18 ಕ್ಷೇತ್ರಗಳಿರುವ ಬೆಳಗಾವಿಯಲ್ಲಿ 5, ಅನಂತರದ ತುಮಕೂರಿನ 11ರಲ್ಲಿ 3, ಬಾಗಲಕೋಟೆಯ 7ರಲ್ಲಿ 2, ವಿಜಯಪುರದ 8ರಲ್ಲಿ 3, ಕಲಬುರಗಿಯ 9ರಲ್ಲಿ 4, ಬೀದರ್‌ನ 6ರಲ್ಲಿ 3, ರಾಯಚೂರಿನ 7ರಲ್ಲಿ 3 ಹಾಗೂ ಕೊಪ್ಪಳದ 5 ಕ್ಷೇತ್ರಗಳಲ್ಲಿ 2 ಕಡೆ ಮಾತ್ರ ಗೆದ್ದಿದೆ. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹಿಂದೆ ಬೀಳಲು ಜೆಡಿಎಸ್ ಕಾರಣವಾಗಿದ್ದರೆ ಮುಂಬೈ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಬಿಜೆಪಿಯೇ ಅಡ್ಡಗಾಲು ಹಾಕಿರುವುದನ್ನು ಈ ಅಂಕಿ ಅಂಶಗಳೇ ಹೇಳುತ್ತವೆ. ಹೀಗಾಗಿ ಒಕ್ಕಲಿಗರು ಹಾಗೂ ಲಿಂಗಾಯತರ ಓಲೈಕೆಗೆ ಮುಂದಾಗಿರುವುದು ಕಾಂಗ್ರೆಸ್ ನಾಯಕರ ಇತ್ತೀಚಿನ ನಡೆ-ನುಡಿಗಳಿಂದ ವ್ಯಕ್ತವಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ಬೆಳಗಾವಿ ಪ್ರವಾಸದಲ್ಲಿ ಲಿಂಗಾಯತ ನಾಯಕರಾದ ನಿಜಲಿಂಗಪ್ಪ, ವೀರೇಂದ್ರ ಪಾಟೀಲರಿಗೆ ಕಾಂಗ್ರೆಸ್ ಅವಮಾನ ಮಾಡಿತ್ತು ಎಂದು ಪ್ರಸ್ತಾವಿಸಿದ್ದಕ್ಕೆ ಪ್ರತಿಯಾಗಿ ಬಿಜೆಪಿಯು ಬಿ.ಎಸ್. ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿ ಈಗ ಅವರ ಬಗ್ಗೆ ಅನುಕಂಪ ತೋರುತ್ತಿದೆ ಎಂದು ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದರು. ಯಡಿಯೂರಪ್ಪ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಕಾರಣಕ್ಕೆ ಎಲ್ಲೋ ಒಂದು ಕಡೆ ಲಿಂಗಾಯತ ಮತಗಳು ಈ ಸಲ ಚದುರಿ ಹೋಗಲಿದ್ದು ಅವು ಕಾಂಗ್ರೆಸ್ ಕಡೆ ಬರಬಹುದೆಂಬ ಆಸೆ ಕೈ ನಾಯಕರಲ್ಲಿದೆ. ಆ ಕಾರಣದಿಂದಲೇ ಒಂದೆಡೆ ಒಕ್ಕಲಿಗರು, ಇನ್ನೊಂದೆಡೆ ಲಿಂಗಾಯತ ಮತಬ್ಯಾಂಕ್ ಮೇಲೆ ಕಾಂಗ್ರೆಸ್ ಕಣ್ಣಿಟ್ಟುಕೊಂಡು ತಂತ್ರಗಾರಿಕೆ ಹೆಣೆಯುತ್ತಿದೆ, ಇದು ಎಷ್ಟರ ಮಟ್ಟಿಗೆ ಕೈಹಿಡಿಯುತ್ತದೆ ಎಂಬುದನ್ನು ಕಾದು ನೋಡಬೇಕು.
-ಎಂ.ಎನ್.ಗುರುಮೂರ್ತಿ