Advertisement

ಹೋಬರ್ಟ್‌ ಹೋರಾಟ; ಹರಿಣಗಳಿಗೆ ಸರಣಿ

06:00 AM Nov 12, 2018 | Team Udayavani |

ಹೋಬರ್ಟ್‌: ನಾಯಕ ಫಾ ಡು ಪ್ಲೆಸಿಸ್‌ ಮತ್ತು ಡೇವಿಡ್‌ ಮಿಲ್ಲರ್‌ ಅವರ ಅಮೋಘ ಶತಕ, ಇವರಿಬ್ಬರ 252 ರನ್ನುಗಳ ದಾಖಲೆ ಜತೆಯಾಟದ ನೆರವಿನಿಂದ ರವಿವಾರದ ಹೋಬರ್ಟ್‌ ಹೋರಾಟದಲ್ಲಿ ಆತಿಥೇಯ ಆಸ್ಟ್ರೇಲಿಯವನ್ನು 40 ರನ್ನುಗಳಿಂದ ಕೆಡವಿದ ದಕ್ಷಿಣ ಆಫ್ರಿಕಾ ಏಕದಿನ ಸರಣಿಯನ್ನು 2-1ರಿಂದ ವಶಪಡಿಸಿಕೊಂಡಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ 5 ವಿಕೆಟಿಗೆ 320 ರನ್‌ ಪೇರಿಸಿದರೆ, ಶಾನ್‌ ಮಾರ್ಷ್‌ ಅವರ ಸೆಂಚುರಿ ಸಾಹಸದಿಂದ ಬೆನ್ನಟ್ಟಿಕೊಂಡು ಬಂದ ಆಸ್ಟ್ರೇಲಿಯ 9ಕ್ಕೆ 280 ರನ್‌ ಗಳಿಸಿ ಶರಣಾಯಿತು. ಇದು 2009ರ ಬಳಿಕ ಕಾಂಗರೂ ನಾಡಿನಲ್ಲಿ ದಕ್ಷಿಣ ಆಫ್ರಿಕಾ ಗೆದ್ದ ಮೊದಲ ಏಕದಿನ ಸರಣಿ. ಟೀಮ್‌ ಇಂಡಿಯಾದ ಆಗಮನದ ಹಿನ್ನೆಲೆಯಲ್ಲಿ ಆಸೀಸ್‌ ಪಾಲಿಗೆ ಈ ಸರಣಿ ಸೋಲು ದೊಡ್ಡದೊಂದು ಹಿನ್ನಡೆಯಾಗಿ ಪರಿಣಮಿಸಬಹುದು.

ದ್ವಿಶತಕದ ಜತೆಯಾಟ
55ಕ್ಕೆ 3 ವಿಕೆಟ್‌ ಕಳೆದುಕೊಂಡು ಸಂಕಟದಲ್ಲಿದ್ದ ದಕ್ಷಿಣ ಆಫ್ರಿಕಾಕ್ಕೆ ಡು ಪ್ಲೆಸಿಸ್‌-ಮಿಲ್ಲರ್‌ ಆಧಾರವಾದರು. “ಡು ಆರ್‌ ಡೈ’ ರೀತಿಯಲ್ಲಿ ಬ್ಯಾಟ್‌ ಬೀಸಿದ ಇವರು 4ನೇ ವಿಕೆಟಿಗೆ 252 ರನ್‌ ಸೂರೆಗೈದು ಬೃಹತ್‌ ಮೊತ್ತವೊಂದನ್ನು ಪೇರಿಸಿದರು. 114 ಎಸೆತಗಳಿಂದ 125 ರನ್‌ ಬಾರಿಸಿದ ಡು ಪ್ಲೆಸಿಸ್‌ 10ನೇ ಶತಕದೊಂದಿಗೆ ಮೆರೆದರು (15 ಬೌಂಡರಿ, 2 ಸಿಕ್ಸರ್‌).

ಸ್ಫೋಟಕ ಬ್ಯಾಟ್ಸ್‌ಮನ್‌ ಮಿಲ್ಲರ್‌ ಅವರಿಂದ 139 ರನ್‌ ಸಿಡಿಯಿತು (108 ಎಸೆತ, 13 ಬೌಂಡರಿ, 4 ಸಿಕ್ಸರ್‌). ಇದು ಅವರ 5ನೇ ಏಕದಿನ ಶತಕ.

ಆಸ್ಟ್ರೇಲಿಯದ ಆರಂಭಕಾರ ಕ್ರಿಸ್‌ ಲಿನ್‌ ಅವರನ್ನು ಮೊದಲ ಎಸೆತದಲ್ಲೇ ಉರುಳಿಸಿದ ಡೇಲ್‌ ಸ್ಟೇನ್‌ ಆಫ್ರಿಕಾಕ್ಕೆ ಭರ್ಜರಿ ಆರಂಭ ಒದಗಿಸಿದರು. 39 ರನ್‌ ಆಗುವಷ್ಟರಲ್ಲಿ 3 ವಿಕೆಟ್‌ ಹಾರಿಹೋಯಿತು. ಆಗ ನೆರವಿಗೆ ನಿಂತವರು ಶಾನ್‌ ಮಾರ್ಷ್‌. 102 ಎಸೆತಗಳಿಗೆ ಜವಾಬಿತ್ತ ಮಾರ್ಷ್‌ 106 ರನ್ನಿನೊಂದಿಗೆ 6ನೇ ಶತಕ ದಾಖಲಿಸಿದರು (102 ಎಸೆತ, 7 ಬೌಂಡರಿ, 4 ಸಿಕ್ಸರ್‌). 

Advertisement

ಮಧ್ಯಮ ಸರದಿಯಲ್ಲಿ ಸ್ಟೊಯಿನಿಸ್‌ 63, ಕ್ಯಾರಿ 42 ಹಾಗೂ ಮ್ಯಾಕ್ಸ್‌ವೆಲ್‌ 35 ರನ್‌ ಹೊಡೆದರೂ ತಂಡ ದಡ ತಲುಪಲಿಲ್ಲ. ಮಾರ್ಷ್‌ ನಿರ್ಗಮನ ಪಂದ್ಯದ ಟರ್ನಿಂಗ್‌ ಪಾಯಿಂಟ್‌ ಎನಿಸಿತು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ 5 ವಿಕೆಟಿಗೆ 320 (ಮಿಲ್ಲರ್‌ 139, ಡು ಪ್ಲೆಸಿಸ್‌ 125, ಸ್ಟಾರ್ಕ್‌ 57ಕ್ಕೆ 2, ಸ್ಟೊಯಿನಿಸ್‌ 70ಕ್ಕೆ 2). ಆಸ್ಟ್ರೇಲಿಯ-9 ವಿಕೆಟಿಗೆ 280 (ಮಾರ್ಷ್‌ 106, ಸ್ಟೊಯಿನಿಸ್‌ 63, ಕ್ಯಾರಿ 42, ರಬಾಡ 40ಕ್ಕೆ 3, ಸ್ಟೇನ್‌ 45ಕ್ಕೆ 3). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಡೇವಿಡ್‌ ಮಿಲ್ಲರ್‌.

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಆಸ್ಟ್ರೇಲಿಯ ವಿರುದ್ಧ ಅವರದೇ ನೆಲದಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸಲ ಮುನ್ನೂರರ ಗಡಿ ದಾಟಿತು (5ಕ್ಕೆ 320). 2009ರ ಪರ್ತ್‌ ಪಂದ್ಯದಲ್ಲಿ 6ಕ್ಕೆ 288 ರನ್‌ ಗಳಿಸಿದ್ದು ಹಿಂದಿನ ಅತ್ಯುತ್ತಮ ಸಾಧನೆ.
* ಡು ಪ್ಲೆಸಿಸ್‌-ಮಿಲ್ಲರ್‌ 4ನೇ ವಿಕೆಟಿಗೆ 252 ರನ್‌ ಪೇರಿಸಿದರು. ಇದು ದಕ್ಷಿಣ ಆಫ್ರಿಕಾದ 3ನೇ ಅತೀ ದೊಡ್ಡ ಜತೆಯಾಟ. ಆಮ್ಲ-ಡಿ ಕಾಕ್‌ ಬಾಂಗ್ಲಾದೇಶ ವಿರುದ್ಧ 282 ರನ್‌ ಒಟ್ಟುಗೂಡಿಸಿದ್ದು ದಾಖಲೆ.
* ಆಸ್ಟ್ರೇಲಿಯ ವಿರುದ್ಧ ಏಕದಿನದಲ್ಲಿ ಅತೀ ದೊಡ್ಡ ಜತೆಯಾಟ ದಾಖಲಾಯಿತು. ಶ್ರೀಲಂಕಾದ ಅತ್ತಪಟ್ಟು-ಜಯಸೂರ್ಯ 2003ರಲ್ಲಿ 237 ರನ್‌ ಪೇರಿಸಿದ ದಾಖಲೆ ಪತನಗೊಂಡಿತು.
* ದಕ್ಷಿಣ ಆಫ್ರಿಕಾ ಪರ 4ನೇ ವಿಕೆಟಿಗೆ ಅತೀ ದೊಡ್ಡ ಜತೆಯಾಟ ದಾಖಲಾಯಿತು. 1996ರ ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಡ್ಯಾರಿಲ್‌ ಕಲಿನನ್‌-ಜಾಂಟಿ ರೋಡ್ಸ್‌ 232 ರನ್‌ ಸಂಗ್ರಹಿಸಿದ ದಾಖಲೆ ಮುರಿದು ಬಿತ್ತು.
* ಇದು ಏಕದಿನ ಇತಿಹಾಸದಲ್ಲಿ ಆತಿಥೇಯ ತಂಡವೊಂದರ ವಿರುದ್ಧ ದಾಖಲಾದ 4ನೇ “250 ಪ್ಲಸ್‌’ ರನ್‌ ಜತೆಯಾಟ. ಇದೇ ವರ್ಷ ಜಿಂಬಾಬ್ವೆ ವಿರುದ್ಧ ಬುಲವಾಯೊದಲ್ಲಿ ಪಾಕಿಸ್ಥಾನದ ಫ‌ಕಾರ್‌ ಜಮಾನ್‌-ಇಮಾಮ್‌ ಉಲ್‌ ಹಕ್‌ 304 ರನ್‌ ಒಟ್ಟುಗೂಡಿಸಿದ್ದು ದಾಖಲೆ.
* ಡು ಪ್ಲೆಸಿಸ್‌-ಮಿಲ್ಲರ್‌ ಒಟ್ಟು 264 ರನ್‌ ಬಾರಿಸಿದರು. ಇದು ಏಕದಿನದಲ್ಲಿ 4ನೇ ಹಾಗೂ 5ನೇ ಕ್ರಮಾಂಕದ ಆಟಗಾರರಿಬ್ಬರು ಸೇರಿ ಒಟ್ಟುಗೂಡಿಸಿದ ಅತ್ಯಧಿಕ ರನ್‌.
* ದಕ್ಷಿಣ ಆಫ್ರಿಕಾ ಮೊದಲ 25 ಓವರ್‌ಗಳಲ್ಲಿ ಕೇವಲ 3.73ರ ಸರಾಸರಿಯಲ್ಲಿ ರನ್‌ ಗಳಿಸಿತು. ಕೇವಲ 10 ಬೌಂಡರಿ ಹಾಗೂ 108 ಡಾಟ್‌ ಬಾಲ್‌ಗ‌ಳಿದ್ದವು. ಅನಂತರದ 25 ಓವರ್‌ಗಳಲ್ಲಿ 9.08ರ ಸರಾಸರಿಯಲ್ಲಿ 227 ರನ್‌ ಸೂರಗೈದಿತು. ಸಿಡಿಸಿದ್ದು ಬರೋಬ್ಬರಿ 30 ಬೌಂಡರಿ ಪ್ಲಸ್‌ ಸಿಕ್ಸರ್‌ಗಳಿದ್ದವು.
* ಆಸ್ಟ್ರೇಲಿಯ ಕೊನೆಯ 15 ಓವರ್‌ಗಳಲ್ಲಿ 174 ರನ್‌ ಬಿಟ್ಟುಕೊಟ್ಟಿತು. ಇದು 2001ರ ಬಳಿಕ ಆಸೀಸ್‌ ಅಂತಿಮ 15 ಓವರ್‌ಗಳಲ್ಲಿ ನೀಡಿದ ಅತ್ಯಧಿಕ ರನ್‌ ಆಗಿದೆ.
* ಕೊನೆಯ 5 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ 75 ರನ್‌ ಪೇರಿಸಿತು. ಇದರಲ್ಲಿ 20 ರನ್‌ ಮಿಚೆಲ್‌ ಸ್ಟಾರ್ಕ್‌ ಅವರ ಒಂದೇ ಓವರಿನಲ್ಲಿ ಬಂದಿತ್ತು. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಟಾರ್ಕ್‌ ಅವರ ಅತ್ಯಂತ ದುಬಾರಿ ಓವರ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next