Advertisement
ಬುಧವಾರ ರಾತ್ರಿ ನಡೆದ ಈ ಜಿದ್ದಾಜಿದ್ದಿ ಮೇಲಾಟದಲ್ಲಿ ದಕ್ಷಿಣ ಆಫ್ರಿಕಾ 8 ವಿಕೆಟಿಗೆ 177 ರನ್ ಹೊಡೆದರೆ, ಇಂಗ್ಲೆಂಡ್ 9 ವಿಕೆಟಿಗೆ 176 ರನ್ ಮಾಡಿ ಸೋಲೊಪ್ಪಿಕೊಂಡಿತು. ಇದು ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡಿಗೆ ಎದುರಾದ ರನ್ ಅಂತರದ ಸಣ್ಣ ಸೋಲು. ಇನ್ನೊಂದೆಡೆ ಹರಿಣಗಳ ಪಡೆ 3ನೇ ಸಲ ಒಂದು ರನ್ನಿನ ಜಯ ಸಾಧಿಸಿತು.
ಕೊನೆಯ 3 ಓವರ್‌ಗಳಿಂದ 28 ರನ್ ತೆಗೆಯುವ ಸವಾಲು ಇಂಗ್ಲೆಂಡ್ ಮುಂದಿತ್ತು. 6 ವಿಕೆಟ್ ಕೈಲಿತ್ತು. ಅಂತಿಮ ಓವರಿನಲ್ಲಿ ಟಾರ್ಗೆಟ್ ಕೇವಲ 7 ರನ್ನಿಗೆ ಇಳಿಯಿತು. ಆದರೆ ಲುಂಗಿ ಎನ್‌ಗಿಡಿ ಘಾತಕ ಸ್ಪೆಲ್ ಒಂದನ್ನು ನಡೆಸಿ ಮಾರ್ಗನ್ ಪಡೆಯ ಗೆಲುವಿನ ಮಾರ್ಗವನ್ನೇ ಮುಚ್ಚಿಬಿಟ್ಟರು. ಈ ಓವರಿನಲ್ಲಿ ಅವರು ಕೇವಲ 5 ರನ್ ನೀಡಿ 2 ವಿಕೆಟ್ ಹಾರಿಸಿದರು. ಜತೆಗೆ ಅಂತಿಮ ಎಸೆತದಲ್ಲಿ 2ನೇ ರನ್ ಕದಿಯುವ ವೇಳೆ ಆದಿಲ್ ರಶೀದ್ ರನೌಟಾದರು. 30 ರನ್ನಿಗೆ 3 ವಿಕೆಟ್ ಹಾರಿಸಿದ ಎನ್‌ಗಿಡಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಚೇಸಿಂಗ್ ವೇಳೆ ಜಾಸನ್ ರಾಯ್ ಬ್ಯಾಟಿಂಗ್ ಜಬರ್ದಸ್ತ್ ಆಗಿತ್ತು. ಅವರು ಕೇವಲ 28 ಎಸೆತಗಳಿಂದ 70 ರನ್ ಸಿಡಿಸಿದರು (7 ಬೌಂಡರಿ, 3 ಸಿಕ್ಸರ್). ನಾಯಕ ಇಯಾನ್ ಮಾರ್ಗನ್ ಕೊಡುಗೆ 52 ರನ್ (34 ಎಸೆತ, 7 ಬೌಂಡರಿ, 1 ಸಿಕ್ಸರ್). ಆದರೆ ಕೊನೆಯಲ್ಲಿ ಸ್ಟೋಕ್ಸ್, ಡೆನ್ಲಿ, ಅಲಿ ಅಗ್ಗಕ್ಕೆ ಔಟಾದದ್ದು ಇಂಗ್ಲೆಂಡಿಗೆ ಹಿನ್ನಡೆಯಾಗಿ ಪರಿಣಮಿಸಿತು.
Related Articles
Advertisement
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ-20 ಓವರ್‌ಗಳಲ್ಲಿ 8 ವಿಕೆಟಿಗೆ 177 (ಬವುಮ 43, ಡಿ ಕಾಕ್ 31, ಡುಸೆನ್ 31, ಜೋರ್ಡನ್ 28ಕ್ಕೆ 2, ಅಲಿ 22ಕ್ಕೆ 1, ರಶೀದ್ 23ಕ್ಕೆ 1). ಇಂಗ್ಲೆಂಡ್-20 ಓವರ್‌ಗಳಲ್ಲಿ 9 ವಿಕೆಟಿಗೆ 176 (ರಾಯ್ 70, ಮಾರ್ಗನ್ 52, ಬೇರ್‌ಸ್ಟೊ 23, ಎನ್‌ಗಿಡಿ 30ಕ್ಕೆ 3, ಫೆಲುಕ್ವಾಯೊ 32ಕ್ಕೆ 2, ಹೆಂಡ್ರಿಕ್ಸ್ 33ಕ್ಕೆ 2).
ಪಂದ್ಯಶ್ರೇಷ್ಠ: ಲುಂಗಿ ಎನ್‌ಗಿಡಿ. ಡೇಲ್ ಸ್ಟೇನ್ ದಾಖಲೆ
ಒಂದು ವರ್ಷದ ಬಳಿಕ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದ ವೇಗಿ ಡೇಲ್ ಸ್ಟೇನ್, ಇಂಗ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ನೂತನ ಬೌಲಿಂಗ್ ದಾಖಲೆ ಬರೆದಿದ್ದಾರೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಪರ ಅತ್ಯಧಿಕ ವಿಕೆಟ್ ಉರುಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಂದ್ಯದಲ್ಲಿ ಸ್ಟೇನ್ ಇಂಗ್ಲೆಂಡ್ ಆರಂಭಕಾರ ಜಾಸ್ ಬಟ್ಲರ್ ವಿಕೆಟ್ ಕಿತ್ತರು. ಇದರೊಂದಿಗೆ ತಮ್ಮ ವಿಕೆಟ್ ಗಳಿಕೆಯನ್ನು 62ಕ್ಕೆ ಏರಿಸಿದರು. 61 ವಿಕೆಟ್ ಕಿತ್ತ ಇಮ್ರಾನ್ ತಾಹಿರ್ ದಾಖಲೆಯನ್ನು ಮುರಿದರು. ತಾಹಿರ್ 35 ಪಂದ್ಯಗಳಿಂದ ಈ ಸಾಧನೆ ಮಾಡಿದರೆ, ಸ್ಟೇನ್ 62 ವಿಕೆಟಿಗೆ 45 ಪಂದ್ಯ ತೆಗೆದುಕೊಂಡಿದ್ದಾರೆ. ಸ್ಟೇನ್ ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್ 439 ಉರುಳಿಸಿದ ಆಫ್ರಿಕಾ ಬೌಲರ್ ಎನಿಸಿದ್ದಾರೆ. ಏಕದಿನದಲ್ಲಿ 196 ವಿಕೆಟ್ ಬೇಟೆಯಾಡಿದ್ದಾರೆ.