Advertisement

ದಕ್ಷಿಣ ಆಫ್ರಿಕಾ-ಜಿಂಬಾಬ್ವೆ: 4 ದಿನಗಳ ಟೆಸ್ಟ್‌

07:50 AM Dec 15, 2017 | Team Udayavani |

ಜೊಹಾನ್ಸ್‌ಬರ್ಗ್‌: ಸಂಪ್ರದಾಯಿಕ ಟೆಸ್ಟ್‌ ಕ್ರಿಕೆಟ್‌ ಮತ್ತೂಂದು ಪರಿವರ್ತನೆಯತ್ತ ಮುಖ ಮಾಡಲಿದೆ. ಮೊನ್ನೆ ಮೊನ್ನೆ “ಅಡಿಲೇಡ್‌ ಓವಲ್‌’ನಲ್ಲಿ ಮೊತ್ತಮೊದಲ ಹಗಲು-ರಾತ್ರಿ ಆ್ಯಶಸ್‌ ಟೆಸ್ಟ್‌ ಮುಗಿದಿರುವ ಬೆನ್ನಲ್ಲೇ, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಕೂಡ ಡೇ-ನೈಟ್‌ ಟೆಸ್ಟ್‌ ಪಂದ್ಯಕ್ಕೆ ಅಣಿಯಾಗಲಿವೆ. ಇದು ವರ್ಷಾಂತ್ಯದ “ಬಾಕ್ಸಿಂಗ್‌ ಡೇ’ ಟೆಸ್ಟ್‌ ಪಂದ್ಯವಾಗಿದ್ದು, 5 ದಿನಗಳ ಬದಲು 4 ದಿನಗಳ ಕಾಲ ಸಾಗಲಿರುವುದು ವಿಶೇಷ.

Advertisement

4 ದಿನಗಳ ಟೆಸ್ಟ್‌ ಪಂದ್ಯಗಳಿಗೆ ಐಸಿಸಿ ಮಾನ್ಯತೆ ನೀಡಿದ ಬಳಿಕ ನಡೆಯಲಿರುವ ಮೊದಲ ಟೆಸ್ಟ್‌ ಪಂದ್ಯ ಇದಾಗಿದೆ. ಪೋರ್ಟ್‌ ಎಲಿಜಬೆತ್‌ನ “ಸೇಂಟ್‌ ಜಾಜ್‌Õì ಪಾರ್ಕ್‌’ನಲ್ಲಿ ಇದು ಡಿ. 26ರಿಂದ ಆರಂಭವಾಗಲಿದೆ. ಪ್ರವಾಸಿ ಜಿಂಬಾಬ್ವೆಗೆ ಇದು ಮೊದಲ ಹಗಲು-ರಾತ್ರಿ ಟೆಸ್ಟ್‌ ಎಂಬುದು ವಿಶೇಷ. ಟೆಸ್ಟ್‌ ಪಂದ್ಯ ಐದರಿಂದ 4 ದಿನಗಳಿಗೆ ಇಳಿಯುವ ಈ ಸಂದರ್ಭದಲ್ಲಿ ಇದಕ್ಕೆ 5 ದಿನಗಳ ಪಂದ್ಯದ ನಿಮಯಮವನ್ನೇ ಅಳವಡಿಸುವ ಹಾಗಿಲ್ಲ. ಇದಕ್ಕಾಗಿ ಐಸಿಸಿ ಕೆಲವು ಮಾರ್ಪಾಡುಗಳನ್ನು ಮಾಡಿದೆ.

5 ದಿನಗಳ ಟೆಸ್ಟ್‌ನಲ್ಲಿ ದಿನಕ್ಕೆ 90 ಓವರ್‌ಗಳನ್ನು ಎಸೆಯಲಾಗುತ್ತಿದೆ. ಆದರೆ 4 ದಿನದ ಟೆಸ್ಟ್‌ ವೇಳೆ ದೈನಂದಿನ ಓವರ್‌ಗಳ ಸಂಖ್ಯೆಯನ್ನು 98ಕ್ಕೆ ಏರಿಸಲಾಗಿದೆ. ಆಗ 4 ದಿನಗಳಲ್ಲಿ ಒಟ್ಟು 392 ಓವರ್‌ ಎಸೆದಂತಾಗುತ್ತದೆ. ಅಂದರೆ 5 ದಿನಗಳ ಮಾಮೂಲು ಟೆಸ್ಟ್‌ ಪಂದ್ಯಗಳಿಗಿಂತ ಕೇವಲ 58 ಓವರ್‌ ಕಡಿಮೆ.

ದಿನಂಪ್ರತಿ 8 ಓವರ್‌ಗಳನ್ನು ಹೆಚ್ಚಿಗೆ ಎಸೆಯಬೇಕಾಗಿರುವುದರಿಂದ ದಿನದಾಟದ ಅವಧಿಯನ್ನು ಅರ್ಧ ಗಂಟೆ ಕಾಲ ವಿಸ್ತರಿಸಲಾಗುತ್ತದೆ. ಆಟದ ಮೊದಲೆರಡು ಅವಧಿಗಳಲ್ಲಿ ಈ ಸಮಯವನ್ನು ಹೊಂದಿಸಿಕೊಳ್ಳಲಾಗುವುದು. ಈ 2 ಅವಧಿಯ ಆಟ 2 ಗಂಟೆಗಳ ಬದಲು 2 ಗಂಟೆ, 15 ನಿಮಿಷಗಳ ಕಾಲ ಸಾಗಲಿದೆ. ಟೀ ವಿರಾಮಕ್ಕೆ 20 ನಿಮಿಷ, “ಸೂಪರ್‌ ಬ್ರೇಕ್‌’ಗೆ 40 ನಿಮಿಷಗಳ ಕಾಲಾವಕಾಶವನ್ನು ನಿಗದಿಗೊಳಿಸಲಾಗಿದೆ.

ಫಾಲೋಆನ್‌ನಲ್ಲೂ ಬದಲಾವಣೆ
ಮಾಮೂಲು ಟೆಸ್ಟ್‌ ಪಂದ್ಯಗಳಲ್ಲಿ 200 ರನ್ನುಗಳ ಮೊದಲ ಇನ್ನಿಂಗ್ಸ್‌ ಅಂತರಕ್ಕೆ ಫಾಲೋಆನ್‌ ವಿಧಿಸಲಾಗುತ್ತದೆ. ಆದರೆ ಇಲ್ಲಿ ಈ ಅಂತರವನ್ನು 150 ರನ್ನಿಗೆ ಇಳಿಸಲಾಗಿದೆ.ಪೋರ್ಟ್‌ ಎಲಿಜಬೆತ್‌ ಕಾಲಮಾನ ಪ್ರಕಾರ ಮಧ್ಯಾಹ್ನ 1.30ಕ್ಕೆ ಈ ಟೆಸ್ಟ್‌ ಪಂದ್ಯ ಆರಂಭವಾಗಲಿದೆ. ಸಂಜೆ 7.45ಕ್ಕೆ ಸೂರ್ಯಾಸ್ತವಾಗಲಿದ್ದು, ಅಂತಿಮ ಅವಧಿಯ ಆಟವಷ್ಟೇ ಹೊನಲು ಬೆಳಕಿನಲ್ಲಿ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next