ಜೊಹಾನ್ಸ್‌ಬರ್ಗ್: ಆರಂಭಿಕ ಆಟಗಾರ ಐಡೆನ್ ಮಾರ್ಕ್ ರಮ್ ಅವರ ಭರ್ಜರಿ ಶತಕದಿಂದಾಗಿ ದಕ್ಷಿಣ ಆಫ್ರಿಕಾ ತಂಡವು ಜೊಹಾನ್ಸ್ ಬರ್ಗ್‌ನಲ್ಲಿ ಸಾಗುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಹೋರಾಟ ನೀಡುತ್ತಿದೆ. ಮೊದಲ ದಿನದಾಟದ ಅಂತ್ಯಕ್ಕೆ ಆತಿಥೇಯ ತಂಡ ಆರು ವಿಕೆಟ್ ಕಳೆದುಕೊಂಡಿದ್ದು 313 ರನ್ ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆಯಿತು. ಡೀನ್ ಎಲ್ಗರ್ ಮತ್ತು ಮಾರ್ಕ್‌ರಮ್ ಮೊದಲ ವಿಕೆಟಿಗೆ 53 ರನ್ನುಗಳ ಜತೆಯಾಟ ನಡೆಸಿದರು. ಆಬಳಿಕ ಬಂದ ಹಾಶಿಮ್ ಆಮ್ಲ ಮತ್ತು ಎಬಿ ಡಿ’ವಿಲಿಯರ್ ಕೂಡ ಮಾರ್ಕ್‌ರಮ್ ಅವರಿಗೆ ಉತ್ತಮ ಬೆಂಬಲ ನೀಡಿದರು. ಇದರಿಂದ ತಂಡ ಬೃಹತ್ ಮೊತ್ತ ಪೇರಿಸುವ ಸೂಚನೆ ನೀಡಿತು.
ಬಿರುಸಿನ ಆಟವಾಡಿದ ಮಾರ್ಕ್ ರಮ್ 216 ಎಸೆತ ಎದುರಿಸಿ 152 ರನ್ ಸಿಡಿಸಿ ಮೂರನೆಯವರಾಗಿ ಔಟಾದರು. 17 ಬೌಂಡರಿ ಬಾರಿಸಿದ ಅವರು 1 ಸಿಕ್ಸರ್ ಸಿಡಿಸಿದರು. ಮಾರ್ಕ್‌ರಮ್ ಮತ್ತು ಪ್ಲೆಸಿಸ್ ಸತತ ಎರಡು ಎಸೆತಗಳಲ್ಲಿ ಔಟ್ ಆದಾಗ ಆಸ್ಟ್ರೇಲಿಯ ಮೇಲುಗೈ ಸಾಧಿಸಬಹುದೆಂದು ಭಾವಿಸಲಾಗಿತ್ತು. ಆದರೆ ಡಿ’ವಿಲಿಯರ್ ಇದಕ್ಕೆ ಅವಕಾಶ ನೀಡಲಿಲ್ಲ. ಉತ್ತಮವಾಗಿ ಆಡುತ್ತಿದ್ದ ಡಿ’ವಿಲಿಯರ್ ಅಂತಿಮ ಅವಧಿಯ ಆಟದಲ್ಲಿ 69 ರನ್ ಗಳಿಸಿ ಔಟಾದರು. ಡಿ’ವಿಲಿಯರ್ ಮತ್ತು ರಬಾಡ ತಂಡದ ಮೊತ್ತ 299ರಲ್ಲಿರುವಾಗ ಪೆವಿಲಿಯನ್ ಸೇರಿಕೊಂಡರು.
ಬವುಮ ಮತ್ತು ಕ್ವಿಂಟನ್ ಡಿ ಕಾಕ್ ತಂಡವನ್ನು ಆಧರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಪಂದ್ಯದ ಮೂಲಕ ಟೆಸ್ಟ್‌ಗೆ ಪಾದಾರ್ಪಣೆಗೈದ ಶಾಡ್ ಸೆಯೆರ್ ಒಂದೇ ಓವರಿನಲ್ಲಿ ಎರಡು ವಿಕೆಟ್ ಕಿತ್ತು ದಕ್ಷಿಣ ಆಫ್ರಿಕಾಕ್ಕೆ ಹೊಡೆತ ನೀಡಿದರು. ಈ ಮೊದಲು ಕಮಿನ್ಸ್ ಕೂಡ ಸತತ ಎರಡು ಎಸೆತಗಳಲ್ಲಿ ಮಾರ್ಕ್‌ರಮ್ ಮತ್ತು ಪ್ಲೆಸಿಸ್ ವಿಕೆಟ್ ಹಾರಿಸಿದ್ದರು.
ಸಂಕ್ಷಿಪ್ತ ಸ್ಕೋರು
ದಕ್ಷಿಣ ಆಫ್ರಿಕಾ 6 ವಿಕೆಟಿಗೆ 313 (ಮಾರ್ಕ್‌ರಮ್ 152, ಆಮ್ಲ 27, ಡಿ’ವಿಲಿಯರ್ 69, ಸೆಯರ್ 58ಕ್ಕೆ 2, ಕಮಿನ್ಸ್ 53ಕ್ಕೆ 3).