ಡರ್ಬಾನ್: ಪ್ರವಾಸಿ ಶ್ರೀಲಂಕಾ ತಂಡದೆದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 233 ರನ್ನುಗಳ ಭರ್ಜರಿ ಗೆಲುವು ದಾಖಲಿಸಿದೆ. ಮಾರ್ಕೊ ಜಾನ್ಸೆನ್ ಪಂದ್ಯದಲ್ಲಿ 11 ವಿಕೆಟ್ ಕಿತ್ತು ಗಮನ ಸೆಳೆದರು.
ಈ ಗೆಲುವಿನಿಂದ ದಕ್ಷಿಣ ಆಫ್ರಿಕಾ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ದ್ವಿತೀಯ ಪಂದ್ಯ ಗುರುವಾರದಿಂದ ಕೆಬೆರ್ಹದಲ್ಲಿ ಆರಂಭವಾಗಲಿದೆ.
ಗೆಲ್ಲಲು 516 ರನ್ ಗಳಿಸುವ ಕಠಿನ ಗುರಿ ಪಡೆದಿದ್ದ ಶ್ರೀಲಂಕಾ ತಂಡವು ನಾಲ್ಕನೇ ದಿನ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 5 ವಿಕೆಟಿಗೆ 103 ರನ್ನುಗಳಿಂದ ಆಟ ಆರಂಭಿಸಿತ್ತು. ದಿನೇಶ್ ಚಂಡಿಮಾಲ್ ಅವರನ್ನು ಹೊರತುಪಡಿಸಿ ತಂಡದ ಇತರ ಆಟಗಾರರು ದಕ್ಷಿಣ ಆಫ್ರಿಕಾದ ದಾಳಿಯನ್ನು ಎದುರಿಸಲು ವಿಫಲರಾದರು. ಅಂತಿಮವಾಗಿ ತಂಡ 282 ರನ್ನಿಗೆ ಆಲೌಟಾಗಿ ಶರಣಾಯಿತು.
ದಿನೇಶ್ ಚಂಡಿಮಾಲ್ 83 ರನ್ನಿಗೆ ಔಟಾದ ಬಳಿಕ ಶ್ರೀಲಂಕಾ ಕೊನೆಯ ಮೂರು ವಿಕೆಟ್‌ಗಳನ್ನು 11 ರನ್ ಅಂತರದಲ್ಲಿ ಕಳೆದುಕೊಂಡಿತು. ದ್ವಿತೀಯ ಇನ್ನಿಂಗ್ಸ್ ನಲ್ಲಿ 73 ರನ್ನಿಗೆ 4 ವಿಕೆಟ್ ಪಡೆದ ಜಾನ್ಸೆನ್ ಒಟ್ಟಾರೆ ಪಂದ್ಯದಲ್ಲಿ 86 ರನ್ನಿಗೆ 11 ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರು:
ದಕ್ಷಿಣ ಆಫ್ರಿಕಾ 191 ಮತ್ತು 5 ವಿಕೆಟಿಗೆ 366 ಡಿಕ್ಲೇರ್ಡ್; ಶ್ರೀಲಂಕಾ 42 ಮತ್ತು 282 (ದಿನೇಶ್ ಚಂಡಿಮಾಲ್ 83, ಧನಂಜಯ ಡಿ’ಸಿಲ್ವ 59, ಕುಸಲ್ ಮೆಂಡಿಸ್ 48, ಮಾರ್ಕೊ ಜಾನ್ಸೆನ್ 73ಕ್ಕೆ 4).