Advertisement

ಶಾರ್ವರೀ ಸರ್ವರಿಗೂ ಶುಭ ತರಲಿ; ನೂತನ ಸಂವತ್ಸರಕ್ಕೆ ಸ್ವಾಗತ

09:23 PM Apr 13, 2020 | Sriram |

ಬ್ರಹ್ಮಾಂಡದಲ್ಲಿ ಚತುರ್ಮುಖ ಬ್ರಹ್ಮ ಮಾನವನ ಸೃಷ್ಟಿಯನ್ನು ಆರಂಭಿಸಿದ ದಿನವೇ ಮೇಷ ಮಾಸದ ಮೊದಲ ದಿನವೂ ಆಗಿದ್ದ ಚೈತ್ರ ಶುಕ್ಲ ಪ್ರತಿಪತ್‌. ಸೃಷ್ಟಿಯ ಆದಿಯಲ್ಲಿ ಸೂರ್ಯಚಂದ್ರರಿಬ್ಬರೂ ಮೇಷಾದಿ ಯಲ್ಲಿದ್ದುದರಿಂದ ಸೌರ ಮಾಸದ ಮೊದಲ ದಿನ ಮತ್ತು ಚಾಂದ್ರ ಮಾಸದ ಮೊದಲ ದಿನ ಅದುವೇ ಆಗಿತ್ತು. ಆದ್ದರಿಂದ ಸೌರ ಮಾಸದಂತೆ ಮೇಷ ಮಾಸದ ಮೊದಲ ದಿನ ಅಂದರೆ ಮೇಷ ಸಂಕ್ರಾಂತಿಯ ಮರುದಿನ ಯುಗಾದಿ ಯಾದರೆ, ಚಾಂದ್ರಮಾನದಂತೆ ಚೈತ್ರ ಶುಕ್ಲ ಪ್ರತಿಪದೆಯಂದು ಯುಗಾದಿ. ಸೂರ್ಯನ ಮೇಷಾದಿ ರಾಶಿ ಚಲನೆಗೆ ಅನುಗುಣವಾಗಿ ಲೆಕ್ಕಾಚಾರ ಸೌರಮಾನವೆನಿಸಿದರೆ, ಚಂದ್ರನ ತಿಥಿಯನ್ನು ಅನುಸರಿಸಿ ಚಾಂದ್ರಮಾನವಾಗುತ್ತದೆ.

Advertisement

ಒಂದು ಸೌರ ವರ್ಷದಲ್ಲಿ 365- 1/4 ದಿನಗ ಳಾದರೆ, ಒಂದು ಚಾಂದ್ರ ವರ್ಷದಲ್ಲಿ ಸುಮಾರು 354 ದಿನಗಳಿರುತ್ತವೆ. ಹೀಗಾಗಿ 33 ತಿಂಗಳಿಗೊಮ್ಮೆ 30 ದಿನಗಳ ವ್ಯತ್ಯಾಸವು ಅಧಿಕ ಮಾಸವಾಗಿ ಸೇರಿಕೊಂಡು ಚಾಂದ್ರಮಾನವು ಸೌರಮಾನವನ್ನು ಅನುಸರಿಸುತ್ತದೆ. ನವೀನರ ಲೆಕ್ಕಾಚಾರವು ಸೌರಮಾಸವಾಗಿರುವುದರಿಂದ ಸೌರ ಯುಗಾದಿಯು ಪ್ರತಿ ವರ್ಷ ಎಪ್ರಿಲ್‌ 14 ಅಥವಾ 15ರಂದು ಬರುತ್ತದೆ. ಆದರೆ ಚಾಂದ್ರ ಯುಗಾದಿಯು ಮಾರ್ಚ್‌ ತಿಂಗಳ ಮಧ್ಯಭಾಗದಿಂದ ಎಪ್ರಿಲ್‌ ಮಧ್ಯ ಭಾಗದವರೆಗೆ ಯಾವಾಗಲೂ ಬರಬಹುದು. ಸೌರ ಯುಗಾದಿಗೂ ಚಾಂದ್ರ ಯುಗಾದಿಗೂ ಇರುವ ಅಂತರ ಅಧಿಕ ಮಾಸ ಇರುವ ವರ್ಷ ಕಡಿಮೆ ಇದ್ದು, ಕ್ರಮೇಣ ವರ್ಷಕ್ಕೆ 11 ದಿನಗಳಿಂದ 29 ದಿನಗಳವರೆಗೂ ಹೆಚ್ಚುವುದು.

ಎರಡು ಮಾನಗಳೂ ಸರಿ
ಸೌರಮಾನ- ಚಾಂದ್ರಮಾನಗಳಲ್ಲಿ ಯಾವುದು ಶ್ರೇಷ್ಠ ಎಂಬ ಚಿಂತನೆ ಶಾಸ್ತ್ರ ಗ್ರಂಥಗಳಲ್ಲಿ ಕಂಡು ಬರುವುದಿಲ್ಲ. ಎರಡೂ ಮಾಸಗಳನ್ನು ಶಾಸ್ತ್ರಕಾರರಾದ ಮುನಿಗಳು ಅಂಗೀಕರಿಸಿ ಆಚರಣೆಗೆ ತಂದಿದ್ದಾರೆ. ದೇವ ಕಾರ್ಯ, ಪಿತೃಕಾರ್ಯಗಳಲ್ಲಿ ಸೌರ ಮಾನ ಅನುಷ್ಠಾನ ಮಾಡುವ ಸಂಪ್ರದಾಯದವರಿಗೆ ಮೇಷ ಸಂಕ್ರಾಂತಿ ಮರುದಿನವೇ ಯುಗಾದಿಯಾದರೆ ಚಾಂದ್ರಮಾನದ ಅನುಷ್ಠಾನದವರಿಗೆ ಚೈತ್ರ ಶುಕ್ಲ ಪ್ರತಿಪದೆಯಂದೇ ಯುಗಾದಿ. ಇದರಲ್ಲಿ ಯಾವುದೇ ವಿರೋಧ ವಿಪರ್ಯಾಸಗಳಿಲ್ಲ. ಜನ್ಮ ದಿನಾಂಕ ರೀತ್ಯಾ ಜನ್ಮ ನಕ್ಷತ್ರ ರೀತ್ಯಾ ಎರಡು ಹುಟ್ಟುಹಬ್ಬ ಬರುವಂತೆ ಎರಡು ಯುಗಾದಿಗಳೂ ಸರಿಯಾಗಿವೆ. ಕರಾವಳಿ ಪ್ರದೇಶದ ಪರಶುರಾಮ ಕ್ಷೇತ್ರದ ಜನರಿಗೆ ಸೌರಮಾಸದ ಅನುಷ್ಠಾನ ಸಂಪ್ರದಾಯವಾಗಿದೆ. ಘಟ್ಟದ ಮೇಲ್ಭಾಗದಲ್ಲಿ ಚಾಂದ್ರಮಾನ ಆಚರಣೆ ಪರಂಪರೆ ಇದೆ.

ಉಷಃಕಾಲದ ಉತ್ಥಾನ
ಯುಗಾದಿ ಬೆಳಗ್ಗೆ ಉಷಃಕಾಲದಲ್ಲಿ ಎದ್ದು (ಸೂರ್ಯೋದಯಕ್ಕಿಂತ ಎರಡು ಗಂಟೆ ಮೊದಲು ಅಂದರೆ ಸುಮಾರು 4.30ಕ್ಕೆ) ಮುಖ ತೊಳೆದು ದೇವರಿಗೆ ನಮಿಸಿ ಮೊದಲು ಕಣಿಯ ದರ್ಶನ ಮಾಡಬೇಕು. ಫ‌ಲ, ಧಾನ್ಯ, ಸುವರ್ಣಾದಿ ಗಳನ್ನು ನೋಡಿ ದೀಪದ ಬೆಳಕಿನಲ್ಲಿ ಕನ್ನಡಿಯಲ್ಲಿ
ಮುಖ ನೋಡಿ ಹಣೆಗೆ ಕುಂಕುಮ ಹಚ್ಚಿಕೊಂಡು ದೇವರಿಗೆ ಪುನಃ ನಮಿಸಿ ಮನೆಯ ಹಿರಿಯರಿ
ಗೆಲ್ಲರಿಗೆ ನಮಿಸಬೇಕು. ಕಣಿಯನ್ನು ನೋಡು
ವಾಗ “ಮಂಗಲಂ ಭಗವಾನ್‌ ವಿಷ್ಣುಃ…,’ “ಸರ್ವಮಂಗಲ ಮಾಂಗಲೆÂà…’ ಶ್ಲೋಕಗಳನ್ನು ಹೇಳುವುದು ಉತ್ತಮ.
ಆ ಬಳಿಕ ಮನೆಯ ಎಲ್ಲ ಸದಸ್ಯರು ತೈಲಾಭ್ಯಂಗ ಸ್ನಾನ ಮಾಡಬೇಕು. ಬಳಿಕ ನೂತನ ವಸ್ತ್ರಧಾರಣೆ ಮಾಡಿ ದೇವರಿಗೂ, ಗುರು ಹಿರಿಯರಿಗೂ ವಂದಿಸ ಬೇಕು. ಬಳಿಕ ಪಂಚಾಂಗ ಶ್ರವಣ ಮಾಡಬೇಕು.

ತುಳುನಾಡಿನ ಕ್ರಮ
ಪಂಚಾಂಗ ಶ್ರವಣ ಬಳಿಕ ಬೇವು-ಬೆಲ್ಲ ತಿನ್ನಲಾಗುತ್ತದೆ. ನಮ್ಮ ತುಳುನಾಡಿನಲ್ಲಿ ಬೇವು ಬೆಲ್ಲಗಳನ್ನು ತಿನ್ನುವ ಸಂಪ್ರದಾಯವಿಲ್ಲ. ಆದರೆ ವಸಂತ ಋತುವಿನ ಉತ್ಪನ್ನಗಳಾದ ನೀರು ಸೌತೆ, ಪೀರೆ, ಹಸಿಗೋಡಂಬಿಗಳನ್ನು ಹಾಕಿ ಕಾಯಿ ಹಾಲಿನ ಪಾಯಸವನ್ನು ಮನೆಯ ಎಲ್ಲ ಸದಸ್ಯರು ಜತೆಯಾಗಿ ಊಟ ಮಾಡುವ ಪದ್ಧತಿ ಆಚರಣೆ ಇದೆ. ಫ‌ಲ ವಸ್ತುಗಳು, ಕಡಲೆ, ಹೆಸರುಗಳಿಂದ ಮಾಡಿದ ಮಧುರ ಪದಾರ್ಥಗಳನ್ನು ದೇವರಿಗೆ ನಿವೇದಿಸಿ ವಸಂತ ಪೂಜೆಯನ್ನು ಮಾಡಿ ಎಲ್ಲರೂ ಒಟ್ಟಿಗೆ ಕುಳಿತು ವಸಂತದ ಮಧುರ ಪದಾರ್ಥಗಳನ್ನು ಪಾನಕ ಸಹಿತ ಸೇವನೆ ಮಾಡುವ ಕ್ರಮ ಜಾರಿಯಲ್ಲಿದೆ.

Advertisement

ಯುಗಾದಿ ಆಚರಣೆ ಹೇಗೆ?
ಯುಗಾದಿ ಆಚರಣೆಯನ್ನು ಒಂದೇ ಶ್ಲೋಕದಲ್ಲಿ ಸಂಗ್ರಹಿಸಿ ಪಂಚಾಂಗಗಳಲ್ಲಿ ಹೀಗೆ ಬರೆದಿದ್ದಾರೆ.
ಪ್ರಾಪೆ¤à ನೂತನವತ್ಸರೇ ಪ್ರತಿಗೃಹಂ
ಕುರ್ಯಾದ್ಧ$Ìಜಂ ತೋರಣಂ
ಸ್ನಾನಂ ಮಂಗಲ ಮಾಚರೇದ್ದಿ$Ì
ಜವರಾನ್‌ ಸಂಪ್ಯೂಜ್ಯ ಭಕಾöಹರಿಮ್‌|
ವೃದ್ಧಾಂಶೆòವ ಗುರೂನ್‌ ಪ್ರಣಮ್ಯ
ಮಹಿಲಾಬಾಲಾನ್‌ ಸ್ವಯಂ ಭೂಷಿತೋ—
ಲಂಕೃತ್ಯಾಂಬರ ಭೂಷಣೈಶ್ಚ ಶೃನು ಯಾತ್‌
ಪುಣ್ಯಂ ಫ‌ಲಂ ವಾರ್ಷಿಕಮ್‌||
ಯುಗಾದಿ ಆಚರಣೆಗಾಗಿ ಹಿಂದಿನ ದಿನವೇ ಮನೆ ಸ್ವತ್ಛ ಗೊಳಿಸಿ ಮಾವಿನ ತಳಿರು ತೋರಣಗಳಿಂದ ಸಿಂಗರಿಸಬೇಕು.

ಕಣಿ ಅಲಂಕಾರ
ಹಿಂದಿನ ದಿನ ರಾತ್ರಿಯೇ ದೇವರ ಮುಂದೆ ಕಣಿಯನ್ನು ಅಲಂಕರಿಸಿಡಬೇಕು. ದೇವರೆದುರು ರಂಗೋಲಿ ಬರೆದು ಹರಿವಾಣದಲ್ಲಿ ಅಕ್ಕಿ, ಸಿಪ್ಪೆ ಇರುವ ತೆಂಗಿನಕಾಯಿ, ವೀಳ್ಯದೆಲೆ ಅಡಿಕೆ, ವಸಂತಋತುವಿನ ಪೀರೆ (ಹೀರೆ), ನೀರು ಸೌತೆ (ಮುಳ್ಳು ಸೌತೆ), ಹಸಿ ಗೋಡಂಬಿ ಮೊದಲಾದ ತರಕಾರಿಗಳನ್ನು ಹರಡಿ ಇದರ ಮೇಲೆ ಹೂವಿನ ಹಾರ ಜತೆಗೆ ಬಂಗಾರದ ಹಾರವನ್ನು ಹಾಕಬೇಕು. ಇದಕ್ಕೆ ಒಂದು ಕನ್ನಡಿಯನ್ನು ಒರಗಿಸಿ ದೇವರಿಗೆ ಅಭಿಮುಖವಾಗಿ ನೋಡುವಾಗ ನಮ್ಮ ಪ್ರತಿಬಿಂಬ ಕಾಣುವಂತೆ ಇಡಬೇಕು. ಇದರ ಜತೆ ಹೊಸ ವರ್ಷದ ಪಂಚಾಂಗ, ಕುಂಕುಮ, ದೀಪವನ್ನು ಇಡಬೇಕು. ಧನಧಾನ್ಯಗಳ ಸಮೃದ್ಧಿಯನ್ನು ಸೂಚಿಸುವ ಈ ಜೋಡಣೆಯನ್ನು ವಿಷು ಹಬ್ಬ ಎಂದು ಕರೆಯಲ್ಪಡುವ ಸೌರ ಯುಗಾದಿಯ “ಕಣಿ’ ಎಂದು ಕರೆಯುತ್ತಾರೆ.

 ಸಂಗ್ರಹ: ಡಾ| ಡಿ. ಶಿವಪ್ರಸಾದ ತಂತ್ರೀ, ಜೋತಿಷ ಸಹ ಪ್ರಾಧ್ಯಾಪಕರು, ಸಂಸ್ಕೃತ ಕಾಲೇಜು, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next