Advertisement

ಹುಳಿ ಕಿತ್ತಳೆಯ ಹಳೆ ರುಚಿ!

08:55 PM Dec 31, 2019 | mahesh |

ಚಳಿಗಾಲ ಆರಂಭವಾಗುತ್ತಿದ್ದಂತೆ, ವಿವಿಧ ಗಾತ್ರದ ಹಸಿರು, ಹಳದಿ, ಕೇಸರಿ ಬಣ್ಣದ ಕಿತ್ತಳೆ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ಕಿತ್ತಳೆ ಹಣ್ಣು ವಿಟಮಿನ್‌ “ಸಿ’ಯ ಆಗರ. ಅದರಲ್ಲಿರುವ ಪೋಷಕಾಂಶಗಳು ಚಳಿಗಾಲದಲ್ಲಿ ಉಂಟಾಗುವ ಶೀತ, ಒಣಚರ್ಮ ಮೊದಲಾದ ಸಮಸ್ಯೆಗಳಿಗೂ ಪ್ರಯೋಜನಕಾರಿ. ಆದರೆ, ಕಿತ್ತಳೆ ಹುಳಿಯಾಗಿದ್ದರೆ ತಿನ್ನಲು ಇಷ್ಟವಾಗದು. ಆ ಹುಳಿ ಕಿತ್ತಳೆಯನ್ನು ಬಳಸಿ ರುಚಿಯಾದ ಅಡುಗೆ ಮಾಡಬಹುದು. ಅಷ್ಟೇ ಅಲ್ಲ, ಕಹಿಯಾಗಿರುವ ಕಿತ್ತಳೆಯ ಸಿಪ್ಪೆಯನ್ನೂ ಅಡುಗೆಯಲ್ಲಿ ಬಳಸಬಹುದು.

Advertisement

1. ದಿಢೀರ್‌ ಸಾರು
ಬೇಕಾಗುವ ಸಾಮಗ್ರಿ: ಹುಳಿ ಕಿತ್ತಳೆ ಹಣ್ಣು- 3, ಹಸಿ ಮೆಣಸಿನಕಾಯಿ- 2, ಸಾರಿನ ಪುಡಿ- 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಬೇಕಿದ್ದರೆ ಚಿಟಿಕೆ ಬೆಲ್ಲ. ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವಿನ ಸೊಪ್ಪು.

ತಯಾರಿಸುವ ವಿಧಾನ: ಕಿತ್ತಳೆ ಹಣ್ಣುಗಳನ್ನು ಅರ್ಧಕ್ಕೆ ಕತ್ತರಿಸಿ, ಒಂದು ಪಾತ್ರೆಗೆ ಹಿಂಡಿ, ಬೀಜ, ಚರಟವನ್ನು ಸೋಸಿ ಇಟ್ಟುಕೊಳ್ಳಿ. ಹಸಿರು ಮೆಣಸಿನಕಾಯಿಗಳನ್ನು ಉದ್ದುದ್ದಕ್ಕೆ ಸೀಳಿ ಇದಕ್ಕೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಬೇಕಿದ್ದರೆ ಸ್ವಲ್ಪ ಬೆಲ್ಲ, ಸಾರಿನ ಪುಡಿ ಸೇರಿಸಿ ಚೆನ್ನಾಗಿ ಕಲಕಿ. ಈ ಮಿಶ್ರಣಕ್ಕೆ ಎಣ್ಣೆ, ಸಾಸಿವೆ, ಕರಿಬೇವು, ಒಣಮೆಣಸು ಸೇರಿದ ಒಗ್ಗರಣೆ ಸೇರಿಸಿದರೆ, ಕಿತ್ತಳೆಹಣ್ಣಿನ ದಿಢೀರ್‌ ಸಾರು ರೆಡಿ. ಅನ್ನದೊಂದಿಗೆ ಉಣ್ಣಲು ಈ ಸಾರು ಚೆನ್ನಾಗಿರುತ್ತದೆ.

(ಕಿತ್ತಳೆ ಹಣ್ಣಿನ ರಸವನ್ನು ಬಿಸಿ ಮಾಡಿದರೆ, ಸತ್ವಾಂಶಗಳು ನಾಶವಾಗುತ್ತವೆ. ಹಣ್ಣಿನ ರಸವನ್ನು ಹಿಂಡಿ ಕೆಲವು ಗಂಟೆಗಳಾದರೆ ಅಥವಾ ಮಿಕ್ಸಿಯಲ್ಲಿ ಕಿತ್ತಳೆಯ ತೊಳೆಗಳನ್ನು ಬೀಜಗಳ ಸಮೇತ ರುಬ್ಬಿದರೆ ರಸ ಕಹಿಯಾಗುತ್ತದೆ. ಹಾಗಾಗಿ ಕಿತ್ತಳೆ ರಸವನ್ನು ಹಿಂಡಿದ ತಕ್ಷಣವೇ ಸಾರು ಮಾಡಿ ಉಣ್ಣುವುದು ಒಳ್ಳೆಯದು.)

2. ಚಿತ್ರಾನ್ನ
ಬೇಕಾಗುವ ಸಾಮಗ್ರಿ: ಹುಳಿ ಕಿತ್ತಳೆ ಹಣ್ಣು- 2, ಅನ್ನ- 4 ಕಪ್‌, ಅರಶಿನ ಪುಡಿ, ಹಸಿ ಮೆಣಸಿನಕಾಯಿ, ಉಪ್ಪು, ಕೊತ್ತಂಬರಿ ಸೊಪ್ಪು. ಒಗ್ಗರಣೆಗೆ: ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕಡಲೇಬೇಳೆ, ಶೇಂಗಾ, ಕರಿಬೇವು.

Advertisement

ತಯಾರಿಸುವ ವಿಧಾನ: ಅನ್ನವನ್ನು ಉದುರಾಗಿ ಮಾಡಿಟ್ಟುಕೊಳ್ಳಿ. ಹಸಿ ಮೆಣಸಿನಕಾಯಿಗಳನ್ನು ಹೆಚ್ಚಿಡಿ. ಕಿತ್ತಳೆ ಹಣ್ಣುಗಳನ್ನು ಹಿಂಡಿ ಬೀಜ, ಚರಟ ಸೋಸಿ. ಬಾಣಲಿಯಲ್ಲಿ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕಡಲೇಬೇಳೆ, ಕಡಲೇಕಾಯಿ, ಕರಿಬೇವು, ಹಸಿ ಮೆಣಸಿನಕಾಯಿ ಸೇರಿಸಿದ ಒಗ್ಗರಣೆ ಮಾಡಿ. ಅದೇ ಬಾಣಲಿಗೆ ಅನ್ನ, ಅರಿಶಿನ ಪುಡಿ, ಉಪ್ಪು ಸೇರಿಸಿ. ಕೊನೆಯದಾಗಿ ಕಿತ್ತಳೆ ರಸ ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಬೆರೆಸಿ.

3. ಸಿಪ್ಪೆಯ ಸಾರು
ಬೇಕಾಗುವ ಸಾಮಗ್ರಿ: ಕಿತ್ತಳೆಯ ಸಿಪ್ಪೆ - ಎರಡು ಹಣ್ಣಿನದ್ದು, ಹುಣಸೆ ಹಣ್ಣು- ಒಂದು ಲಿಂಬೆಹಣ್ಣಿನ ಗಾತ್ರದ್ದು, ಸಾರಿನ ಪುಡಿ- 2 ಚಮಚ, ಹಸಿ ಮೆಣಸಿನಕಾಯಿ-3, ಉಪ್ಪು- ರುಚಿಗೆ ತಕ್ಕಷ್ಟು, ಬೆಲ್ಲ- ಒಂದು ತುಂಡು, ಅರಿಶಿಣ ಪುಡಿ, ನೀರು- 3-4 ಲೋಟ. ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಕರಿಬೇವು.

ತಯಾರಿಸುವ ವಿಧಾನ: ಚೆನ್ನಾಗಿ ಕಳಿತ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ತೊಳೆದು, ಸಣ್ಣದಾಗಿ ಹೆಚ್ಚಿಕೊಳ್ಳಿ. ಹುಣಸೇಹಣ್ಣನ್ನು ಸ್ವಲ್ಪ ನೀರಿನಲ್ಲಿ ನೆನೆಸಿ. ಹಸಿ ಮೆಣಸನ್ನು ಹೆಚ್ಚಿ. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ, ಸಾಸಿವೆ , ಒಣಮೆಣಸು ಮತ್ತು ಕರಿಬೇವಿನ ಸೊಪ್ಪು ಸೇರಿಸಿ ಒಗ್ಗರಣೆ ಮಾಡಿ. ಇದಕ್ಕೆ ಸಣ್ಣಗೆ ಹೆಚ್ಚಿದ ಕಿತ್ತಳೆ ಸಿಪ್ಪೆ, ಅರಿಶಿನ ಪುಡಿ ಸೇರಿಸಿ ಸಣ್ಣ ಉರಿಯಲ್ಲಿ ಬಾಡಿಸಿ. ಸಿಪ್ಪೆಯ ಹೋಳುಗಳು ಬಾಡಿದ ಮೇಲೆ ಹುಣಸೆ ಹಣ್ಣಿನ ರಸ, ಹಸಿ ಮೆಣಸಿನಕಾಯಿ, ಸಾರಿನ ಪುಡಿ, ಉಪ್ಪು, ಬೆಲ್ಲ, ನೀರು ಎಲ್ಲವನ್ನೂ ಸೇರಿಸಿ ಚೆನ್ನಾಗಿ ಕುದಿಸಿದರೆ, ಘಮಘಮಿಸುವ ಹುಳಿ-ಉಪ್ಪು-ಸಿಹಿ-ಕಹಿ ಸಮ್ಮಿಶ್ರ ರುಚಿಯ ಕಿತ್ತಳೆಸಿಪ್ಪೆಯ ಸಾರು ಸಿದ್ಧ. ಬಿಸಿ ಅನ್ನಕ್ಕೆ, ಈ ಸಾರು ಮತ್ತು ತುಪ್ಪ ಹಾಕಿ ಉಣ್ಣಲು ಬಲು ರುಚಿ. ಶೀತ, ಕೆಮ್ಮು. ಜ್ವರ ಇರುವಾಗ ರುಚಿ ಕೆಟ್ಟ ನಾಲಿಗೆಗೆ ಸಾರು ಬಹಳ ಹಿತನಿಸುತ್ತದೆ.

4. ಸಿಪ್ಪೆಯ ಗೊಜ್ಜು
ಬೇಕಾಗುವ ಸಾಮಗ್ರಿ: ಕಿತ್ತಳೆಯ ಸಿಪ್ಪೆ - ಮೂರು ಹಣ್ಣುಗಳಿಂದ ಸುಲಿದದ್ದು, ಹುಣಸೆಹಣ್ಣು- ದೊಡ್ಡ ಲಿಂಬೆಹಣ್ಣಿನಷ್ಟು, ಒಣಮೆಣಸಿಕಾಯಿ -8, ಕಡಲೇಬೇಳೆ- 2 ಚಮಚ, ಉದ್ದಿನ ಬೇಳೆ- 1 ಚಮಚ, ಧನಿಯಾ- 1 ಚಮಚ, ಎಳ್ಳು- 1 ಚಮಚ, ಇಂಗು, ಅರಶಿನ ಪುಡಿ, ಉಪ್ಪು ಮತ್ತು ಬೆಲ್ಲ- ರುಚಿಗೆ ತಕ್ಕಷ್ಟು, ನೀರು- 4 ಕಪ್‌, ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಕರಿಬೇವು.

ತಯಾರಿಸುವ ವಿಧಾನ: ಕಿತ್ತಳೆ ಸಿಪ್ಪೆಯನ್ನು ತೊಳೆದು ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿ. ಮಸಾಲೆ ಸಾಮಗ್ರಿಗಳನ್ನು ಹುರಿದು ಮಿಕ್ಸಿಯಲ್ಲಿ ಪುಡಿ ಮಾಡಿ. ಒಂದು ಪಾತ್ರೆಯಲ್ಲಿ ಕಿವುಚಿದ ಹುಣಸೆಹಣ್ಣಿನ ರಸ ತೆಗೆದಿರಿಸಿ. ಅದಕ್ಕೆ ಉಪ್ಪು, ಬೆಲ್ಲ, ಅರಶಿಣ ಪುಡಿ ಸೇರಿಸಿ ಕುದಿಯಲು ಇಡಿ. ನಂತರ, ತರಿತರಿಯಾಗಿ ರುಬ್ಬಿದ್ದ ಕಿತ್ತಳೆ ಸಿಪ್ಪೆಯನ್ನೂ ಸೇರಿಸಿ, ಸಣ್ಣ ಉರಿಯಲ್ಲಿಟ್ಟು ಸೌಟಿನಿಂದ ಕೈಯಾಡಿಸುತ್ತಾ ಬೇಯಿಸಿ. ಸಿಪ್ಪೆ ಬೆಂದ ಮೇಲೆ ರುಬ್ಬಿದ ಮಸಾಲೆ ಪುಡಿ ಸೇರಿಸಿ. ಈ ಮಿಶ್ರಣವು ಚೆನ್ನಾಗಿ ಕುದ್ದು ಗೊಜ್ಜಿನ ಹದಕ್ಕೆ ಬಂದ ಮೇಲೆ ಒಲೆಯಿಂದ ಕೆಳಗಿಳಿಸಿ, ಒಗ್ಗರಣೆ ಮಾಡಿ. ಇದು ಚಪಾತಿ, ದೋಸೆ, ಇಡ್ಲಿ ಮೊದಲಾದ ತಿಂಡಿಗಳಿಗೆ ನೆಂಚಿಕೊಳ್ಳಲು, ಬಿಸಿ ಅನ್ನದೊಂದಿಗೆ ಉಣ್ಣಲು ಚೆನ್ನಾಗಿರುತ್ತದೆ. ಈ ಗೊಜ್ಜು 5-6 ದಿನಗಳವರೆಗೆ ಕೆಡುವುದಿಲ್ಲ. ಫ್ರಿಡ್ಜ್ನಲ್ಲಿಟ್ಟರೆ ಒಂದು ತಿಂಗಳ ವರೆಗೂ ಕೆಡಲಾರದು.

(ಈ ಎಲ್ಲಾ ಅಡುಗೆಗಳನ್ನು ಸಿಟ್ರಸ್‌ ವರ್ಗಕ್ಕೆ ಸೇರಿದ ಲಿಂಬೆ, ಗಜಲಿಂಬೆ ಹಾಗೂ ಹೆರಳೆಕಾಯಿಗಳನ್ನು ಬಳಸಿಯೂ ತಯಾರಿಸಬಹುದು. ಅಡುಗೆ ಮಾಡುವಾಗ ಆಯಾ ಹಣ್ಣಿನ ರುಚಿ ಗಮನಿಸಿಕೊಂಡು, ಉಪ್ಪು/ಸಿಹಿ/ಹುಳಿ/ಖಾರದ ಪ್ರಮಾಣವನ್ನು ಬದಲಾಯಿಸಬೇಕಾಗುತ್ತದೆ)

-ಹೇಮಮಾಲಾ.ಬಿ

Advertisement

Udayavani is now on Telegram. Click here to join our channel and stay updated with the latest news.

Next