ರಕ್ಷಿತ್ ಶೆಟ್ಟಿ ನಾಯಕರಾಗಿರುವ “ಕಿರಿಕ್ ಪಾರ್ಟಿ’ ದಿನದಿಂದ ದಿನಕ್ಕೆ ಸುದ್ದಿ ಮಾಡುತ್ತಿದೆ. ಯೂತ್ ಎಂಟರ್‌ಟೈನರ್ ಆಗಿ ಪ್ರೇಕ್ಷಕರನ್ನು ಸಂಪಾದಿಸುತ್ತಾ ಮುಂದೆ ಸಾಗುತ್ತಿರುವ ಚಿತ್ರ ಈಗ ಪರರಾಜ್ಯ ಹಾಗೂ ವಿದೇಶಗಳಲ್ಲೂ ಬಿಡುಗಡೆಯಾಗಿದೆ. ಈ ಮೂಲಕ ಎಲ್ಲಾ ಕಡೆಗಳಲ್ಲೂ “ಕಿರಿಕ್’ ಸೌಂಡ್ ಜೋರಾಗಿದೆ ಎಂದರೆ ತಪ್ಪಲ್ಲ. ವಾರದಿಂದ ವಾರಕ್ಕೆ “ಕಿರಿಕ್ ಪಾರ್ಟಿ’ ಹೆಚ್ಚೆಚ್ಚು ಚಿತ್ರಮಂದಿರಗಳನ್ನು ಆವರಿಸಿಕೊಳ್ಳುತ್ತಿದೆ.
ಈಗಾಗಲೇ 10 ಚಿತ್ರಮಂದಿರಗಳನ್ನು ಹೆಚ್ಚಿಸಿದ್ದು, ಮುಂದಿನ ವಾರದಿಂದ ಮತ್ತಷ್ಟು ಚಿತ್ರಮಂದಿರಗಳನ್ನು ಹೆಚ್ಚಿಸುವ ಉದ್ದೇಶ ಕೂಡಾ ಚಿತ್ರತಂಡಕ್ಕಿದೆ. ಇಲ್ಲಿವರೆಗೆ “ಸಿ’ ಸೆಂಟರ್‌ನಲ್ಲಿ “ಕಿರಿಕ್ ಪಾರ್ಟಿ’ ಬಿಡುಗಡೆಯಾಗಿರಲಿಲ್ಲ. ಮುಂದಿನ ವಾರದಿಂದ “ಸಿ’ ಸೆಂಟರ್‌ಗಳು ಕೂಡಾ ಓಪನ್ ಆಗಲಿದ್ದು, ಒಟ್ಟು 200 ಚಿತ್ರಮಂದಿರಗಳಲ್ಲಿ “ಕಿರಿಕ್ ಪಾರ್ಟಿ’ ಪ್ರದರ್ಶನ ಕಾಣಲಿದೆ. ಇನ್ನು, ಕೇವಲ ರಾಜ್ಯವಷ್ಟೇ ಅಲ್ಲದೇ, ಚೆನ್ನೈ, ಕೊಚ್ಚಿಯಲ್ಲೂ ಚಿತ್ರ ಬಿಡುಗಡೆಯಾಗಿದೆ.
ಚೆನ್ನೈನಲ್ಲಿ ವಾರಾಂತ್ಯದಲ್ಲಿ ದಿನವೊಂದಕ್ಕೆ “ಕಿರಿಕ್’ 9 ಪ್ರದರ್ಶನ ಕಾಣುತ್ತಿದ್ದು, ಅಲ್ಲಿಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆಯಂತೆ. ಈಗಾಗಲೇ ದುಬೈನಲ್ಲೂ “ಕಿರಿಕ್ ಪಾರ್ಟಿ’ ಪ್ರದರ್ಶನ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುಕೆ, ಯುರೋಪ್, ಅಮೆರಿಕಾಗಳಲ್ಲೂ ಚಿತ್ರ ಬಿಡುಗಡೆಯಾಗಲಿದೆಯಂತೆ. ಚಿತ್ರದ ಪಾರ್ಟ್‌ನರ್‌ಶಿಪ್ ಪಡೆದಿರುವ ಪುಷ್ಕರ್ ಫಿಲಂಸ್‌ನ ಮಲ್ಲಿಕಾರ್ಜುನ ಪುಷ್ಕರ್ ಹೇಳುವಂತೆ,
ಚಿತ್ರದ ಮೊದಲ ವಾರದ ಗಳಿಕೆ ಒಂಭತ್ತೂವರೆ ಕೋಟಿ ದಾಟಿದ್ದು, ಚಿತ್ರ 30 ಕೋಟಿಗೂ ಅಧಿಕ ಬಿಝಿನೆಸ್ ಮಾಡುವ ಸಾಧ್ಯತೆ ಇದೆಯಂತೆ. “ಮೊದಲ ವಾರದಲ್ಲೇ ನಾವು ಹಾಕಿದ ಬಂಡವಾಳದ ಜೊತೆಗೆ ಲಾಭದಲ್ಲಿದ್ದೇವೆ. ಪುಷ್ಕರ್ ಫಿಲಂಸ್ ಹಾಗೂ ಪರಂವಾ ಸ್ಟುಡಿಯೋ ಇದರಿಂದ ಖುಷಿಯಾಗಿದ್ದು, ಚಿತ್ರ ಮತ್ತಷ್ಟು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ’ ಎನ್ನುತ್ತಾರೆ ಅವರು. “ಕಿರಿಕ್ ಪಾರ್ಟಿ’ ಚಿತ್ರವನ್ನು ರಿಷಭ್ ಶೆಟ್ಟಿ ನಿರ್ದೇಶಿಸಿದ್ದು, ರಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಹಾಗೂ ಸಂಯುಕ್ತಾ ನಾಯಕಿಯರು.