Advertisement

ಸೌಡ ಸೇತುವೆ ಕಾಮಗಾರಿ ನಾಳೆ ಆರಂಭ

01:27 PM Nov 11, 2022 | Team Udayavani |

ಕುಂದಾಪುರ: ಕಳೆದ 2 ದಶಕಗಳಿಂದ ತೀವ್ರ ನಿರೀಕ್ಷೆಯಲ್ಲಿದ್ದ ಸೌಡ ಪರಿಸರದ 4-5 ಗ್ರಾಮ ಪಂಚಾಯತ್‌ ವ್ಯಾಪ್ತಿಯ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ. ಸೌಡ ಸೇತುವೆ ಕಾಮಗಾರಿ ನ. 12ರಂದು ಪ್ರಾರಂಭವಾಗಲಿದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಳ್ಳಿಕಟ್ಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮೂಹಿಕ ಶಿಲಾನ್ಯಾಸ ನಡೆಸಿದ್ದು ಕಾಮಗಾರಿಗೆ ಚಾಲನೆ ದೊರೆತಂತಾಗಿದೆ.

Advertisement

ಹತ್ತಿರದ ದಾರಿ

ವಾರಾಹಿ ನದಿಗೆ ಅಡ್ಡಲಾಗಿ ಸೌಡದಲ್ಲಿ ಸೇತುವೆ ರಚನೆಯಾದರೆ ಹಾರ್ದಳ್ಳಿ ಮಂಡಳ್ಳಿ, ಮೊಳಹಳ್ಳಿ, ಹೊಂಬಾಡಿ ಮಂಡಾಡಿ ಗ್ರಾ.ಪಂ. ವ್ಯಾಪ್ತಿಯವರಿಗೆ 8 ಕಿ.ಮೀ. ಹತ್ತಿರವಾಗುತ್ತದೆ. ಶಂಕರನಾರಾಯಣ ಮೂಲಕ ಬ್ರಹ್ಮಾವರ ಕುಂದಾಪುರಕ್ಕೆ ತೆರಳಲು 8 ಕಿ. ಮೀ. ಹತ್ತಿರವಾಗುತ್ತದೆ ಎನ್ನುವ ಹಿನ್ನೆಲೆಯಲ್ಲಿ ಸೌಡ ಸೇತುವೆ ಮಂಜೂರಾತಿಗೆ ಕಳೆದ 20 ವರ್ಷಗಳಿಂದ ಮಂಜೂರಾತಿಗೆ ಪ್ರಯತ್ನಿಸಲಾಗಿತ್ತು.

ಹೋರಾಟ

ಶಂಕರನಾರಾಯಣ ಉಪ ನೋಂದಣಿ ಕಚೇರಿ ವ್ಯಾಪ್ತಿಯಲ್ಲಿ ಬರುವ ಸೌಡ, ಹಾರ್ದಳ್ಳಿ – ಮಂಡಳ್ಳಿ, ಮೊಳಹಳ್ಳಿ, ಯಡಾಡಿ- ಮತ್ಯಾಡಿ ಮತ್ತಿತರ ಭಾಗದ ಜನ ಸೇತುವೆಯಿಲ್ಲದೆ ಹಾಲಾಡಿ ಮೂಲಕ ಸುತ್ತು ಬಳಸಿ, 10 ಕಿ.ಮೀ. ಹೆಚ್ಚುವರಿ ಸಂಚಾರ ನಡೆಸಬೇಕಾಗಿದೆ. ಈ ಸೇತುವೆಗಾಗಿ ಶಂಕರನಾರಾಯಣ ತಾಲೂಕು ಹೋರಾಟ ಸಮಿತಿ, ಸೌಡ ಮತ್ತಿತರ ಊರುಗಳ ಸಂಘಟನೆಯವರು, ರಾಜಕೀಯ ಪಕ್ಷದವರು, ಸಾರ್ವಜನಿಕರು ಕಳೆದ 30 ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದಾರೆ.

Advertisement

ಶಿಫಾರಸು

ಅಂದಿನ ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಅವರು 2016ರಲ್ಲಿ ಅಂದಿನ ಕೇಂದ್ರ ಸಚಿವ ಆಸ್ಕರ್‌ ಫೆರ್ನಾಂಡಿಸ್‌ ಅವರ ಮೂಲಕ ಮಂಜೂರಾತಿ ಮಾಡಿಸಿದ್ದರೂ ಕೊನೇ ಕ್ಷಣದಲ್ಲಿ ಸಿಆರ್‌ಎಫ್1ನೇ ಹಂತದ ಪಟ್ಟಿಯಲ್ಲಿ ಸೇತುವೆ ಹೆಸರು ಕೈ ಬಿಟ್ಟು ಹೊಯಿತು. ಆ ಸಂದರ್ಭದಲ್ಲಿ ಅಂದಿನ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರೂ ಸೇತುವೆ ನಿರ್ಮಾಣಕ್ಕೆ ಶಿಫಾರಸು ಮಾಡಿದ್ದರು.

ಎರಡನೇ ಪ್ರಯತ್ನ

ಸಿಆರ್‌ಎಫ್ – 2ನೇ ಹಂತದಲ್ಲಿ ಮಂಜೂರಾತಿ ವಿಳಂಬವಾಗುತ್ತದೆ ಎಂದು ತತ್‌ಕ್ಷಣ ವಿಧಾನ ಪರಿಷತ್‌ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಅವರು ಲೋಕೋಪಯೋಗಿ ಸಚಿವರಾಗಿದ್ದ ಡಾ| ಎಚ್‌.ಸಿ. ಮಹಾದೇವಪ್ಪ ಅವರ ಮೂಲಕ ಕೆಆರ್‌ಡಿಸಿಎಲ್‌ ನಲ್ಲಿ ಸೌಡ ಸೇತುವೆಗೆ 7 ಕೋ. ರೂ. ಮಂಜೂರು ಮಾಡಿಸಿದರು. ಟ್ರಾಯಲ್‌ ಬೋರ್‌ ತೆಗೆದು ಅಂದಾಜು ಪಟ್ಟಿ ತಯಾರಾಗುವ ಹಂತದಲ್ಲಿ ಆಸ್ಕರ್‌ ಫೆರ್ನಾಂಡಿಸ್‌ ಅವರು ಕೇಂದ್ರ ಹೆದ್ದಾರಿ ಭೂ ಸಾರಿಗೆ ಸಚಿವರಾದರು. ಒಂದು ತಿಂಗಳಲ್ಲಿ ಸಿಆರ್‌ಎಫ್ -2 ರಲ್ಲಿ ಸೌಡ ಸೇತುವೆಗೆ 7 ಕೋ.ರೂ. ಮಂಜೂರಾತಿ ಆಯ್ತು.

ಬಾಯಿಗೆ ಬರದ ತುತ್ತು

ಒಂದೇ ಕಡೆಗೆ 2 ಸೇತುವೆ ಮಂಜೂರಾದ ಬಗ್ಗೆ ಇಲಾಖಾ ಮಟ್ಟದಲ್ಲಿ ಚರ್ಚೆಯಾಗಿ ಕೊನೆಗೆ ಕೇಂದ್ರದ ಸಿಆರ್‌ಎಫ್- 2ರ ಅನುದಾನದಲ್ಲಿ ಸೇತುವೆ ಅಂದಾಜು ಪಟ್ಟಿ ಟೆಂಡರ್‌ ಕರೆಯಲು ಲೋಕೊಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೂಚಿಸಿದರು. ಟೆಂಡರ್‌ ಪ್ರಕ್ರಿಯೆ ನಡೆದು ಗುತ್ತಿಗೆದಾರರು ಕರಾರು ಮಾಡಿಕೊಳ್ಳದೇ ಇರುವುದರಿಂದ ಟೆಂಡರ್‌ ರದ್ದಾಯಿತು.

ಮೂರನೇ ಪ್ರಯತ್ನ

ಅನಂತರ ಬೈಂದೂರು ಶಾಸಕರಾಗಿ ಆಯ್ಕೆಯಾದ ಬಿ.ಎಂ. ಸುಕುಮಾರ್‌ ಶೆಟ್ಟಿ ಅವರು ಮುತುವರ್ಜಿ ವಹಿಸಿ ಇಲಾಖಾ ಮೂಲಕ ಅಂದಾಜು ಪಟ್ಟಿ ಪರಿಷ್ಕರಿಸಿ ನಬಾರ್ಡ್‌ ನಲ್ಲಿ ಮಂಜೂರಾತಿ ಹಂತದಲ್ಲಿದ್ದಾಗ ಬ್ರಹ್ಮಾವರ-ಜನ್ನಾಡಿ-ಸೌಡ- ಶಂಕರನಾರಾಯಣ- ತಿರ್ಥಹಳ್ಳಿ ರಸ್ತೆ ಮೇಲ್ದ ರ್ಜೆಯಾಗಿ “ರಾಜ್ಯ ಹೆದ್ದಾರಿ’ಯಾಯಿತು. ಇದರಿಂದ ರಾಜ್ಯ ಹೆದ್ದಾರಿ ಗುಣಮಟ್ಟಕ್ಕೆ ಅನುಗುಣವಾಗಿ ಸೇತುವೆ ಅಗಲಗೊಳಿಸಲು 8 ಕೋ.ರೂ. ಬದಲಿಗೆ 16 ರಿಂದ 17 ಕೋ.ರೂ. ಅನುದಾನ ಅಗತ್ಯವಿತ್ತು. ಅದೀಗ ಮಂಜೂರಾಗಿ ಕಾಮಗಾರಿ ಆರಂಭವಾಗಲಿದೆ.

ಎರಡು ಕ್ಷೇತ್ರಗಳಿಗೆ ಸಂಬಂಧ

ಪ್ರಸ್ತಾವಿತ ಸೌಡ-ಶಂಕರನಾರಾಯಣ ಸೇತುವೆ ನಿರ್ಮಾಣ ಪ್ರದೇಶದಲ್ಲಿ ವಾರಾಹಿ ನದಿ ಪಾತ್ರದ ಒಂದು ದಡವು ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರಲ್ಲಿ ಹಾಗೂ ಇನ್ನೊಂದು ತೀರವು ಉಡುಪಿ-ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯ ಕುಂದಾಪುರದಲ್ಲಿದೆ.

ಅಭಿನಂದನೆಗಳು: ಸೇತುವೆ ಮಂಜೂರಾತಿ ಪ್ರಕ್ರಿಯೆಗಳಲ್ಲಿ ಅಹರ್ನಿಶಿ ದುಡಿದ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರಿಗೆ ಸೌಡ ಮತ್ತು ಅದರರಿಂದ ಪ್ರಯೋಜನವಾಗಲಿರುವ ಸಹಸ್ರಾರು ನಾಗರಿಕರ ಪರವಾಗಿ ರಾಜಕೀಯ ಮೀರಿ ನನ್ನ ಅಭಿನಂದನೆಗಳು. –ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ ಮಾಜಿ ಅಧ್ಯಕ್ಷರು, ಗ್ರಾ.ಪಂ. ಹಾರ್ದಳ್ಳಿ ಮಂಡಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next