ಸೊರಬ: ಗ್ರಾಮೀಣ ಪ್ರದೇಶದ ರಸ್ತೆಗಳು ಅಧಿಕ ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಲಾಗಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.
ತಾಲೂಕಿನ ಪುಟ್ಟನಹಳ್ಳಿ, ತವನಂದಿ, ತುಮರಿಕೊಪ್ಪ ಹಾಗೂ ಬಾಸೂರು ಗ್ರಾಮದಲ್ಲಿ 8 ಕೋಟಿ ರೂ. ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಕಳೆದ ನಾಲ್ಕು ವರ್ಷಗಳಿಂದ ಅನಾವೃಷ್ಟಿಯಿಂದ ರೈತರು ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವಾಗಲೇ ಮತ್ತೆ ಈ ಬಾರಿ ಅತಿವೃಷ್ಟಿಯಿಂದ ತೀವ್ರ ನಷ್ಟ ಅನುಭವಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿನ ರಸ್ತೆಗಳು ಮಳೆಗೆ ಸಂಪೂರ್ಣ ಹಾಳಾಗಿದ್ದು, ತ್ವರಿತಗತಿಯಲ್ಲಿ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ. ಹೊಸ ರಸ್ತೆಗಳಿಗೆ ಡಾಂಬರೀಕರಣ ಸೇರಿದಂತೆ ಬಾಕಿ ಉಳಿದಿರುವ ರಸ್ತೆಗಳನ್ನು ಮುಂದಿನ ಒಂದು ವರ್ಷದೊಳಗಾಗಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ತಾಲೂಕಿನ ಗಡಿ ಪ್ರದೇಶ ಸೇರಿದಂತೆ ವಿವಿಧ ಗ್ರಾಮದ ಜನರು ಚಂದ್ರಗುತ್ತಿ ಹಾಗೂ ಗುಡವಿ ಪಕ್ಷಿಧಾಮಗಳಿಗೆ ಸುಲಭವಾಗಿ ಬಂದು ಹೋಗುವ ನಿಟ್ಟಿನಲ್ಲಿ ಸರಪಳಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ಈ ಮೂಲಕ ಸಿದ್ದಾಪುರ, ಬನವಾಸಿ ಶಿರಸಿ ತಾಲೂಕು ಕೇಂದ್ರಗಳಿಗೂ ರಸ್ತೆ ಸಂಪರ್ಕ ಕೊಂಡಿ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
ತಾಲೂಕಿನ ಏತ ನೀರಾವರಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಆಯಾ ಭಾಗದಲ್ಲಿ ರೈತರ ಸಭೆ ಕರೆದು ಸಮಾಲೋಚನೆ ನಡೆಸಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆ ಪ್ರಾರಂಭಿಸಲಾಗುವುದು. ತಾಲೂಕಿನ ಬಾಸೂರು ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 30ಎಕರೆ ಜಮೀನಿಗೆ ನೀರು ಆವರಿಸಿ 28 ರೈತರಿಗೆ ಕಳೆದ 20ವರ್ಷಗಳಿಂದ ಬೆಳೆ ಕೈಸೇರಿಲ್ಲ. ಕೆರೆ ಹೂಳೆತ್ತಲು ಅನುದಾನ ಬಿಡುಗಡೆಯಾಗಿದೆ ಎಂದಿದ್ದೀರಿ. ಇಲ್ಲಿಯವರೆಗೂ ಏಕೆ ಕೆರೆ ಹೂಳೆತ್ತಲು ಪ್ರಾರಂಭಿಸಿಲ್ಲ ಎಂದು ಪುಟ್ಟನಹಳ್ಳಿ ಗ್ರಾಮದ ರೈತ ಶಂಕರಪ್ಪಗೌಡ ಶಾಸಕರ ಗಮನಕ್ಕೆ ತಂದರು.
ತಾಪಂ ಸದಸ್ಯ ಪುರುಷೋತ್ತಮ್, ಕುಪ್ಪಗಡ್ಡೆ ಗ್ರಾಪಂ ಅಧ್ಯಕ್ಷ ಚಂದ್ರಪ್ಪ ಕೊಪ್ಪ, ಸದಸ್ಯರಾದ ಮಹಮದ್ ಖಾಸಿಂ, ಆರ್ .ಟಿ. ನಾಯಕ್, ಮಂಜುನಾಥ ಹೆಗಡೆ, ಗುರುಪ್ರಸನ್ನಗೌಡ, ಗಣಪತಿ ಕುಳಗ ಇದ್ದರು.