Advertisement

ಸೊರಬದಲ್ಲಿ ಸಾಂಕ್ರಾಮಿಕ ರೋಗ ಭೀತಿ

12:00 PM Jul 29, 2019 | Naveen |

ಎಚ್.ಕೆ.ಬಿ. ಸ್ವಾಮಿ
ಸೊರಬ:
ನಿರಂತರವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆ, ಕೆಲವಡೆ ಸಮರ್ಪಕವಾಗಿ ಚರಂಡಿ ನೀರು ಹರಿಯದ ಪರಿಣಾಮ ಪಟ್ಟಣದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಜನತೆ ಸಾಂಕ್ರಾಮಿಕ ರೋಗಗಳ ಭಯದಲ್ಲಿ ಜೀವಿಸುವಂತಾಗಿದೆ. ಆದರೆ, ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಾದ ಸ್ಥಳೀಯ ಪಟ್ಟಣ ಪಂಚಾಯತ್‌ ಅಧಿಕಾರಿಗಳು ಮಾತ್ರ ಯಾವುದರ ಪರಿವೇ ಇಲ್ಲದೆ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಮಳೆ ಬಂತೆಂದರೆ ಸಮರ್ಪಕವಾಗಿ ನೀರು ಹರಿಯದೇ ನಿಂತಲ್ಲೇ ನಿಂತು ಸೊಳ್ಳೆಗಳ ಉಗಮಕ್ಕೆ ಕಾರಣವಾಗುತ್ತದೆ. ಪ್ರಮುಖವಾಗಿ ಸಾಂಕ್ರಾಮಿಕ ರೋಗಗಳಾದ ಡೆಂಘೀ, ಚಿಕೂನ್‌ಗುನ್ಯಾ, ವೈರಲ್ ಫೀವರ್‌ ಸೇರಿದಂತೆ ಅನೇಕ ರೋಗಗಳಿಗೆ ಸೊಳ್ಳೆಗಳು ಆಹ್ವಾನ ನೀಡುತ್ತಿವೆ. ಪಟ್ಟಣದ ಕೆಲ ವಾರ್ಡ್‌ಗಳಲ್ಲಿ ಈಗಾಗಲೇ ಕೆಲವರು ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಸಾರ್ವಜನಿಕರು ಮಾತ್ರ ಆತಂಕದಲ್ಲಿಯೇ ಬದುಕು ಸಾಗಿಸುವಂತಾಗಿದೆ.

ಸರಾಗವಾಗಿ ಹರಿಯದ ನೀರು: ಕಟ್ಟಡ ನಿರ್ಮಾಣ ಪ್ರದೇಶ, ಖಾಲಿ ನಿವೇಶನಗಳು, ಚರಂಡಿಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಇದೆ. ಜನತೆ ಸೊಳ್ಳೆ ಪರದೆ, ಬತ್ತಿ, ಸ್ಪ್ರೇಗಳ ನಡುವೆ ಜೀವನ ಮಾಡುವಂತಾಗಿದೆ. ಸುಮಾರು 15 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದ 12 ವಾರ್ಡ್‌ಗಳ ಪೈಕಿ ಬಹುತೇಕ ಎಲ್ಲಾ ವಾರ್ಡ್‌ಗಳಲ್ಲೂ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತಿದೆ. ಪಟ್ಟಣದ ಚಿಕ್ಕಪೇಟೆ, ಮುಖ್ಯರಸ್ತೆ, ಸೊಪ್ಪಿನ ಕೇರಿ, ಹಿರೇಶಕುನ, ಚಾಮರಾಜಪೇಟೆ, ಕಾನಕೇರಿ ಬಡಾವಣೆಗಳಲ್ಲಿ ಸೊಳ್ಳೆಗಳು ಹೆಚ್ಚಾಗಿ ಕಂಡು ಬರುತ್ತಿದ್ದರೂ, 11ನೇ ವಾರ್ಡ್‌ನ ಅಂಬೇಡ್ಕರ್‌ ಬಡಾವಣೆಯಲ್ಲಿ ಜನರ ಸಮಸ್ಯೆ ಹೇಳತೀರದು. ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ, ಚರಂಡಿ ನೀರು ಸರಾಗವಾಗಿ ಹರಿಯುತ್ತಿಲ್ಲ.

ಕೇಂದ್ರ ಸ್ಥಾನದಲ್ಲಿರದ ಮುಖ್ಯಾಧಿಕಾರಿ: ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಆರೋಗ್ಯ ಅಧಿಕಾರಿಗಳು ನೈರ್ಮಲ್ಯದ ಕಡೆ ಗಮನ ಕೊಡುತ್ತಿಲ್ಲ. ಹೀಗಾಗಿ ಸೊಳ್ಳೆಗಳು ಹೆಚ್ಚಾಗುತ್ತಿದೆ. ಜನರಿಗೆ ರೋಗದ ಭೀತಿ ಎದುರಾಗಿದೆ. ಪಪಂ ಮುಖ್ಯಾಧಿಕಾರಿಯಂತೂ ಗುತ್ತಿಗೆ ಆಧಾರಿತ ನೌಕರನೊಬ್ಬನ ಅಧಿಧೀನ ಅಧಿಕಾರಿಯಂತೆ ವರ್ತಿಸುತ್ತಾರೆ. ಕಸ ವಿಲೇವಾರಿ, ಸ್ವಚ್ಛತೆ ಮತ್ಯಾವುದಕ್ಕೂ ಗಮನ ನೀಡುವುದಿಲ್ಲ. ಪಪಂನಲ್ಲಿ ಈವರೆಗೂ ಜನಪ್ರತಿನಿಧಿಗಳು ಆಗಮಿಸಲು ಸಾಧ್ಯವಾಗದೇ ಇರುವುದು ಇಲ್ಲಿನ ಮುಖ್ಯಾಧಿಕಾರಿ ಆಡಿದ್ದೇ ಆಟ ಎನ್ನುವಂತಾಗಿದೆ ಎಂಬುದು ಸಾರ್ವಜನಿಕರ ಗಂಭೀರ ಆರೋಪವಾಗಿದೆ.

ಫಾಗಿಂಗ್‌ ಕೇಳಲೇಬೇಡಿ: ಮಳೆಗಾಲದಲ್ಲಿ ಕೊಳಚೆ ಪ್ರದೇಶ ಹಾಗೂ ಸೊಳ್ಳೆ ಉತ್ಪತ್ತಿ ಹೆಚ್ಚಿರುವ ಪ್ರದೇಶದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್‌ ಮಾಡುವುದು ಪಪಂನ ಪ್ರಮುಖ ಕರ್ತವ್ಯ. ಆದರೆ, ಈ ವರ್ಷ ಆ ಕೆಲಸವನ್ನು ಸ್ಥಳೀಯ ಆಡಳಿತ ಮರೆತಂತೆ ಕಾಣುತ್ತಿದೆ. ಹೀಗಾಗಿ ಸೊಳ್ಳೆಗಳ ಪ್ರಮಾಣ ವಿಪರೀತ ಜಾಸ್ತಿಯಾಗಲು ಪ್ರಮುಖ ಕಾರಣವಾಗಿದೆ. ಈ ನಡುವೆ ಕಸಿಮಾವಿನಕೊಪ್ಪಲಿನಲ್ಲಿ ವ್ಯಕ್ತಿಯೊಬ್ಬರು ಡೆಂಘೀ ಜ್ವರಕ್ಕೆ ತುತ್ತಾಗಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಪಪಂ ಅಧಿಕಾರಿಗಳು ಹೇಳ್ಳೋದೇನು?
ಸೊಳ್ಳೆಗಳ ನಿಯಂತ್ರಣಕ್ಕಾಗಿ ಪಪಂನಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ಗುರುತಿಸಿ ಔಷಧ ಸಿಂಪಡಣೆ, ಫಾಗಿಂಗ್‌ ಮಾಡಲಾಗುವುದು. ಪ್ರತಿ ವಾರ್ಡ್‌ಗಳಲ್ಲಿ ಪೌರ ಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ. ದೂರು ಬಂದ ಕಡೆಗಳಲ್ಲಿ ಸಮೀಕ್ಷೆ ನಡೆಸಿ ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುತ್ತಾರೆ. ವಾಸ್ತವಾಗಿ ಪಟ್ಟಣದ 8ನೇ ವಾರ್ಡ್‌ನಲ್ಲಿ ಮಾತ್ರ ಆಶಾ ಕಾರ್ಯಕರ್ತೆಯರು ಜನತೆಯಲ್ಲಿ ಜಾಗೃತಿ ಮೂಡಿಸಿದ್ದಾರೆ. ಇದನ್ನು ಹೊರತುಪಡಿಸಿ ಇನ್ಯಾವುದೇ ವಾರ್ಡ್‌ಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಪಪಂ ಅಧಿಕಾರಿಗಳು ಮುಂದಾಗಿಲ್ಲ.

ರಾತ್ರಿ ವೇಳೆಯಲ್ಲಿ ಸೊಳ್ಳೆ ಪರದೆ ಕಟ್ಟಿಕೊಂಡು ಮಲಗಬಹುದು. ಆದರೆ, ಹಗಲಿನ ವೇಳೆಯಲ್ಲಿಯೇ ಸೊಳ್ಳಗಳ ಕಾಟ ವಿಪರೀತವಾಗಿದೆ. ಸಾಂಕ್ರಾಮಿಕ ರೋಗಗಳ ಭಯದಲ್ಲಿಯೇ ಜೀವನ ಸಾಗಿಸುವಂತ ಸ್ಥಿತಿ ನಿರ್ಮಾಣವಾಗಿದೆ.
ಶಿವಕುಮಾರ್‌, ಸ್ಥಳೀಯ ನಿವಾಸಿ.

Advertisement

Udayavani is now on Telegram. Click here to join our channel and stay updated with the latest news.

Next