ಸೊರಬ: ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ರೈತರ ಬೆಳೆ ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿಗೊಳಗಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ 15.67 ಕೋಟಿ ರೂ. ನೆರೆ ಹಾವಳಿಯಿಂದ ನಷ್ಟ ಉಂಟಾಗಿದೆ ಎಂದು ಪಪಂ ಅಧಿಕಾರಿಗಳು ತಾಲೂಕು ಆಡಳಿತಕ್ಕೆ ವರದಿ ಸಲ್ಲಿಸಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿ, ಚರ್ಚೆಗೆ ಗ್ರಾಸವಾಗಿದೆ.
ಕೃಷಿ ಇಲಾಖೆ, ತಾಪಂ, ಪಿಡಬ್ಲ್ಯುಡಿ ಇಲಾಖೆ, ಮೆಸ್ಕಾಂ ಇಲಾಖೆಗಳು ಸೇರಿ ವಿವಿಧ ಇಲಾಖೆಗಳು ವರದಿ ತಯಾರಿಸಿದ್ದು, ಇಲಾಖೆವಾರು ತಾಲೂಕು ಆಡಳಿತದಿಂದ ಪ್ರಸಕ್ತ ಸಾಲಿನ ಪ್ರಕೃತಿ ನೆರೆ ಹಾವಳಿಯಿಂದ ಉಂಟಾದ ಆಸ್ತಿ-ಪಾಸ್ತಿ ಹಾನಿಯಾದ ಕ್ರೋಢೀಕೃತ ಮಾಹಿತಿ ಸಲ್ಲಿಸಲಾಗಿದೆ. ವರದಿಯಲ್ಲಿ ಸುಮಾರು 1 ನೂರು ಕೋಟಿ ರೂ.ಗಳಿಗೂ ಅಧಿಕ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎಂದು ಪ್ರಾಥಮಿಕ ವರದಿ ಸಲ್ಲಿಸಲಾಗಿದೆ. ಇಲ್ಲಿನ ಪಪಂನಿಂದ ತಾಲೂಕು ಆಡಳಿತಕ್ಕೆ ನೀಡಿದ ವರದಿಯಲ್ಲಿ 15.67 ಕೋಟಿ ರೂ., ನೆರೆ ಹಾವಳಿಯಿಂದ ನಷ್ಟವಾಗಿದೆ ಎಂದು ತಿಳಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಕಳಪೆ ಕಾಮಗಾರಿಗೆ ಶುಕ್ರದೆಸೆ: ಪಟ್ಟಣದ ಕೆಲ ವಾರ್ಡ್‌ಗಳಲ್ಲಿ ವಿವಿಧ ಯೋಜನೆಗಳಡಿ ಕೆಲ ವರ್ಷಗಳ ಹಿಂದೆ ಡಾಂಬಾರು ರಸ್ತೆ, ಸಿಸಿ ರಸ್ತೆ, ಚರಂಡಿ ಮತ್ತಿತರರ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿತ್ತು. ಅಂದು ಕೆಲ ವಾರ್ಡ್‌ಗಳಲ್ಲಿ ಕಳಪೆ ಕಾಮಗಾರಿಯಾಗುತ್ತಿದೆ, ಗುಣಮಟ್ಟದ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ ಸಾಕಷ್ಟು ನಿದರ್ಶನಗಳಿದ್ದವು. ಪಪಂ ವತಿಯಿಂದ ನೆಡಸಿದ ಕಾಮಗಾರಿಗಳಲ್ಲಿ ಬಹುತೇಕ ಕಳಪೆಯಾಗಿದ್ದರೂ, ಸಂಬಂಧಪಟ್ಟ ಗುತ್ತಿಗೆದಾರರಿಗೆ ಬಿಲ್ ಪಾವತಿಸಿ ವರುಷಗಳೇ ಉರುಳಿದೆ. ಇಂತಹ ಕೆಲ ಕಾಮಗಾರಿಗಳು ನೆಲಕಚ್ಚಿ ಹೋಗಿರುವುದು ನೆರೆ ಹಾವಳಿಯಿಂದಲೇ ಹಾನಿಯಾಗಿದೆ ಎಂದು ಪಪಂ ಸಲ್ಲಿಸಿದ ವರದಿ ದೋಷಪೂರಿತವಾಗಿದೆ. ಕಳಪೆ ಕಾಮಗಾರಿಗಳನ್ನು ಮುಚ್ಚಿಹಾಕಲು ತಾಲೂಕಿನಲ್ಲಿ ಸುರಿದ ಮಳೆ ಅಧಿಕಾರಿಗಳಿಗೆ ಶುಕ್ರದೆಸೆ ತಂದಿದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.
ಬರೋಬ್ಬರಿ 15 ಕೋಟಿ ಹಾನಿ!: ಪಟ್ಟಣ ಪಂಚಾಯತ್ ವ್ಯಾಪ್ತಿಯ ಡಾಂಬಾರು ರಸ್ತೆ 2.85 ಕೋಟಿ ರೂ, ಕಾಂಕ್ರೀಟ್ ರಸ್ತೆ 76 ಲಕ್ಷ ರೂ., ಮಣ್ಣಿನ ಚರಂಡಿ 3.20 ಕೋಟಿ ರೂ., ಕಾಂಕ್ರೀಟ್ ತಡೆಗೋಡೆ 50 ಲಕ್ಷ ರೂ., ಜಲ್ಲಿ ರಸ್ತೆ 3.69 ಕೋಟಿ ರೂ., ಹಾಗೂ ಗಂಧದ ಕಾಂಪ್ಲೆಕ್ಸ್ ಸಮೀಪದಲ್ಲಿ ಡಾಂಬರ್ ರಸ್ತೆ ಹಾಗೂ ಚಪ್ಪಡಿ ಚರಂಡಿ ಹಾಳಾಗಿದ್ದು ಸುಮಾರು 60 ಲಕ್ಷ ರೂ., ಹಾನಿಯಾಗಿದೆ. ಉಳಿದಂತೆ ಪಪಂ ಆಡಳಿತಕ್ಕೊಳಪಡುವ ಹೊಳೆ ಜೋಳದಗುಡ್ಡೆ ಜಾಕ್‌ವೆಲ್ ಬಳಿಯ ಪುಟ್ ಬಿಡ್ಜ್ ಹಾನಿಯಾಗಿದ್ದು ಸುಮಾರು 80 ಲಕ್ಷ ರೂ., ನಷ್ಟವಾಗಿದೆ ಎಂದು ವರದಿ ಸಲ್ಲಿಸಲಾಗಿದೆ.
ತಜ್ಞರ ವರದಿಯೇ ಸಂಶಯ?: ನೆರೆ ಹಾಗೂ ಮಳೆಯಿಂದ ಹಾನಿಯಾದ ವರದಿ ತಯಾರಿಕೆಯನ್ನು ಸಂಬಂಧಪಟ್ಟ ತಜ್ಞ ಅಭಿಯಂತರರು ಸಿದ್ಧಪಡಿಸಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ದುರಸ್ತಿಯನ್ನು ಎದುರು ನೋಡುತ್ತಿದ್ದ ರಸ್ತೆ-ಚರಂಡಿಗಳು ವರದಿಯಲ್ಲಿ ಸೇರ್ಪಡೆಯಾಗಿರುವುದರ ಹಿಂದೆ ಭ್ರಷ್ಟಾಚಾರದ ವಾಸನೆ ಬಡಿಯುತ್ತಿದೆ. ಪಟ್ಟಣದ ಸಾಗರ ರಸ್ತೆಯ ಎರಡು ಭಾಗದ ರಾಜಕಾಲುವೆ ಮಳೆಯಿಂದ ಹಾನಿಯಾಗಿದ್ದು, 80 ಲಕ್ಷ ರೂ., ನಷ್ಟವಾಗಿದೆ ಹಾಗೂ ಬೀದಿ ದೀಪ ಮತ್ತು ವಿದ್ಯುತ್ ಲೈನ್‌ಗೆ ಸುಮಾರು 20 ಲಕ್ಷ ರೂ. ನಷ್ಟವಾಗಿದೆ ಎಂದು ವರದಿ ಸಲ್ಲಿಸಲಾಗಿದೆ.
ಒಟ್ಟಾರೆ ಸ್ಥಳೀಯ ಪಪಂ ಸಲ್ಲಿಸಿದ ಮಳೆ ಹಾನಿ ವರದಿಯೂ ಅಭಿವೃದ್ಧಿಗೋ ಅಥವಾ ಕಳಪೆ ಕಾಮಗಾರಿಗಳನ್ನು ಮುಚ್ಚಿಹಾಕುವ ಪ್ರಯತ್ನವೇ?. ಅಥವಾ ಕಾಟಾಚಾರಕ್ಕೆ ಸಲ್ಲಿಸಿದ ವರದಿಯೇ ಎಂಬುದನ್ನು ಸಂಬಂಧಪಟ್ಟ ಇಲಾಖಾ ಮೇಲಧಿಕಾರಿಗಳು ಖುದ್ದು ಪರಿಶೀಲನೆ ನಡೆಸಿ, ಲೋಪಯುಕ್ತ ವರದಿ ತಯಾರಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.