Advertisement

ಮತ್ತೆ ಚಿಗುರಿದ ಆನವಟ್ಟಿ ತಾಲೂಕು ಆಸೆ

12:17 PM Aug 28, 2019 | Naveen |

ಸೊರಬ: ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವೆಂದೇ ಗುರುತಿಸಿಕೊಂಡ ಆನವಟ್ಟಿ ತಾಲೂಕು ಕೇಂದ್ರ ರಚಿಸುವಂತೆ ಸಾರ್ವಜನಿಕರ ಒತ್ತಾಯ ಹೆಚ್ಚುತ್ತಿದ್ದು, ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಈ ಭಾಗದ ಜನರಲ್ಲಿ ಮತ್ತೆ ತಾಲೂಕು ಕೇಂದ್ರ ಘೋಷಣೆಯಾಗುವ ವಿಶ್ವಾಸ ಹೆಚ್ಚಿದೆ.

Advertisement

ಹೌದು, ಜಿಲ್ಲೆಯಲ್ಲಿ ದೊಡ್ಡ ಗ್ರಾಮ ಪಂಚಾಯ್ತಿಗಳಲ್ಲೊಂದಾದ ಆನವಟ್ಟಿಯನ್ನು ತಾಲೂಕು ಕೇಂದ್ರವಾಗಿ ರಚಿಸುವಂತೆ ದಶಕಗಳಿಂದ ಹೋರಾಟ ನಡೆಯುತ್ತಿದ್ದು, 150 ಗ್ರಾಮಗಳನ್ನೊಳಗೊಳ್ಳವ ಕೇಂದ್ರವು ಆಡಳಿತಾತ್ಮಕವಾಗಿ ಸರ್ವ ರೀತಿಯಲ್ಲಿಯೂ ಸೌಲಭ್ಯ ಹೊಂದಿದ ಆಯಕಟ್ಟಿನ ಸ್ಥಳವಾಗಿದೆ ಎನ್ನಲಾಗುತ್ತಿದೆ.

ಕಾರ್ಯ ನಿರ್ವಹಿಸುತ್ತಿರುವ ಬ್ಲಾಕ್‌ಗಳು: ಪ್ರಮುಖ ರಾಜಕೀಯ ಪಕ್ಷಗಳಾದ ಜೆಡಿಎಸ್‌, ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ಸಹ ಈಗಾಗಲೇ ಸಂಘಟನೆ ದೃಷ್ಟಿಯಿಂದ ಆನವಟ್ಟಿ ಮತ್ತು ಸೊರಬ ಬ್ಲಾಕ್‌ಗಳೆಂದೇ ಕಾರ್ಯ ನಿರ್ವಹಿಸುತ್ತಿವೆ ಎಂಬುದು ಗಮನಾರ್ಹವಾಗಿದ್ದು, ಬ್ಲಾಕ್‌ ಮಟ್ಟದ ಅಧ್ಯಕ್ಷರು ಹಾಗೂ ವಿವಿಧ ಪದಾಧಿಕಾರಿಗಳನ್ನು ಹೊಂದಿರುವುದು ವಿಶೇಷ.

ವ್ಯಾಪಾರ-ವಾಣಿಜ್ಯಕ್ಕೂ ಅನುಕೂಲ: ತಾಲೂಕು ಕೇಂದ್ರದ ಗಡಿ ಗ್ರಾಮಗಳಾದ ಬಾರಂಗಿ, ಎಣ್ಣೆಕೊಪ್ಪ, ಯಲಿವಾಳ ಸೇರಿ ಬಹುತೇಕ ಹಾನಗಲ್ಲ ಮತ್ತು ಹಿರೇಕೆರೂರ ತಾಲೂಕಿಗೆ ಹೊಂದಿಕೊಂಡಂತಿರುವ ಗ್ರಾಮಗಳ ಜನತೆ ಸರ್ಕಾರಿ ಕೆಲಸಗಳಿಗೆ ಹಾಗೂ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸುಮಾರು 45 ಕಿಮೀ ದೂರದ ತಾಲೂಕು ಕೇಂದ್ರ ಸೊರಬಕ್ಕೆ ಹೋಗುವ ಸ್ಥಿತಿ ಇದೆ. ಆನವಟ್ಟಿ ತಾಲೂಕು ಕೇಂದ್ರ ಘೋಷಣೆಯಾಗುವುದರಿಂದ ಅನುಕೂಲವಾಗಲಿದೆ ಎಂಬ ಕೂಗು ಇಲ್ಲಿನ ರೈತ ವಲಯದಲ್ಲಿ ಕೇಳಿಬರುತ್ತಿದೆ.

ಪ್ರಮುಖ ಕಚೇರಿಗಳು: ಸರ್ಕಾರಿ ಪದವಿ ಪೂರ್ವ ಕಾಲೇಜ್‌, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌, ಪೊಲೀಸ್‌ ಠಾಣೆ, ಮೆಸ್ಕಾಂ ಕಚೇರಿ, ಉನ್ನತೀಕರಿಸಿದ ಆಸ್ಪತ್ರೆ, ಕಂದಾಯ ಇಲಾಖೆ ಕಚೇರಿ (ನಾಡ ಕಚೇರಿ) ಸೇರಿ ವಿವಿಧ ಇಲಾಖೆಯ ಕಚೇರಿಗಳು ಹಾಗೂ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಈ ಹಿಂದೆ ಶಿಥಿಲಗೊಂಡ ಬಸ್‌ ನಿಲ್ದಾಣವನ್ನು ತೆರವುಗೊಳಿಸಿ ನೂತನ ಬಸ್‌ ನಿಲ್ದಾಣ ನಿರ್ಮಿಸುವ ಉದ್ದೇಶಕ್ಕಾಗಿ ಸ್ಥಳ ಕಾಯ್ದಿರಿಸಲಾಗಿದೆ. ರೈತರಿಗೆ ಅನುಕೂಲವಿಲ್ಲದ ಗ್ರಾಮದ ದೊಡ್ಡೆ ಕೆರೆಗೆ ಚಾನಲ್ ನಿರ್ಮಿಸಿದರೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸುಮಾರು 24 ಎಕರೆ ಭೂ ಪ್ರದೇಶ ದೊರೆಯಲಿದೆ. ಇಲ್ಲಿ ತಾಲೂಕು ಕಚೇರಿ, ನ್ಯಾಯಾಲಯ ಸಂಕೀರ್ಣ ಸೇರಿ ಅವಶ್ಯವಿರುವ ವಿವಿಧ ಇಲಾಖೆಗಳ ಕಟ್ಟಡಗಳನ್ನು ನಿರ್ಮಿಸಿಕೊಳ್ಳಲು ಅನುಕೂಲವಾಗಲಿದೆ ಎನ್ನುತ್ತಾರೆ ಹೋರಾಟ ಸಮಿತಿಯವರು.

Advertisement

ರಾಜ್ಯ ಹೆದ್ದಾರಿ ಸಂಪರ್ಕ: ಪ್ರಮುಖ ಕೇಂದ್ರೀಕೃತ ಪ್ರದೇಶದಲ್ಲಿರುವ ಆನವಟ್ಟಿಯಲ್ಲಿ ಶಿವಮೊಗ್ಗ-ತಡಸ ರಾಜ್ಯ ಹೆದ್ದಾರಿ ಹಾದು ಹೋಗಿರುವುದು ಸಾರಿಗೆ ಮತ್ತು ಸಂಪರ್ಕ ದೃಷ್ಟಿಯಿಂದ ಅನೇಕ ಅವಕಾಶಗಳನ್ನು ಒದಗಿಸಿದೆ. ಬಹುತೇಕ ಇಲ್ಲಿನ ವರ್ತಕರು ಹುಬ್ಬಳ್ಳಿ ಮತ್ತು ಶಿವಮೊಗ್ಗದೊಂದಿಗೆ ಸಗಟು ವ್ಯಾಪಾರವನ್ನು ಹೊಂದಿರುವುದನ್ನು ಗಮನಿಸಬಹುದು. ಈ ನಿಟ್ಟಿನಲ್ಲಿ ಹಾವೇರಿ, ಹಾನಗಲ್ಲ, ಹಿರೇಕೆರೂರ, ರಾಣಿಬೆನ್ನೂರ, ಹುಬ್ಬಳ್ಳಿ ಮತ್ತು ಶಿವಮೊಗ್ಗದೊಂದಿಗೆ ನಿಕಟ ಸಂಪರ್ಕ ಸಾಸಲು ಎಲ್ಲ ರೀತಿಯಲ್ಲೂ ಆನವಟ್ಟಿ ತಾಲೂಕು ಕೇಂದ್ರವಾಗಲು ಸಾಕಷ್ಟು ಅವಕಾಶವಿದೆ.

ಹೋರಾಟದ ಹಾದಿ: ಚನ್ನವೀರಪ್ಪ ಗೌಡ ಅಧ್ಯಕ್ಷತೆಯಲ್ಲಿ ಸುಮಾರು 10 ವರ್ಷಗಳ ಹಿಂದೆ ಉದಯಿಸಿದ ಆನವಟ್ಟಿ ತಾಲೂಕು ಹೋರಾಟ ಸಮಿತಿ ವಿವಿಧ ರೀತಿಯಲ್ಲಿ ತಾಲೂಕು ಕೇಂದ್ರಕ್ಕೆ ಅವಶ್ಯವಿರುವ ಎಲ್ಲ ರೀತಿಯ ದಾಖಲೆಗಳನ್ನು ಕ್ರೋಢೀಕರಿಸಿ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ಸಿಯಾಗಿದೆ. ಹೋರಾಟ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಜಿ. ಚಂದ್ರಶೇಖರಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಸ್‌. ಕಾರ್ತಿಕ್‌, ಪ್ರಮುಖರಾದ ಶಿವಪ್ಪ ವಕೀಲರು, ದೇವರಾಜ್‌ ಬೆಲವಂತನಕೊಪ್ಪ, ಶಶಿಧರ ಸಕ್ರಿ ಹುರಳಿ, ಶಿವರುದ್ರಗೌಡ ತಲಗುಂದ, ಸಿ.ವಿ. ಶೆಟ್ರಾ ಮೊದಲಾದವರ ನಿಯೋಗ ಈ ಹಿಂದೆ ಬಿ.ಎಸ್‌. ಯಡಿಯೂರಪ್ಪ ಅವರು 2009ರಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದೆ.

ತಾಲೂಕು ಕೇಂದ್ರ ರಚನೆ ಹೇಗೆ: ಶಿರಸಿ ತಾಲೂಕಿನ ಬನವಾಸಿ ಮತ್ತು ಹಾನಗಲ್ಲ ತಾಲೂಕಿನ ತಿಳುವಳ್ಳಿ ಸೇರಿ ಸೊರಬ ತಾಲೂಕಿನ ಆನವಟ್ಟಿ, ಕುಪಗಡ್ಡೆ, ಜಡೆ, ಶಿಕಾರಿಪುರ ತಾಲೂಕಿನ ತೊಗರ್ಸಿ ಹೋಬಳಿಗಳ ಭೂಪ್ರದೇಶವನ್ನು ಸೇರ್ಪಡೆಗೊಳಿಸಿ ನೂತನ ತಾಲೂಕು ಕೇಂದ್ರ ರಚಿಸುವ ಗುರಿ ಹೊಂದಲಾಗಿದೆ.

ಗ್ರಾಪಂಗಳ ಒಪ್ಪಿಗೆ: 2009ರ ಸೆಪ್ಟೆಂಬರ್‌ 14ರಂದು ಆನವಟ್ಟಿ ಗ್ರಾಪಂ ಸಭೆಯಲ್ಲಿ ತಾಲೂಕು ಕೇಂದ್ರ ರಚನೆಗೆ ಒಪ್ಪಿಗೆ ಸೂಚಿಸಲಾಗಿದೆ. ಉಳಿದಂತೆ ಅಗಸನಹಳ್ಳಿ, ತಲಗಡ್ಡೆ, ಹುರಳಿಕೊಪ್ಪ, ಹಂಚಿ, ತಲ್ಲೂರು, ಎಣ್ಣೆಕೊಪ್ಪ, ಕುಬಟೂರು-ಲಕ್ಕವಳ್ಳಿ, ಕುಪಗಡ್ಡೆ ಸೇರಿ ಹಲವು ಗ್ರಾಪಂಗಳು ಗ್ರಾಪಂಗಳಲ್ಲಿ ಗ್ರಾಮ ಸಭೆ ನಡೆಸಿ ತಾಲೂಕು ಕೇಂದ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಪ್ರವಾಸೋದ್ಯಮ: ಹಲವು ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡ ನೂತನ ಆನವಟ್ಟಿ ತಾಲೂಕು ಕೇಂದ್ರಕ್ಕೆ ಪ್ರವಾಸೋದ್ಯಮ ದೃಷ್ಟಿಯಿಂದಲೂ ಅನೇಕ ಅಭಿವೃದ್ಧಿ ಕೈಗೊಳ್ಳಬಹುದಾಗಿದೆ.

ಆನವಟ್ಟಿ ತಾಲೂಕು ಕೇಂದ್ರವಾಗಬೇಕು ಎಂದು ದಶಕಗಳಿಂದ ಹೋರಾಟ ನಡೆಸಲಾಗುತ್ತಿದೆ. ವ್ಯಾಪಾರ-ವಾಣಿಜ್ಯ ದೃಷ್ಟಿಯಿಂದಲೂ ಅನುಕೂಲವಾಗಲಿದೆ. ಈ ಹಿಂದೆ ಹೋರಾಟ ಸಮಿತಿಯನ್ನು ರಚಿಸಿ ಸರ್ಕಾರದ ಗಮನ ಸೆಳೆಯಲಾಗಿದೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು.
ಎಂ.ಎಸ್‌. ಕಾರ್ತಿಕ್‌ ಸಾಹುಕಾರ್‌,
 ಆನವಟ್ಟಿ ತಾಲೂಕು ಹೋರಾಟ ಸಮಿತಿ.

Advertisement

Udayavani is now on Telegram. Click here to join our channel and stay updated with the latest news.

Next