Advertisement

“ವಾಹನ ವೇಗದ ಮಿತಿ ಪತ್ತೆಗೆ ಅತ್ಯಾಧುನಿಕ ಕೆಮರಾ’

10:33 PM Mar 17, 2021 | Team Udayavani |

ಸ್ಟೇಟ್‌ಬ್ಯಾಂಕ್: ದ.ಕ. ಜಿಲ್ಲೆಯಲ್ಲಿ ಕಳೆದ 3-4 ವರ್ಷಗಳಲ್ಲಿ ಹೆಚ್ಚು ಅಪಘಾತವಾಗಿರುವ ಸ್ಥಳಗಳನ್ನು ಗುರುತಿಸಿ ಅಪಘಾತ ರಹಿತ ಸ್ಥಳಗಳನ್ನಾಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸುವುದರ ಜತೆಗೆ ಅಪಘಾತ ವಲಯ ಪ್ರದೇಶವೆಂದು ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕೆಮರಾಗಳನ್ನು ಅಳವಡಿಸಿ ವಾಹನದ ವೇಗದ ಮಿತಿಯನ್ನು ಕಂಡು ಹಿಡಿಯುವುದರೊಂದಿಗೆ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ದಂಡವಿಧಿಸಲು ಮುಂದಾಗಬೇಕು ಎಂದು ಪೊಲೀಸ್‌ ಅಧೀಕ್ಷಕ ಲಕ್ಷ್ಮೀ ಪ್ರಸಾದ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಮಂಗಳೂರಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಬುಧವಾರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಜಿಲ್ಲಾಮಟ್ಟದ ರಸ್ತೆ ಸುರಕ್ಷ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರ ವ್ಯಾಪ್ತಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗದ ಸ್ಥಳಗಳಲ್ಲಿ ಆಟೋರಿಕ್ಷಾಗಳ ತಂಗುದಾಣ, ಬಸ್‌ ಬೇಗಳನ್ನು ನಿರ್ಮಿಸಲು ಗುರುತಿಸಲಾಗಿರುವ ಜಾಗದಲ್ಲಿ ಸ್ಮಾರ್ಟ್‌ಸಿಟಿ ಅಡಿಯಲ್ಲಿ ಅವುಗಳನ್ನು ನಿರ್ಮಾಣ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ರಸ್ತೆ ವಿಸ್ತರಣೆ, ಕಾಂಕ್ರೀಟ್‌ ಕಾಮಗಾರಿಗಳು ಪ್ರಗತಿಯಲ್ಲಿರುವುದರಿಂದ ರಸ್ತೆ ಅಪಘಾತಗಳು, ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಆದ್ದರಿಂದ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸುರಕ್ಷ ನಿಯಮ ಪಾಲಿಸಿ
ರಾಷ್ಟ್ರೀಯ ಹೆದ್ದಾರಿ, ಸಾಮಾನ್ಯ ರಸ್ತೆಗಳಲ್ಲಿ ರಸ್ತೆ ವಿಭಾಜಕಗಳನ್ನು ನಿರ್ಮಿಸಬೇಕು ಮತ್ತು ಪಾದಚಾರಿಗಳು ರಸ್ತೆ ದಾಟಲು ಬಳಸುವ ಝೀಬ್ರಾ ಕ್ರಾಸಿಂಗ್‌ಗಳಿಗೆ ಬಣ್ಣ ಬಳಿಯುವುದರಿಂದ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು. ಚಾಲಕರು ಕಡ್ಡಾಯವಾಗಿ ರಸ್ತೆ ಸುರಕ್ಷ ನಿಯಮಗಳನ್ನು ಪಾಲಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ರಸ್ತೆ ಸುರಕ್ಷ ಮಾಸಾಚರಣೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದ ಒಳಗೆ ಹಾಗೂ ಗ್ರಾಮೀಣ ಭಾಗಕ್ಕೆ ಸಂಚರಿಸುವ ಖಾಸಗಿ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಅಪಘಾತ ಸಂಭವಿಸುತ್ತಿರುವುದು ಕಂಡುಬರುತ್ತಿದೆ. ಬಸ್‌ಗಳಲ್ಲಿ ಸರಿಯಾದ ವೇಗದ ಮಿತಿಯನ್ನು ಅಳವಡಿಸದೇ ಇರುವುದರಿಂದ ಬಸ್‌ಗಳು ಅತಿ ವೇಗವಾಗಿ ಸಂಚರಿಸಿ ಅಪಘಾತಗಳು ನಡೆಯುತ್ತಿವೆ. ಇಂತಹ ಬಸ್‌ಗಳ ಸಂಚಾರವನ್ನು ನಿಲ್ಲಿಸುವಂತೆ ಅಧಿಕಾರಿಗಳು ಕಾರ್ಯಪ್ರವೃತರಾಗಬೇಕು ಎಂದರು.

Advertisement

ಸಾರಿಗೆ ಇಲಾಖೆಯ ಪ್ರಾದೇಶಿಕ ಅಧಿಕಾರಿ ವರ್ಣೇಕರ್‌, ಪುತ್ತೂರು ವಿಭಾಗೀಯ ಕೆಎಸ್‌ಆರ್‌ಟಿಸಿ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ, ಮಂಗಳೂರು ವಿಭಾಗೀಯ ಕೆ.ಎಸ್‌.ಆರ್‌. ಟಿ.ಸಿ. ನಿಯಂತ್ರಣಾಧಿಕಾರಿ ಕಮಲ್‌ ಕುಮಾರ್‌ ಎಚ್‌.ಆರ್‌. ಉಪಸ್ಥಿತರಿದ್ದರು.

ಘನ ವಾಹನ ಸಂಚಾರಕ್ಕೆ ಸಮಯ ನಿಗದಿ
ಲಕ್ಷ್ಮೀ ಪ್ರಸಾದ್‌ ಮಾತನಾಡಿ, ನವ ಮಂಗಳೂರು ಬಂದರಿನಿಂದ ಪ್ರತೀ ದಿನ ಅಧಿಕ ಭಾರದ ವಾಹನಗಳು ಸಂಚರಿಸುತ್ತಿದ್ದು, ಈ ಭಾಗದಲ್ಲಿ ಸಂಚರಿಸುವ ಇತರ ವಾಹನ ಸವಾರರಿಗೆ ಅಡ್ಡಿಯಾಗುತ್ತಿದೆ. ಜತೆಗೆ ವಾಹನ ದಟ್ಟಣೆಯಾಗುತ್ತದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಅವುಗಳಿಗೆ ಸಂಚಾರ ಸಮಯವನ್ನು ನಿಗದಿಪಡಿಸಬೇಕು. ಭಾರೀ ವಾಹನಗಳ ತಪಾಸಣೆ ನಡೆಸಬೇಕು. ಮಣ್ಣಗುಡ್ಡ ಮತ್ತು ನಂತೂರಿನಲ್ಲಿ ವಾರಸುದಾರರಿಲ್ಲದ ವಾಹನಗಳು ರಸ್ತೆಯ ಬದಿಯಲ್ಲಿ ನಿಂತಿರುವುದು ಕಂಡುಬರುತ್ತಿದ್ದು, ಆ ವಾಹನಗಳನ್ನು ಅದಷ್ಟು ಬೇಗ ತೆರವುಗೊಳಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next