Advertisement

ಸೂರ್ಯ ರೈತ ಸೋಲಾರ್‌: ವಿದ್ಯುತ್‌ ಸಮಸ್ಯೆಗೆ ಪರಿಹಾರ

10:06 PM Nov 16, 2019 | mahesh |

ಕಡಬ: ಬೇಸಗೆ ಬಂತೆಂದರೆ ಕೃಷಿಕರಿಗೆ ತೋಟಕ್ಕೆ ನೀರುಣಿಸುವ ಚಿಂತೆ. ಅದರಲ್ಲಿಯೂ ತೀವ್ರವಾಗಿ ಕಾಡುವ ವಿದ್ಯುತ್‌ ಸಮಸ್ಯೆ ಕೃಷಿಕರನ್ನು ಹೈರಾಣಾಗಿ ಸುತ್ತದೆ. ರೈತರು ಕೃಷಿಗೆ ನೀರುಣಿಸಲು ಸಾಧ್ಯವಾಗದೆ ಪರದಾಡುವುದನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಾಯಧನದೊಂದಿಗೆ ಅನುಷ್ಠಾನವಾಗುವ ಸೂರ್ಯ ರೈತ ಸೋಲಾರ್‌ ಯೋಜನೆ ರೈತರ ಪಾಲಿಗೆ ವರದಾನವಾಗುತ್ತಿದೆ.

Advertisement

ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಕುಳವಳಿಕೆ ಸೀಮಂಧರ ಆರಿಗ ಎನ್ನುವ ಯುವ ಕೃಷಿಕ ಸೂರ್ಯ ರೈತ ಯೋಜನೆಯಲ್ಲಿ ಸೋಲಾರ್‌ ಪಂಪ್‌ಸೆಟ್‌ ಅಳವಡಿಸಿ ಸರಕಾರದ ಯೋಜನೆಯನ್ನು ಸದುಪಯೋಗ ಮಾಡಿಕೊಂಡಿದ್ದಾರೆ. 4.80 ಕಿ.ವ್ಯಾ. ಸಾಮರ್ಥ್ಯದ ಈ ಯೋಜನೆಯಲ್ಲಿ ಬೆಳಗ್ಗೆಯಿಂದ ಸಂಜೆಯ ತನಕ 5 ಎಚ್‌ಪಿ ಪಂಪ್‌ನಲ್ಲಿ ಭರಪೂರ ನೀರು ಬರುತ್ತಿದೆ. ಡಿಸಿ ಮೋಟಾರ್‌ನಲ್ಲಿ ವಿದ್ಯುತ್‌ ಸರಬರಾಜರಾಗುತ್ತಿದ್ದು, ಇದನ್ನು ಕೇವಲ ಕೃಷಿ ಉದ್ದೇಶಕ್ಕಾಗಿ ಬಳಸಬೇಕಾಗಿದೆ. 3 ಸ್ಟಾಂಡ್‌ಗಳಲ್ಲಿ ಒಟ್ಟು 16 ಪ್ಯಾನಲ್‌ಗ‌ಳನ್ನು, 5-5-6 ಅನುಪಾತದಲ್ಲಿ ಅಳವಡಿಸಲಾಗಿದೆ.

ಬಹುಪಾಲು ಸಬ್ಸಿಡಿ
ಈ ಯೋಜನೆಯ ವೆಚ್ಚ ಒಟ್ಟು 3.90 ಲಕ್ಷ ರೂ. ಆಗಿದ್ದು, ಈ ಹಿಂದೆ ಇದಕ್ಕೆ ಕೇಂದ್ರ ಸರಕಾರ ಬಹುಪಾಲು ಸಬ್ಸಿಡಿ ನೀಡುತ್ತಿತ್ತು. ಈಗ 95 ಸಾವಿರ ರೂ. ಸಹಾಯಧನ ನೀಡಿದರೆ, ರಾಜ್ಯ ಸರಕಾರ 1.96 ಲಕ್ಷ ರೂ. ಸಹಾಯಧನ ನೀಡುತ್ತದೆ. ಉಳಿದ 1 ಲಕ್ಷ ರೂ.ಗಳನ್ನು ರೈತರು ಭರಿಸ ಬೇಕಾಗುತ್ತದೆ. ಬೆಂಗಳೂರಿನ ಜೈನ್‌ ಇರಿಗೇಶನ್‌ ಸಿಸ್ಟಮ್‌ ಎನ್ನುವ ಸಂಸ್ಥೆ ಈ ಯೋಜನೆಯ ಗುತ್ತಿಗೆ ಪಡೆದುಕೊಂಡಿದೆ. ರೈತರು ತಮ್ಮ ಆಧಾರ್‌, ಐಡಿ ಪ್ರೂಫ್‌, ಜಮೀನಿನ ಪಹಣಿ ಪತ್ರ, ಫೋಟೋ ಸಹಿತ 1 ಲಕ್ಷ ರೂ. ಪಾವತಿ ಮಾಡಿ ಅರ್ಜಿ ಸಲ್ಲಿಸ ಬಹುದು. ಅರ್ಜಿ ಸ್ವೀಕೃತವಾದ ಬಳಿಕ ಸಂಸ್ಥೆಯವರು ಜಮೀನಿಗೆ ಬಂದು, ಸ್ಥಳ ಹಾಗೂ ದಾಖಲೆಗಳ ಪರಿಶೀಲನೆ ಮಾಡಿ, ಅನುಷ್ಠಾನ ಪ್ರಕ್ರಿಯೆ ಪ್ರಾರಂಭಿಸುತ್ತಾರೆ.

5 ವರ್ಷ ನಿರ್ವಹಣೆ
ಬಹುತೇಕ 3-4 ತಿಂಗಳಲ್ಲಿ ಯೋಜನೆಯನ್ನು ಅನುಷ್ಠಾನ ಮಾಡ ಲಾಗುತ್ತದೆ. ಸೋಲಾರ್‌ನಲ್ಲಿ ಯಾವುದೇ ಸಮಸ್ಯೆ ಇದ್ದರೂ 5 ವರ್ಷ ನಿರ್ವಹಣೆ ಮಾಡಿಕೊಡುತ್ತಾರೆ. ಈ ವ್ಯವಸ್ಥೆಗೆ ಆನ್‌ಲೈನ್‌ ಕನೆಕ್ಟ್ ಮಾಡಿರುವುದರಿಂದ ಸಮಸ್ಯೆ ತಲೆದೋರಿದರೆ ಕೂಡಲೇ ಸಂಸ್ಥೆಯ ಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು. ಸಂಸ್ಥೆಯ ತಂತ್ರಜ್ಞರು ಬೆಂಗಳೂರಿನಲ್ಲೇ ಕುಳಿತು ಏನು ಸಮಸ್ಯೆ ಎಂದು ಕಂಡುಕೊಂಡು ಪರಿಹಾರ ತಿಳಿಸುತ್ತಾರೆ. ತೀವ್ರ ತರಹದ ಸಮಸ್ಯೆಯಾದರೆ ಸಂಸ್ಥೆಯವರೇ ಬಂದು ಸರಿಪಡಿಸುತ್ತಾರೆ.

ಜಿಲ್ಲೆಯ 15 ಕಡೆ ಅನುಷ್ಠಾನ
ಈ ಯೋಜನೆಗೆ 2017ರಲ್ಲಿ ಚಾಲನೆ ದೊರೆತಿದೆ. ಕರ್ನಾಟಕ ರಾಜ್ಯದಲ್ಲಿ ಸುಮಾರು 900 ರೈತರು ತಮ್ಮ ಕೃಷಿ ತೋಟಗಳಿಗೆ ಅನುಷ್ಠಾನ ಮಾಡಿದ್ದಾರೆ. ದ.ಕ. ಜಿಲ್ಲೆಯಲ್ಲಿ ಒಟ್ಟು 15 ಜನ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಪೈಕಿ ಸುಳ್ಯ ತಾಲೂಕಿನಲ್ಲಿ 5 ರೈತರು, ಪುತ್ತೂರು ತಾಲೂಕಿನಲ್ಲಿ ಇಬ್ಬರು ಇದ್ದಾರೆ. ಕಡಬದಲ್ಲಿ ಒಬ್ಬರು ಯೋಜನೆಯನ್ನು ಪಡೆದುಕೊಂಡಿದ್ದಾರೆ. ಆದರೆ ಬಹುತೇಕ ರೈತರಿಗೆ ಇದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಜಾಲತಾಣಗಳನ್ನು ಜಾಲಾಡಿದರೆ ಇದರ ಬಗ್ಗೆ ಉಪಯುಕ್ತ ಮಾಹಿತಿ ಸಿಗುತ್ತದೆ. ಇಂತಹ ಯೋಜನೆಗಳನ್ನು ಹೆಚ್ಚು ಅಳವಡಿಕೆ ಮಾಡಿಕೊಂಡರೆ ರೈತರ ವಿದ್ಯುತ್‌ ಸಮಸ್ಯೆಗೆ ಹೆದರಬೇಕಿಲ್ಲ ಎನ್ನುವುದು ಪ್ರಯೋಗಶೀಲ ಕೃಷಿಕರ ಅಭಿಪ್ರಾಯ.

Advertisement

ಲೋವೋಲ್ಟೆಜ್‌ ಸಮಸ್ಯೆಗೆ ಪರಿಹಾರ
ಬೇಸಗೆಯಲ್ಲಿ ಗ್ರಾಮೀಣ ಲೋಡ್‌ ಶೆಡ್ಡಿಂಗ್‌, ಲೋವೋಲ್ಟೆàಜ್‌ ಸಮಸ್ಯೆಗಳಿಂದ ರೈತರ ಕೃಷಿ ತೋಟಗಳಿಗೆ ನೀರಿಲ್ಲದೆ ಕೃಷಿ ನಾಶವಾಗುವ ಸಮಸ್ಯೆ ಎದುರಾಗುತ್ತದೆ. ಮುಖ್ಯವಾಗಿ ಅಡಿಕೆ ಕೃಷಿಕರು ವಿದ್ಯುತ್‌ ಲೋವೋಲ್ಟೆàಜ್‌ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಾರೆ. ಸರಕಾರದ ಸೂರ್ಯ ರೈತ ಯೋಜನೆಯಿಂದ ಸೋಲಾರ್‌ ಅಳವಡಿಕೆ ಮಾಡುವುದರಿಂದ ಬೇಸಗೆಯಲ್ಲಿ ಸಮೃದ್ಧವಾಗಿ ಕೃಷಿ ತೋಟಗಳಿಗೆ ನೀರುಣಿಸಬಹುದು. ಮಾತ್ರವಲ್ಲ ಯೋಜನೆಗೆ ಒಮ್ಮೆ ನಮ್ಮ ಪಾಲಿನ ಹಣ ಹಾಕಿದರೆ ಸಾಕು. ಮತ್ತೆ ಯಾವುದೇ ಖರ್ಚಿಲ್ಲದೆ ವಿದ್ಯುತ್‌ ಪಡೆಯಬಹುದು. ಎಲ್ಲ ಅರ್ಹ ರೈತರು ಇಂತಹ ಯೋಜನೆಯ ಪ್ರಯೋಜನ ಪಡೆಯಬೇಕು.
– ಸಜಿಕುಮಾರ್‌, ಎಇಇ, ಮೆಸ್ಕಾಂ ಕಡಬ

ರೈತರಿಗೆ ವರದಾನ
ಸರಕಾರದ ಈ ಯೋಜನೆ ರೈತರಿಗೆ ವರದಾನವಾಗಲಿದೆ. ಗುತ್ತಿಗೆ ಪಡೆದ ಸಂಸ್ಥೆ ಉತ್ತಮ ಗುಣಮಟ್ಟದ ಪ್ಯಾನಲ್‌ ಹಾಗೂ ಇತರ ಸಾಮಗ್ರಿಗಳನ್ನು ಅಳವಡಿಸಿದೆ. ಬೆಳಗ್ಗೆ 7 ಗಂಟೆಯಿಂದಲೇ ವಿದ್ಯುತ್‌ ಉತ್ಪಾದನೆಯಾಗಿ 5 ಎಚ್‌ಪಿ ಪಂಪ್‌ ಚಾಲೂ ಆಗುತ್ತಿದೆ. ಸಂಜೆ ಸೂರ್ಯ ಮುಳುಗುವ ಹೊತ್ತಿನವರೆಗೂ ಭರಪೂರ ನೀರು ಬರುತ್ತದೆ. ನಾವು 1 ಲಕ್ಷ ರೂ. ಹಾಕಿದರೆ ಸುಮಾರು 4 ಲಕ್ಷ ರೂ. ಮೌಲ್ಯದ ಸೊತ್ತು ನಮ್ಮದಾಗಲಿದೆ. ರೈತರು ವಿದ್ಯುತ್‌ ಸಮಸ್ಯೆಯಿಂದ ಪಾರಾಗಲು ಇಂತಹ ಯೋಜನೆಗಳು ಸಹಕಾರಿಯಾಗಲಿವೆ..
– ಸೀಮಂಧರ ಆರಿಗ ಕುಳವಳಿಕೆ, ಯೋಜನೆಯ ಫಲಾನುಭವಿ ಕೃಷಿಕ

- ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next