ಉಡುಪಿ, ಸೆ. 27: ರಾಜ್ಯದ ಕಾನೂನು ಸುವ್ಯವಸ್ಥೆ ನಿರ್ವಹಣೆ ಹಾಗೂ ಅಪರಾಧ ಪ್ರಕರಣಗಳ ಪರಿಣಾಮಕಾರಿ ತನಿಖೆಗಾಗಿ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ.
ಈ ಪೈಕಿ ಜಿಲ್ಲೆಯ ಒಂದು ಠಾಣೆ ಸೇರಿದಂತೆ ಒಟ್ಟು 16 ಜಿಲ್ಲೆಗಳ 56 ಪೊಲೀಸ್ ಠಾಣೆಗಳು ಮೇಲ್ದರ್ಜೆಗೇರಲಿವೆ. ಮೇಲ್ದರ್ಜೆಗೇರಿಸುವ ಪ್ರಕ್ರಿಯೆಗಳು ಶೀಘ್ರದಲ್ಲಿಯೇ ರಾಜ್ಯಾದ್ಯಂತ ಹಂತ ಹಂತವಾಗಿ ಕಾರ್ಯರೂಪಕ್ಕೆ ಬರಲಿವೆ.
ಉಡುಪಿ ವೃತ್ತ ಠಾಣಾ ವ್ಯಾಪ್ತಿಯಲ್ಲಿ ಪ್ರಸ್ತುತ ನಗರ, ಸಂಚಾರ ಹಾಗೂ ಮಲ್ಪೆ ಠಾಣೆಗಳಿವೆ. ಈ ಪೈಕಿ ಉಡುಪಿ ನಗರಠಾಣೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಉಡುಪಿ ಸಂಚಾರ ಹಾಗೂ ಮಲ್ಪೆ ಠಾಣೆಗಳು ಉಡುಪಿ ವೃತ್ತ ಠಾಣೆಯೊಳಗೆ ಬರಲಿವೆ. ದ.ಕ. ಜಿಲ್ಲೆಯಿಂದ ಬಂಟ್ವಾಳ ವೃತ್ತ ವ್ಯಾಪ್ತಿಯಲ್ಲಿ ಇರುವ ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಬಂಟ್ವಾಳ ಸಂಚಾರ, ವಿಟ್ಲ ಪೊಲೀಸ್ ಠಾಣೆಗಳಿವೆ. ಈ ಪೈಕಿ ಬಂಟ್ವಾಳ ನಗರ ಹಾಗೂ ವಿಟ್ಲ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಈ ಠಾಣೆಗಳು ಮೇಲ್ದರ್ಜೆಗೆ ಏರಿದ ಬಳಿಕ ಬಂಟ್ವಾಳ ವೃತ್ತ ಠಾಣೆಯ ಪರಿಮಿತಿಯಲ್ಲಿ ಬಂಟ್ವಾಳ ಗ್ರಾಮಾಂತರ ಹಾಗೂ ಸಂಚಾರ ಠಾಣೆಗಳು ಇರಲಿವೆ.
ಪದನಾಮ ನವೀಕರಣಕ್ಕೆ ಅವಕಾಶ : ಪೊಲೀಸ್ ಠಾಣೆಗಳು ಮೇಲ್ದರ್ಜೆಗೆ ಏರಿದ ಬಳಿಕ ವೃತ್ತದ ಹೆಸರನ್ನು ಬದಲಿಸಲು ಅವಕಾಶ ನೀಡಲಾಗಿದೆ. ಅದರಂತೆ ಉಡುಪಿ ವೃತ್ತವನ್ನು ಮಲ್ಪೆ ವೃತ್ತವನ್ನಾಗಿ ಹಾಗೂ ಬಂಟ್ವಾಳ ವೃತ್ತವನ್ನು ಬಂಟ್ವಾಳ ಗ್ರಾಮಾಂತರ ವೃತ್ತವನ್ನಾಗಿ ಮರು ಪದನಾಮಕರಿಸಬಹುದಾಗಿದೆ.
ಈ ಆಯ್ಕೆಯನ್ನು ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿರ್ಧರಿಸಲಿದ್ದಾರೆ.
ಇನ್‌ಸ್ಪೆಕ್ಟರ್‌ಗಳ ನೇಮಕ : ಮೇಲ್ದರ್ಜೆಗೆ ಆಯ್ಕೆಯಾಗಿರುವ ಪೊಲೀಸ್ ಠಾಣೆಗಳಲ್ಲಿ ಪ್ರಸ್ತುತ ಸಬ್ ಇನ್‌ಸ್ಪೆಕ್ಟರ್‌ಗಳ ಉಸ್ತುವಾರಿ ಇದೆ. ಸರ್ಕಲ್ ಇನ್‌ಸ್ಪೆಕ್ಟರ್‌ಗಳ ಅಧೀನದಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದರು. ಇನ್‌ಸ್ಪೆಕ್ಟರ್‌ಗಳ ಅನುಮತಿ ಇಲ್ಲದೆ ಅಥವಾ ಅವರ ಗಮನಕ್ಕೆ ತಾರದೆ ನೇರವಾಗಿ ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಲು ಸಬ್‌ಇನ್‌ಸ್ಪೆಕ್ಟರ್‌ಗಳಿಗೆ ಅಧಿಕಾರವಿರಲಿಲ್ಲ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ಪ್ರಕರಣಗಳ ನಿರ್ವಹಣೆ ಪರಿಣಾಮಕಾರಿಯಾಗುತ್ತಿರಲಿಲ್ಲ. ಆದ್ದರಿಂದ ಠಾಣೆಗಳನ್ನು ಮೇಲ್ದರ್ಜೆಗೇರಿಸಿ ಇನ್‌ಸ್ಪೆಕ್ಟರ್‌ಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಮೇಲ್ದರ್ಜೆಗೇರುವ ಠಾಣೆಗಳಲ್ಲಿ ಸಬ್‌ಇನ್‌ಸ್ಪೆಕ್ಟರ್‌ಗಳನ್ನೂ ನೇಮಕ ಮಾಡಲಾಗುತ್ತದೆ.
ಪ್ರಕರಣಗಳ ಪರಿಣಾಮಕಾರಿ ತನಿಖೆಗಾಗಿ ರಾಜ್ಯದ 56 ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಶೀಘ್ರದಲ್ಲಿ ಈ ಠಾಣೆಗಳಿಗೆ ಇನ್‌ಸ್ಪೆಕ್ಟರ್‌ಗಳ ನೇಮಕ ಆಗಲಿದೆ.
-ಪ್ರವೀಣ್ ಸೂದ್, ರಾಜ್ಯ ಪೊಲೀಸ್ ಮಹಾನಿರ್ದೇಶಕರು