ದಾವಣಗೆರೆ: ಕೇಂದ್ರ ಸರ್ಕಾರದಿಂದ ದಾವಣಗೆರೆಗೆ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಮಂಜೂರಾಗಿದ್ದು, ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಶೀಘ್ರವೇ ಪಾರ್ಕ್ ಕಾರ್ಯಾರಂಭ ಮಾಡಲಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಚ್.ಎಸ್. ಜಯಪ್ರಕಾಶ್ ತಿಳಿಸಿದ್ದಾರೆ.
ಜೆ.ಎಚ್. ಪಟೇಲ್ ಕಾಲೇಜಿನಲ್ಲಿ ಶುಕ್ರವಾರ ಬೆಂಗಳೂರಿನ ಆಫ್ ಸಿಂಟೆಕ್ಸ್ ಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವೆಟ್ ತಂತ್ರಜ್ಞಾನ ಕುರಿತ 2 ದಿನಗಳ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿ 5 ಎಕರೆ ಭೂಮಿ ಖರೀದಿಸಲಾಗಿದ್ದು, ಸುಮಾರು 300 ಕೋಟಿಯಷ್ಟು ಅನುದಾನ ದೊರೆಯುವ ವಿಶ್ವಾಸವಿದೆ.
ಇದರಿಂದಾಗಿ ಕಂಪ್ಯೂಟರ್ ಸಂಬಂಧಿಧಿತ ಕೋಸ್‌ಗಳಾದ ಬಿಇ, ಬಿಸಿಎ ಹಾಗೂ ಬಿಎಸ್‌ಸಿ ಪಧವೀದರರಿಗೆ ದಾವಣಗೆರೆಯಲ್ಲೇ ವಿಪುಲ ಉದ್ಯೋಗಾವಕಾಶಗಳು ಲಭ್ಯವಾಗಲಿವೆ ಎಂದರು. ಪದವಿಯ ಪಠ್ಯದಿಂದಲೇ ಎಲ್ಲವನ್ನೂ ಕಲಿಯಲು ಸಾಧ್ಯವಿಲ್ಲ. ಇಂತಹ ಕಾರ್ಯಾಗಾರಗಳ ಮೂಲಕ ಪರಿಣಿತರಿಂದ ಹೆಚ್ಚಿನ ಜ್ಞಾನ ಸಂಪಾದನೆ ಸಾದ್ಯವಾಗುತ್ತದೆ.
ಟೆಕ್ನಾಲಜಿ ಪಾರ್ಕ್ ಯೋಜನೆ ಅಡಿಯಲ್ಲಿ ಐಟಿ ದಿಗ್ಗಜ ಸಂಸ್ಥೆಗಳನ್ನು ಆಹ್ವಾನಿಸಿ ಸ್ಥಳೀಯ ಕಾಲೇಜು, ಸಂಸ್ಥೆಗಳಿಗಾಗಿ ಉನ್ನತ ಕಾರ್ಯಾಗಾರವನ್ನು ಹಮ್ಮಿಕೊಳ್ಳುವ ಯೋಜನೆಯಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪಾಚಾರ್ಯೆ ಪ್ರತಿಭಾ ಪಿ. ದೊಗ್ಗಳ್ಳಿ ಮಾತನಾಡಿ, ಜ್ಞಾನಾರ್ಜನೆ ಸೀಮಿತಗೊಳಿಸಬಾರದು.
ಸಾಧ್ಯವಾಗುವ ಎಲ್ಲಾ ಮೂಲಗಳಿಂದ ಕಲಿಯುವ ಮೂಲಕ ನಾವು ಯಾವುದೇ ರಂಗದಲ್ಲಿ ಯಶಸ್ವೀ ವ್ಯಕ್ತಿಗಳಾಗಲು ಸಾಧ್ಯವಾಗುತ್ತದೆ ಎಂದರು. ಬೆಂಗಳೂರಿನ ಆಪ್ ಸಿಂಟೆಕ್ಸ್‌ನ ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ ಪ್ರದೀಪ್ ಕುಮಾರ್ ಉಪನ್ಯಾಸ ನೀಡಿದರು. ಕಾಲೇಜು ಕಾರ್ಯದರ್ಶಿ ದೊಗ್ಗಳ್ಳಿಗೌಡ್ರು ಪುಟ್ಟರಾಜು, ವಿಭಾಗ ಮುಖ್ಯಸ್ಥ ವೀರೇಶ್, ವ್ಯವಸ್ಥಾಪಕ ಆರ್. ಜಿ. ಕರಿಬಸಪ್ಪ ವೇದಿಕೆಯಲ್ಲಿದ್ದರು.