ಮೂಲ್ಕಿ: ಮೂಲ್ಕಿಯಲ್ಲಿ ಮಿನಿ ವಿಧಾನಸೌಧದ ನಿರ್ಮಾಣದ ಬಹು ಬೇಡಿಕೆಯ ಕನಸು ಇದೀಗ ಸಾಕಾರಗೊಳ್ಳುವ ಹಂತಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಯಿಂದ ಬೇಕಾದ ಸಿದ್ಧತೆ ನಡೆಸಿದ್ದು ನೀಲಿ ನಕಾಶೆ ತಯಾರಿಸಲಾಗಿದ್ದು ಶೀಘ್ರದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಕಾರ್ಯ ಆರಂಭ ವಾಗಲಿದೆ.
ಮೂಲ್ಕಿ ಜನತೆಯ 60 ವರ್ಷಗಳ ಕನಸಾಗಿದ್ದ ಮೂಲ್ಕಿ ತಾಲೂಕು ರಚನೆ ಪ್ರಸ್ತಾವನೆಗೆ ಈ ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೂಲ್ಕಿಯನ್ನು ತಾಲೂಕು ಆಗಿ ಘೋಷಣೆ ಮಾಡಿದ್ದರು. ಈ ನೆಲೆಯಲ್ಲಿ ತಾಲೂಕು ಆಡಳಿತದಿಂದ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸಕಲ ಸಿದ್ಧತೆ ನಡೆಸಿತ್ತು. ಇಲ್ಲಿಯ ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕಾರ್ನಾಡು ಗೇರುಕಟ್ಟೆ ಬಳಿ ತಾಲೂಕು ಕಚೇರಿಗಾಗಿಯೇ ಎರಡು ಎಕ್ರೆ ಜಾಗವನ್ನು ಕಾದಿರಿಸಲಾಗಿದೆ.
ನೂತನವಾಗಿ ಮೂಲ್ಕಿ ತಾಲೂಕು ಕಚೇರಿಗೆ ಕಾರ್ಯನಿರ್ವಹಿಸಲು ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಸುಮಾರು ಆರು ದಶಕಗಳಿಂದ ಸರ ಕಾರದ ವಿವಿಧ ಸಮಿತಿಗಳು ಮೂಲ್ಕಿ ತಾ| ಕೇಂದ್ರವಾಗಿಸಲು ಎಲ್ಲ ಅರ್ಹತೆ ಹೊಂದಿರುವ ಪ್ರದೇಶ ಎಂಬುದಾಗಿ ವರದಿ ನೀಡುತ್ತಲೇ ಬಂದಿದ್ದವು.
ಇದರಲ್ಲಿ ವಾಸುದೇವ ರಾವ್, ಹುಂಡೆಕಾರ್, ಗದ್ದಿಗೌಡರ್ ಮುಂತಾದ ಸಮಿತಿಗಳು ಬಲವಾಗಿ ಮೂಲ್ಕಿ ತಾಲೂಕು ಘೋಷ ಣೆಯ ಬಗ್ಗೆ ಪ್ರತಿಪಾದಿಸಿದ್ದವು. ಘೋಷಣೆಯ ಬಳಿಕ ಮೂಲ್ಕಿ ವಿಶೇಷ ತಹಶೀಲ್ದಾರರ ಕಚೇರಿಗೆ ಅನುದಾನಗಳು ಬಿಡುಗಡೆಯಾಗುತ್ತಿದೆ. ನ್ಯಾಯಾಲಯ, ತಾಲೂಕು ದಂಡಾಧಿಕಾರಿಗಳ ಕಚೇರಿ, ಸರಕಾರದ ವಿವಿಧ ಇಲಾಖೆಗಳ ಕಚೇರಿಗಳು ಮೂಲ್ಕಿಯಲ್ಲಿ ಆರಂಭಿಸುವುದಕ್ಕೆ ಎಲ್ಲ ಸಿದ್ಧತೆಗಳು ನಡೆಯುತ್ತಿದೆ.
ಸುಮಾರು 25 ಸೆಂಟ್ಸ್ ಜಾಗವನ್ನು ಸಮು ದಾಯವೊಂದರ ಭವನ ನಿರ್ಮಾಣಕ್ಕಾಗಿ ಸರಕಾರ ಈ ಹಿಂದೆ ಮಂಜೂರು ಮಾಡಿ ಕೊಟ್ಟಿರುವುದನ್ನು ತಾಲೂಕು ಕಚೇರಿಯ ನಿರ್ಮಾಣದ ಹಿನ್ನೆಲೆಯಲ್ಲಿ ಸರಕಾರ ಮತ್ತೆ ತನ್ನ ವಶಕ್ಕೆ ಪಡೆದುಕೊಂಡಿದೆ.
ಬಹುದಿನಗಳ ಕನಸು ನನಸು
ಜನತೆಯ ಬಹುದಿನಗಳ ಕನಸು ನಾನು ಶಾಸಕನಾಗಿರುವ ಅವಧಿಯಲ್ಲಿ ಪೂರ್ಣ ಗೊಂಡಿದೆ. ಮಾತ್ರವಲ್ಲ ಇದಕ್ಕೆ ಪೂರಕವಾಗಿ ಈಗಾಗಲೇ ಮೂಲ್ಕಿ ನಗರವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಮೂಲ್ಕಿ ಹೊಬಳಿಯ 32 ಗ್ರಾಮಗಳ ಜನರಿಗೆ ಸರಕಾರದ ಎಲ್ಲ ಸೌಲಭ್ಯಗಳನ್ನು ಇಲ್ಲಿ ನಿರ್ಮಾಣವಾಗಲಿರುವ ಮಿನಿ ವಿಧಾನಸೌಧದ ಮೂಲಕ ಸಿಗಲಿದೆ. ಶೀಘ್ರದಲ್ಲಿ ತಾಲೂಕು ಮಿನಿ ವಿಧಾನಸೌಧ ನಿರ್ಮಾಣವಾಗಲಿದೆ. ಸರಕಾರದ ಎಲ್ಲ ಕೆಲಸ ಕಾರ್ಯಗಳು ಸರಿಯಾಗಿ ಜನರನ್ನು ತಲುಪಲಿವೆ.
- ಉಮಾನಾಥ ಕೋಟ್ಯಾನ್, ಶಾಸಕರು, ಮೂಲ್ಕಿ- ಮೂಡುಬಿದಿರೆ ಕ್ಷೇತ್ರ
- ಎಂ. ಸರ್ವೋತ್ತಮ ಅಂಚನ್