ಮೈಸೂರು: ಮೈಸೂರು-ಕೊಡಗು ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿದ್ದ ವೇಳೆ ಶಾಸಕರು, ಟಿಕೆಟ್ ಆಕಾಂಕ್ಷಿಗಳೂ ಸಹಿತ ಸ್ಥಳೀಯ ಜನಪ್ರತಿನಿಧಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ.
ಕಳೆದ ವಾರ ಮೈಸೂರಿಗೆ ಆಗಮಿಸಿದ್ದ ಸಿಎಂ, ತಮ್ಮ ನಿವಾಸದಲ್ಲಿ ಸೂಕ್ತ ಅಭ್ಯರ್ಥಿ ಆಯ್ಕೆ ಸಂಬಂಧ ಚುನಾವಣೆಯಲ್ಲಿ ಕಣಕ್ಕಿಳಿಯಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ಟಿಕೆಟ್ ಆಕಾಂಕ್ಷಿಗಳು, ಮಾಜಿ ಶಾಸಕರು, ಶಾಸಕರು ಮತ್ತು ಮುಖಂಡರಿಂದ ಮಾಹಿತಿ ಪಡೆದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಚ್.ಸಿ. ಮಹದೇವಪ್ಪ ಹಾಗೂಸಚಿವ ಕೆ. ವೆಂಕಟೇಶ್‌ರನ್ನು ಜತೆಯಲ್ಲಿ ಕುಳ್ಳಿರಿಸಿಕೊಂಡು ಒಬ್ಬೊಬ್ಬರನ್ನು ಪ್ರತ್ಯೇಕವಾಗಿ ಕರೆಸಿ ಅಭಿಪ್ರಾಯ ಪಡೆದಿದ್ದಾರೆ. ಈ ವೇಳೆ ಪುತ್ರ ಯತೀಂದ್ರ ಅವರನ್ನು ಕಣಕ್ಕಿಳಿಸಿದರೆ ಹೇಗೆ ಎಂಬ ಪ್ರಶ್ನೆಗೆ, ಕೆಲವು ಶಾಸಕರು ಮತ್ತು ಮುಖಂಡರು ಬಿಜೆಪಿ-ಜೆಡಿಎಸ್ ಒಂದಾಗಿರುವಾಗ ಯತೀಂದ್ರ ಅವರ ಸರ್ಧೆಗೆ ಈಗ ಸಮಯ ಪಕ್ವವಾಗಿಲ್ಲ ಎಂದರೆ, ಕೆಲವರು ಸ್ಪರ್ಧಿಸಬಹುದು ಎಂದಿದ್ದಾರೆ. ಮಗನ ಸ್ಪರ್ಧೆ ವಿಚಾರವಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆ ಮುಂದಿನ ಭಾರೀ ಮೈಸೂರಿಗೆ ಬರುವಷ್ಟರಲ್ಲಿ ಅಂಕಿ-ಅಂಶ ಸಮೇತ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ ಮಗನ ರಾಜಕೀಯ ಭವಷ್ಯಕ್ಕಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಎಷ್ಟಿದೆ ಎಂಬ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿ, ಅಂಕಿ-ಅಂಶ ಸಮೇತ ಮಾಹಿತಿ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೂಚಿಸಿದ್ದಾರೆ ಎನ್ನಲಾಗಿದೆ.