ಪುನೀತ್ ರಾಜ್‌ಕುಮಾರ್ ಕುರಿತು “ಯಾರೋ ನೀನು’ ಎಂಬ ಆಲ್ಬಂ ಸಾಂಗ್ ಬಿಡುಗಡೆಯಾಗಿದೆ. ಇತ್ತೀಚೆಗೆ ನಟ ರಾಘವೇಂದ್ರ ರಾಜ್‌ಕುಮಾರ್ ಈ ಆಲ್ಬಂ ಅನ್ನು ಬಿಡುಗಡೆ ಮಾಡಿದರು.
ಬಿಡುಗಡೆ ಬಳಿಕ ಮಾತನಾಡಿದ ಅವರು, “ನನಗೆ ಇಂತಹ ದಿನ ಬರುತ್ತದೆ ಎಂದು ಊಹಿಸಿಯು ಇರಲಿಲ್ಲ. ನಾನು ಅಪ್ಪು ಇದ್ದಾಗ, ಅವನ ಅನೇಕ ಚಿತ್ರದ ಆಡಿಯೋ ರಿಲೀಸ್ ಮಾಡಿದ್ದೀನಿ. ಆಗ ನನಗೆ ಬರೀ ಅಪ್ಪು ಮಾತ್ರ ಕಾಣುತ್ತಿದ್ದ. ಈಗ ಬಿಡುಗಡೆ ಮಾಡಿರುವ ಹಾಡಿನಲ್ಲಿ ಅವನ ಕೋಟ್ಯಾಂತರ ಅಭಿಮಾನಿಗಳು ಕಾಣುತ್ತಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ಹಾರೈಸಿದರು.
ಕನ್ನಡದ ಸಾಕಷ್ಟು ಜನಪ್ರಿಯ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಹಾಗೂ ಹಿಂದಿ, ತೆಲುಗು, ಕನ್ನಡ, ತಮಿಳು, ಮಲೆಯಾಳಂ, ಬಂಗಾಳಿ ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ “ಡಾಟರ್ ಆಫ್ ಇಂಡಿಯಾ’ ಚಿತ್ರಕ್ಕೆ ಸಂಗೀತ ನೀಡಿ, ನಿರ್ದೇಶಿಸುತ್ತಿರುವ ರಾಜ್ ಕಿಶೋರ್ ಈ ಹಾಡನ್ನು ಬರೆದು ಸಂಗೀತ ನೀಡಿದ್ದಾರೆ.
“ಒಬ್ಬ ನಾಯಕನ ಚಿತ್ರಕ್ಕೆ, ಹುಟ್ಟುಹಬ್ಬ ಅಥವಾ ಮತ್ತಾವುದೋ ಸಂದರ್ಭಕ್ಕೋ ಹಾಡು ಬರೆದು ಬಿಡುಗಡೆ ಮಾಡುವುದೇ ಬೇರೆ. ಈ ಸಂದರ್ಭ ಬೇರೆ. ಅವರ ಮನೆಯವರು, ಅವರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ದುಃಖ ಆಗುವುದು ಸಹಜ. ಆದರೆ ಬರೀ ಈ ಊರು, ನಮ್ಮ ದೇಶವಲ್ಲದೇ, ಹೊರದೇಶಗಳಲ್ಲೂ ಇವರ ಸಾವಿಗೆ ನಮ್ಮವರನ್ನೇ ಕಳೆದುಕೊಂಡಿದ್ದೀವಿ ಎಂದು ದುಃಖೀಸುತ್ತಿದ್ದಾರಲ್ಲಾ ಇದೇ ನಾನು ಹಾಡು ಬರೆಯಲು ಪ್ರಮುಖ ಕಾರಣ’ ಎಂದರು ರಾಜ್ ಕಿಶೋರ್.
“ದೇವರಿಗಾಗಿ ನಾನು ಯಾವುದೇ ವ್ರತ ಮಾಡಿಲ್ಲ. ಆದರೆ ನಾನು ಅಪ್ಪು ಅವರಿಗಾಗಿ ಈ ಹಾಡನ್ನು ಹಾಡುವಾಗ ವ್ರತ ಆಚರಿಸಿ ಹಾಡಿದ್ದೀನಿ. ಅವರೇ ನನ್ನ ಪಾಲಿನ ದೇವರು ಎಂದರು ತಪ್ಪಾಗಲಾರದು’ ಎಂದರು ಗಾಯಕ ಶಶಿಕುಮಾರ್.
ಮಕ್ಕ ಳಿಂದ ಹಿಡಿದು ದೊಡ್ಡವರ ತನಕ ಅಪ್ಪು ಅವರ ಸಾವಿನಿಂದ ಆಗುತ್ತಿರುವ ತಳಮಳ ಈ ಹಾಡನ್ನು ನಿರ್ಮಿಸಲು ಮುಖ್ಯ ಕಾರಣ ಎನ್ನುವುದು ನಿರ್ಮಾಪಕಿ ಭೈರವಿ ಮಾತು