ದೆಹಲಿ: ಅನಾರೋಗ್ಯ ಪೀಡಿತ ತಂದೆ ತನ್ನ ಹಾಸಿಗೆ ಯಲ್ಲಿ ಮೂತ್ರ ಮಾಡಿದ್ದಾರೆಂಬ ಕಾರಣಕ್ಕೆ ಮಗನೇ ತಂದೆಯನ್ನು ಕೊಂದ ಘಟನೆ ದೆಹಲಿಯಲ್ಲಿ ನಡೆದಿದೆ. ತಾಯಿಯ ಸಂಶಯದ ಹಿನ್ನಲೆ ತನಿಖೆ ನಡೆಸಿದಾಗ ಮಗನೇ ತಂದೆಯನ್ನು ಕೊಲೆಗೈದ ಸಂಗತಿ ಬೆಳಕಿಗೆ ಬಂದಿದೆ.
20 ವರ್ಷದ ಸುಮಿತ್ ಕುಮಾರ್ ತನ್ನ 45 ವರ್ಷ ಪ್ರಾಯದ ಪಾರ್ಶ್ವವಾಯುವಿಗೆ ತುತ್ತಾಗಿದ್ದ ತಂದೆ ರಾಜೇಂದ್ರ ಕುಮಾರ್ ಜೊತೆ ಮದ್ಯಪಾನ ಮಾಡುತ್ತಿದ್ದ ಸಂದರ್ಭ ತಂದೆ ತನ್ನ ಹಾಸಿಗೆಯಲ್ಲೇ ಮೂತ್ರ ವಿಸರ್ಜನೆ ಮಾಡಿದರೆಂಬ ಕಾರಣಕ್ಕೆ ತಂದೆಯನ್ನೇ ಕೊಲೆಗೈದ ಘಟನೆ ಬೆಚ್ಚಿಬೀಳಿಸಿದೆ.
ಅನಾರೋಗ್ಯದಿಂದ ಮೃತಪಟ್ಟಿದ್ದಾರೆಂದುಕೊಂಡ ಪೋಲಿಸರು ತಾಯಿಯ ಸಂಶಯದ ಹಿನ್ನಲೆ ಮಗನನ್ನು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ.
ʻಮೃತ ರಾಜೇಂದ್ರ ಕುಮಾರ್ ಅನಾರೋಗ್ಯಕ್ಕೆ ತುತ್ತಾಗಿ ಕಳೆದ ಎರಡು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ಹಾಗಾಗಿ ಮಗನಿಂದಲೇ ಅವರ ಕೊಲೆಯಾದ ಬಗ್ಗೆ ನಮಗೆ ಯಾವುದೇ ಸಂಶಯವಿರಲಿಲ್ಲ. ತಾಯಿಯ ಸಂಶಯ ಆಧರಿಸಿ ತನಿಖೆ ಮಾಡಿದಾಗ ನಿಜಾಂಶ ತಿಳಿದುಬಂದಿದೆʼ ಎಂದು ಡಿಸಿಪಿ ಶ್ವೇತಾ ಚಹ್ವಾಣ್ ಹೇಳಿದ್ದಾರೆ.