ಸೋಮವಾರಪೇಟೆ: ಯುವಕನೋರ್ವ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ ಗರ್ವಾಲೆ ಗ್ರಾಮದಲ್ಲಿ ಸಂಭವಿಸಿದೆ.
ಗರ್ವಾಲೆ ಗ್ರಾಮದ ನಾಪಂಡ ಕುಶಾಲಪ್ಪ ಅವರ ಪುತ್ರ ರಾಜೇಶ್ ಚಂಗಪ್ಪ (28) ಮೃತ ವ್ಯಕ್ತಿ. ಶನಿವಾರ ಮಧ್ಯರಾತ್ರಿ ಗರ್ವಾಲೆಗೆ ಕಾರಿನಲ್ಲಿ ತೆರಳುತ್ತಿದ್ದ ಅವರು ಮಾದಾಪುರ ಸಮೀಪದ ಮುವತೊಕ್ಕಲು ಗ್ರಾಮದ ರಸ್ತೆಯಲ್ಲಿ ಕಾರು ಅಪಘಾತಕ್ಕಕೀಡಾಗಿರುವುದಾಗಿ ಮನೆಗೆ ಕರೆ ಮಾಡಿ ತಿಳಿಸಿದ್ದರು. ಬಳಿಕ ಎಷ್ಟು ಹೊತ್ತಾದರೂ ಮನೆಗೆ ತಲುಪಿರಲಿಲ್ಲ. ರವಿವಾರ ಕುಟುಂಬದವರು ಸೋಮವಾರ ಪೇಟೆ ಠಾಣೆಗೆ ನೀಡಿದ ದೂರಿನಂತೆ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಶೋಧ ಆರಂಭಿಸಿದ ಪೊಲೀಸರಿಗೆ ಅಪಘಾತವಾಗಿದೆ ಎಂದು ರಾಜೇಶ್ ಕರೆ ಮಾಡಿ ತಿಳಿಸಿದ ಸ್ಥಳದಿಂದ ಅನತಿ ದೂರದಲ್ಲಿರುವ ಕಾಫಿ ತೋಟದಲ್ಲಿ ಸಂಜೆ ವೇಳೆಗೆ ಶವ ಪತ್ತೆಯಾಗಿದೆ. ಹಣೆಗೆ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.ಪೊಲೀಸರು ತನಿಖೆ ನಡೆಸುತ್ತಿದ್ದು, ಕೃತ್ಯಕ್ಕೆ ಕಾರಣ ತಿಳಿದುಬರಬೇಕಿದೆ.