ಸೋಮವಾರಪೇಟೆ: ಸಮೀಪದ ಚೌಡ್ಲು ಗ್ರಾಮದಲ್ಲಿ ಶ್ರೀಸಬ್ಬಮ್ಮ ದೇವರ ಸುಗ್ಗಿ ಉತ್ಸವ ಶ್ರದ್ಧಾ ಭಕ್ತಿಯಿಂದ ಶುಕ್ರವಾರ ನಡೆಯಿತು..
ನಗರೂರು, ಚೌಡ್ಲು, ಕಿಬ್ಬೆಟ್ಟ, ಕರ್ಕಳ್ಳಿ, ಬೇಳೂರು, ಮಾಟ್ನಳ್ಳಿ, ಕಲ್ಕಂದೂರು ಗ್ರಾಮಸ್ಥರು ಸುಗ್ಗಿ ಉತ್ಸವದಲ್ಲಿ ಪಾಲ್ಗೊಂಡರು.
800 ವರ್ಷಗಳ ಇತಿಹಾಸವಿರುವ ಸುಗ್ಗಿಯಲ್ಲಿ ಉತ್ಸವದಲ್ಲಿ ಇಬ್ಬರು ಗಂಡಸರಿಗೆ ಮದುವೆ ಮಾಡುವುದು ವಿಶೇಷ ಆಚರಣೆ. ನಗರೂರು ಗ್ರಾಮದ ಯುವಕನೊಂದಿಗೆ ಚೌಡ್ಲು ಗ್ರಾಮದ ಯುವಕನಿಗೆ ಹೆಣ್ಣಿನ ವೇಷ ತೊಡಿಸಿ, ಮದುವೆ ಮಾಡಲಾಯಿತು. ನಂತರ ವಧುವಿನ ಮಡಿಲಿಗೆ ಬಿತ್ತನೆ ಬೀಜವನ್ನು ತುಂಬಿ, ಗದ್ದೆಯಲ್ಲಿ ಬೀಜ ಬಿತ್ತನೆ ಮಾಡುವ ಮೂಲಕ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಕೃಷಿ ಫಸಲು ನಷ್ಟವಾಗದಂತೆ ಗ್ರಾಮಸ್ಥರು ಗ್ರಾಮದಲ್ಲಿರುವ ಪ್ರಾಚೀನ ಶಾಸನಗಳು, ವೀರಗಲ್ಲು, ಮಾಸ್ತಿ ಕಲ್ಲು ಹಾಗು ಸ್ಮಾರಕಗಳಿಗೆ ಪೂಜೆ ಸಲ್ಲಿಸಲಾಯಿತು. ಚೌಡ್ಲು ಗ್ರಾಮವನ್ನು ಹೆಚ್ಚಿನ ಕಾಲ ಸಾಮಂತ ರಾಜರು ಆಳ್ವಿಕೆ ಮಾಡಿರುವ ಹಿನ್ನೆಲೆಯ, ಯುದ್ದ ಹಾಗು ಸೈನಿಕನ ಧೈರ್ಯ ಸಾಹಸಗಳನ್ನು ಬಿಂಬಿಸುವ ನೃತ್ಯ ಪ್ರಕಾರಗಳು ಸುಗ್ಗಿ ಉತ್ಸವದಲ್ಲಿ ಜನರನ್ನು ಆಕರ್ಷಿಸಿದವು.
ಉತ್ಸವದಲ್ಲಿ ಒಡೆಕಾರರಾದ ಮೋಹನ್, ಅರ್ಜುನ್, ರಾಜು, ಲಿಂಗರಾಜು. ಬಿ.ಕೆ. ರಾಜು ಅವರುಗಳು ಕಳೆದ ಹದಿನೈದು ದಿನದಿಂದ ಸುಗ್ಗಿ ಧಾರ್ಮಿಕ ಕಾರ್ಯಗಳನ್ನು ಕಟ್ಟಿನಿಟ್ಟಾಗಿ ನೆರವೇರಿಸಿಕೊಟ್ಟರು.