ಉಳ್ಳಾಲ: ಮಂಗಳೂರಿನ ಸೋಮೇಶ್ವರ ಬೀಚ್‌ನಲ್ಲಿ ಗುರುವಾರ ರಾತ್ರಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂ ಧಿಸಿ ಆರು ಮಂದಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಮತ್ತಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ತಲಪಾಡಿ ನಿವಾಸಿ ಅಖೀಲ್, ಸಚಿನ್, ಸುಹಾನ್, ಉಳ್ಳಾಲ ನಿವಾಸಿ ಯತೀಶ್, ಭವಿಷ್, ಇನ್ನೋರ್ವ ಅಪ್ರಾಪ್ತ ವಯಸ್ಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ
ಸೋಮೇಶ್ವರ ದೇವಸ್ಥಾನ ಬಳಿ ಇರುವ ಬೀಚ್‌ಗೆ ಗುರುವಾರ ಸಂಜೆ ವೇಳೆಗೆ ಮಂಗಳೂರಿನ ಕಾಲೇಜೊಂದರ ಪ್ಯಾರಾಮೆಡಿಕಲ್‌ನ ಮೂವರು ವಿದ್ಯಾರ್ಥಿನಿಯರೊಂದಿಗೆ ಅನ್ಯ ಕೋಮಿನ ಮೂವರು ಯುವಕರು ವಿಹಾರಕ್ಕೆ ಬಂದಿದ್ದು, ಸಾರ್ವಜನಿಕವಾಗಿ ಅನುಚಿತ ವರ್ತನೆಯಲ್ಲಿ ತೊಡಗಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಹಿಂದೂ ಸಂಘಟನೆಯ ಯುವಕರು ಈ ವಿದ್ಯಾರ್ಥಿನಿಯರನ್ನು ತರಾಟೆಗೆ ತೆಗೆದುಕೊಂಡಿದ್ದು, ಅನಂತರ ಅವರ ಜತೆ ಇದ್ದ ಮೂವರ ಮೇಲೆ ಹಲ್ಲೆ ನಡೆಸಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಬಂದಿದ್ದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಕೇರಳದಿಂದ ಬಂದಿದ್ದ ಯುವಕರು
ಮಂಗಳೂರಿನ ಖಾಸಗಿ ಕಾಲೇಜಿನ ಪ್ಯಾರಾಮೆಡಿಕಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರು ಖಾಸಗಿ ಪಿಜಿಯಲ್ಲಿದ್ದು, ಚೆರ್ಕಳದ ತಮ್ಮ ಮೂವರು ಸ್ನೇಹಿತರೊಂದಿಗೆ ಸೋಮೇಶ್ವರ ಬೀಚ್‌ಗೆ ಸಂಜೆ ವೇಳೆಗೆ ಆಗಮಿಸಿದ್ದರು.
Related Articles
ಕಮಿಷನರ್ ಭೇಟಿ
ಘಟನ ಸ್ಥಳಕ್ಕೆ ಪೊಲೀಸ್ ಕಮಿಷನರ್ ಕುಲದೀಪ್ ಜೈನ್, ಸಿಸಿಬಿ ಎಸಿಪಿ ಪಿ.ಎ. ಹೆಗ್ಡೆ ಭೇಟಿ ನೀಡಿ ಉಳ್ಳಾಲ ಇನ್‌ಸ್ಪೆಕ್ಟರ್ ಸಂದೀಪ್ ಅವರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಮಾತನಾಡಿದ ಕಮಿಷನರ್ ಕುಲದೀಪ್ ಜೈನ್, ಘಟನೆಗೆ ಸಂಬಂಧಿಸಿದಂತೆ ಮೂರು ತಂಡ ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಈಗಾಗಲೇ ಅಪ್ರಾಪ್ತ ವಯಸ್ಕ ಸಹಿತ 6 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದರು.
ಅಮಾಯಕರ ಬಂಧನ: ಬಿಜೆಪಿ
ಸೋಮೇಶ್ವರ ಘಟನೆಗೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸಲಾಗಿದೆ. ಅಮಾಯಕರ ಬಂಧನ ಸರಿಯಲ್ಲ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ವಿಶ್ವಹಿಂದೂ ಪರಿಷತ್ ಮತ್ತು ಬಜರಂಗ ದಳದ ಮುಖಂಡರಾದ ಗೋಪಾಲ ಕುತ್ತಾರ್, ಬಿ. ನಾರಾಯಣ ಕುಂಪಲ, ವಸಂತ್ ಉಳ್ಳಾಲ್, ಅರ್ಜುನ್ ಮಾಡೂರು, ಆಶಿಕ್ ಮಾಡೂರು, ಪವಿತ್ರಾ ಅವರು ಉಳ್ಳಾಲ ಪೊಲೀಸ್ ಠಾಣೆಗೆ ಭೇಟಿ ನೀಡಿ ಕಮಿಷನರ್ ಕುಲದೀಪ್ ಜೈನ್ ಅವರೊಂದಿಗೆ ಮಾತುಕತೆ ನಡೆಸಿದರು.