Advertisement

ಸೋಮಾರಿಗರ ಬೆಂಗಳೂರು

11:39 AM May 13, 2018 | |

ಬೆಂಗಳೂರು: ಸಾಧಕರು, ಪ್ರಚಾರ ರಾಯಭಾರಿಗಳು ಸೇರಿದಂತೆ ಚುನಾವಣಾ ಆಯೋಗವು ಸಾಕಷ್ಟು ಬಾರಿ ನಾನಾ ರೀತಿಯ ಪ್ರಚಾರ, ಅಭಿಯಾನ ಕೈಗೊಂಡರೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪರಿ ಪರಿಯಾಗಿ ಮನವಿ ಮಾಡಿದರೂ ರಾಜಧಾನಿಯಲ್ಲಿ ಒಟ್ಟಾರೆ ಮತದಾನ ಶೇ.50ನ್ನೂ ದಾಟಿಲ್ಲ!

Advertisement

ಆ ಮೂಲಕ ಮತದಾನದ ಬಗೆಗಿನ ನಗರವಾಸಿಗಳ ನಿರಾಸಕ್ತಿ ಈ ಚುನಾವಣೆಯಲ್ಲೂ ಮುಂದುವರಿದಿದೆ. ವಿದ್ಯಾವಂತ, ಪ್ರಜ್ಞಾವಂತ ಮತದಾರರೇ ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಮತದಾನ ಗಣನೀಯವಾಗಿ ಕುಸಿದಿದ್ದು, ಮಧ್ಯಮ ಕೆಳ ವರ್ಗ, ಶ್ರಮಿಕ ವರ್ಗದವರು, ಬಡವರು, ಕೊಳೆಗೇರಿ ನಿವಾಸಿಗಳೇ ಗಣನೀಯ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ಉತ್ತಮ ಮತದಾನವಾಗಿರುವುದು ಕಂಡುಬಂದಿದೆ.

ಮೇ ತಿಂಗಳ ಎರಡನೇ ಶನಿವಾರ ರಜಾ ದಿನವೇ ಮತದಾನ ನಿಗದಿಯಾಗಿತ್ತು. ಹಾಗಾಗಿ ವಾರಾಂತ್ಯದ ರಜೆ ನೆಪದಲ್ಲಿ ಮತದಾನದಿಂದ ದೂರ ಉಳಿಯದೆ ತಮ್ಮ ಹಕ್ಕು ಚಲಾಯಿಸುವಂತೆ ಆಯೋಗ ನಿರಂತರವಾಗಿ ಜಾಗೃತಿ ಮೂಡಿಸಿತ್ತು. ಗಣ್ಯಾತಿಗಣ್ಯರು, ನಾನಾ ಕ್ಷೇತ್ರದ ಗಣ್ಯರು ತಮ್ಮದೇ ಆದ ಶೈಲಿಯಲ್ಲಿ ಪ್ರಜಾತಂತ್ರದ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದರು. ಮತದಾರರನ್ನು ಆಕರ್ಷಿಸಲು ಇದೇ ಮೊದಲ ಬಾರಿ ಆಯೋಗ ಚುನಾವಣಾ ಗೀತೆಯನ್ನು ಸಿದ್ಧಪಡಿಸಿ ಪ್ರಚಾರ ನಡೆಸಿತ್ತು.

ಮತಗಟ್ಟೆ ವಿವರ, ಮತದಾರರ ಸಾಲಿನ ವಿವರ ಇತರೆ ಮಾಹಿತಿಯನ್ನು ಕುಳಿತಲ್ಲೇ ಪಡೆಯುವ ವಿಶೇಷ ಆ್ಯಪ್‌ ಕೂಡ ರೂಪಿಸಲಾಗಿತ್ತು. ಲಾಲ್‌ಬಾಗ್‌ ಸೇರಿದಂತೆ ಜನಸಂದಣಿ ಪ್ರದೇಶಗಳು, ಕಾಲೇಜುಗಳು, ಮಾಲ್‌ಗ‌ಳಲ್ಲಿ ಆಯೋಗ ಜಾಗೃತಿ ಹಾಗೂ ವಿವಿಪ್ಯಾಟ್‌ ಬಳಕೆ ಶಿಬಿರ ಆಯೋಜಿಸಿತ್ತು. ಮತದಾನ ಮಾಡಿ ಶಾಹಿ ಹಾಕಿರುವ ಗುರುತು ತೋರಿದರೆ ಆಯ್ದ ಮಾಲ್‌ಗ‌ಳಲ್ಲಿ ರಿಯಾಯ್ತಿ ಸೌಲಭ್ಯ ನೀಡುವುದಾಗಿ ಘೋಷಿಸಲಾಗಿತ್ತು. ಇಷ್ಟಾದರೂ ಮತದಾನ ಪ್ರಮಾಣ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ.

ಶೇ.50 ದಾಟದ ಮತದಾನ: ಬೆಂಗಳೂರು ನಗರದಲ್ಲಿ ಒಟ್ಟು 91 ಲಕ್ಷ ಮತದಾರರಿದ್ದು, ರಾಜರಾಜೇಶ್ವರಿನಗರ ಹಾಗೂ ಜಯನಗರ ಕ್ಷೇತ್ರ ಹೊರತುಪಡಿಸಿ ಉಳಿದ 26 ಕ್ಷೇತ್ರಗಳಲ್ಲಿ ಸುಮಾರು 85 ಲಕ್ಷ ಮತದಾರರಿದ್ದಾರೆ. ಈ ಪೈಕಿ ಶೇ.50ರಷ್ಟು ಮಂದಿಯಷ್ಟೇ ತಮ್ಮ ಹಕ್ಕು ಚಲಾಯಿಸಿದ್ದಾರೆ. ಅಂದರೆ ಪ್ರತಿ ಅರ್ಹ ಇಬ್ಬರು ಮತದಾರರ ಪೈಕಿ ಒಬ್ಬರು ಮತದಾನ ಮಾಡಿದಂತಾಗಿದೆ.

Advertisement

ಸರ್ಕಾರ, ಪ್ರಜಾಪ್ರಭುತ್ವ, ಅಭಿವೃದ್ಧಿ, ರಾಜಕಾರಣಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಟೀಕೆ, ಟಿಪ್ಪಣಿ ಮಾಡುವವರು, ಸುಧಾರಿತ ಮಾಧ್ಯಮಗಳ ಮೂಲಕ ವ್ಯವಸ್ಥೆಯ ವಿರುದ್ಧ ನಿರಂತರವಾಗಿ ಅಸಮಾಧಾನ ವ್ಯಕ್ತಪಡಿಸುವ ಸುಶಿಕ್ಷಿತರ ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ವಿದ್ಯಾವಂತರು, ಪ್ರಜ್ಞಾವಂತರ ಮತದಾರರಿಗೆ ಹೋಲಿಸಿದರೆ ಬಡವರು, ಶ್ರಮಿಕ ವರ್ಗದವರು, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರು ಸಕ್ರಿಯವಾಗಿ ಮತದಾನದಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು.

ಹೆಬ್ಟಾಳ ಕ್ಷೇತ್ರದಲ್ಲಿ ಅತಿ ಕಡಿಮೆ ಎಂದರೆ ಶೇ.28ರಷ್ಟು ಮತದಾನವಾಗಿದೆ. ಸಿ.ವಿ.ರಾಮನ್‌ ನಗರ ಕ್ಷೇತ್ರದಲ್ಲಿ ಶೇ.32ರಷ್ಟು ಮತದಾನ ದಾಖಲಾಗಿದೆ. ಬೆಂಗಳೂರಿಗೆ ಹೊಂದಿಕೊಂಡಿರುವ ನೆಲಮಂಗಲ, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಕ್ಷೇತ್ರಗಳಲ್ಲಿ ಶೇ.78ರಷ್ಟು ಮತದಾನವಾಗಿದೆ. ಅದರಂತೆ ಗ್ರಾಮೀಣ ಹಾಗೂ ನಗರೀಕರಣ ಹೆಚ್ಚಾಗಿರುವ ಪ್ರದೇಶಗಳಲ್ಲಿ ಮತದಾನರು ತಮ್ಮ ಹಕ್ಕು ಚಲಾಯಿಸುತ್ತಿದ್ದು, ನಗರ ಪ್ರದೇಶದವರು ಮತದಾನದಿಂದ ವಿಮುಖರಾಗುತ್ತಿರುವುದು ಕಂಡುಬಂದಿದೆ.

ಕ್ಷೇತ್ರವಾರು ಮತದಾನ ವಿವರ (ಶನಿವಾರ ರಾತ್ರಿ 7.30ರವರೆಗಿನ ಆಯೋಗದ ಮಾಹಿತಿ)
ಯಲಹಂಕ    ಶೇ.62.90
ಬ್ಯಾಟರಾಯನಪುರ    ಶೇ.53.53
ಯಶವಂತಪುರ    ಶೇ.55
ದಾಸರಹಳ್ಳಿ    ಶೇ.48.03
ಮಹದೇವಪುರ    ಶೇ.54
ಶಿವಾಜಿನಗರ    ಶೇ.53.50
ಶಾಂತಿನಗರ    ಶೇ.44.69
ಗಾಂಧಿನಗರ    ಶೇ.36
ರಾಜಾಜಿನಗರ    ಶೇ.50.5
ಚಾಮರಾಜಪೇಟೆ    ಶೇ.44.49
ಕೆ.ಆರ್‌.ಪುರ    ಶೇ.40
ಮಹಾಲಕ್ಷ್ಮೀ ಲೇಔಟ್‌    ಶೇ.45
ಮಲ್ಲೇಶ್ವರ    ಶೇ.52
ಹೆಬ್ಟಾಳ    ಶೇ.28
ಪುಲಿಕೇಶಿನಗರ    ಶೇ.43.40
ಗೋವಿಂದರಾಜನಗರ    ಶೇ.38
ವಿಜಯನಗರ    ಶೇ.41
ಬಸವನಗುಡಿ    ಶೇ.52.80
ಪದ್ಮನಾಭನಗರ    ಶೇ.38
ಬಿಟಿಎಂ ಲೇಔಟ್‌    ಶೇ.48
ಚಿಕ್ಕಪೇಟೆ    ಶೇ.57.66
ಸಿ.ವಿ.ರಾಮನ್‌ನಗರ    ಶೇ.32
ಬೊಮ್ಮನಹಳ್ಳಿ    ಶೇ.45
ಸರ್ವಜ್ಞನಗರ    ಶೇ.46.56
ಬೆಂಗಳೂರು ದಕ್ಷಿಣ    ಶೇ.50.61
ಆನೇಕಲ್‌    ಶೇ.54

Advertisement

Udayavani is now on Telegram. Click here to join our channel and stay updated with the latest news.

Next