Advertisement

ಯಾರೋ ಮಾಡಿದ ತಪ್ಪಿಗೆ ಮತ್ಯಾರಿಗೋ ಶಿಕ್ಷೆ

12:35 AM Sep 24, 2019 | Lakshmi GovindaRaju |

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಂದ ದಂಡ ಸಂಗ್ರಹ ಮಾಡುತ್ತಿರುವ ಸಂಚಾರ ಪೊಲೀಸರ ವಿರುದ್ಧ ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕವಾಗಿಯೇ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ತನ್ನ ದ್ವಿಚಕ್ರ ವಾಹನ ಟೋಯಿಂಗ್‌ ಮಾಡಿದ ಅಶೋಕನಗರ ಸಂಚಾರ ಪೊಲೀಸ್‌ ಠಾಣೆಯ ಅಧಿಕಾರಿಯ ವಿರುದ್ಧ ಅಸಮಾಧನಗೊಂಡಿದ್ದ ವಾಹನ ಸವಾರನೊಬ್ಬ, ಹೈಗ್ರೌಂಡ್ಸ್‌ ಸಂಚಾರ ಠಾಣೆ ಕಾನ್‌ಸ್ಟೆಬಲ್‌ ಒಬ್ಬರ ದ್ವಿಚಕ್ರ ವಾಹನದಲ್ಲಿದ್ದ ಜರ್ಕಿನ್‌, ಟ್ಯಾಬ್‌, ಮುಖಕ್ಕೆ ಧರಿಸುವ ಮಾಸ್ಕ್ ಕದ್ದು ಪರಾರಿಯಾಗಿದ್ದಾನೆ. ಈ ಸಂಬಂಧ ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಹೈಗ್ರೌಂಡ್ಸ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಸ್ತಫ‌ ಎಂಬವರು ಅಶೋಕನಗರ ಸಂಚಾರ ಠಾಣೆ ಸಮೀಪದಲ್ಲಿರುವ ಪೊಲೀಸ್‌ ವಸತಿ ಗೃಹದಲ್ಲಿ ವಾಸವಾಗಿದ್ದಾರೆ. ಕೆಲ ದಿನಗಳ ಹಿಂದೆ ತಡರಾತ್ರಿ ಕುಮಾರಕೃಪಾ ಅತಿಥಿ ಗೃಹ ಮುಂಭಾಗ ದೊಡ್ಡ ಮರವೊಂದು ಬಿದ್ದಿತ್ತು. ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮುಸ್ತಾಫ‌, ಬಿಬಿಎಂಪಿ ಸಿಬ್ಬಂದಿ ಹಾಗೂ ಇತರೆ ಸಹೋದ್ಯೋಗಿಗಳ ಜತೆ ಸೇರಿ ಮರ ತೆರವುಗೊಳಿಸಿ ತಡರಾತ್ರಿ ಮೂರು ಗಂಟೆ ಸುಮಾರಿಗೆ ತಮ್ಮ ಬೈಕ್‌ನಲ್ಲಿ ಮನೆಗೆ ತೆರಳಿ, ತಮ್ಮ ವಾಕಿ ಟಾಕಿ ಹಾಗೂ ಇತರೆ ವಸ್ತುಗಳನ್ನು ಮನೆಯೊಳಗೆ ತೆಗೆದುಕೊಂಡು ಹೋಗಿದ್ದಾರೆ.

ಅಷ್ಟರಲ್ಲಿ ಅಶೋಕನಗರದ ನಂಜಪ್ಪ ವೃತ್ತದಲ್ಲಿ ನೋಪಾರ್ಕಿಂಗ್‌ ಸ್ಥಳದಲ್ಲಿ ನಿಂತಿದ್ದ ವಾಹನವನ್ನು ಅಶೋಕನಗರ ಸಂಚಾರ ಪೊಲೀಸರು ಟೋಯಿಂಗ್‌ ಮಾಡಿ, ಪೊಲೀಸ್‌ ವಸತಿ ಗೃಹಗಳ ಸಮೀಪದಲ್ಲಿ ಹಾಕಿದ್ದರು. ಅದರಿಂದ ಆಕ್ರೋಶಗೊಂಡಿದ್ದ ವಾಹನ ಸವಾರ ತನ್ನ ದ್ವಿಚಕ್ರ ವಾಹನವನ್ನು ಹುಡುಕಿಕೊಂಡು ಪೊಲೀಸ್‌ ವಸತಿ ಗೃಹ ಸಮೀಪ ಬಂದಿದ್ದಾನೆ. ಇದೇ ವೇಳೆ ಸಂಚಾರ ಪೊಲೀಸರ ಸಮವಸ್ತ್ರದಲ್ಲಿ ಬಂದ ಮುಸ್ತಾಫ‌, ಮನೆ ಮುಂದೆ ಬೈಕ್‌ ನಿಲ್ಲಿಸಿ ಒಳ ಹೋಗಿದನ್ನು ಗಮನಿಸಿದ ಆರೋಪಿ, ನೇರವಾಗಿ ಮುಸ್ತಫ‌ ಮನೆ ಬಳಿ ಹೋಗಿ, ಅವರ ಬೈಕ್‌ಗೆ ಅಳವಡಿಸಿರುವ ಪ್ಲಾಸ್ಟಿಕ್‌ ಬಾಕ್ಸ್‌ನ ಬೀಗ ಮುರಿದು ಅದರಲ್ಲಿದ್ದ ಜರ್ಕಿನ್‌, ಟ್ಯಾಬ್‌, ಮುಖಕ್ಕೆ ಧರಿಸುವ ಮಾಸ್ಕ್ ಕಳವು ಮಾಡಿದ್ದಾನೆ. ಬಾಕ್ಸ್‌ನ ಲಾಕ್‌ ಮುರಿದ ಸದ್ದು ಕೇಳಿ ಮುಸ್ತಫ‌ ಹೊರಬರುತ್ತಿದ್ದಂತೆ ಆರೋಪಿ ಓಡಿ ಹೋಗಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next