Advertisement

ಬಿಎಸ್ ವೈ ದೆಹಲಿ ವಿಮಾನವೇರಿದ ಬೆನ್ನಲ್ಲೇ ಬಿಜೆಪಿ ನಾಯಕರ ರಹಸ್ಯ ಮಾತುಕತೆ ಆರಂಭ!

04:11 PM Jul 16, 2021 | Team Udayavani |

ಬೆಂಗಳೂರು: ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಸದ್ಯ ದೊಡ್ಡ ಸುದ್ದಿಯಲ್ಲಿ ಇರದಿದ್ದರೂ ಜೀವಂತವಿದೆ ಎನ್ನುವುದಕ್ಕೆ ಕೆಲವು ಬೆಳವಣಿಗೆಗಳು ಸಾಕ್ಷಿಯಾಗುತ್ತದೆ. ಕೆಲವು ನಾಯಕರ ಬಹಿರಂಗ ಹೇಳಿಕೆಗಳು ಒಂದೆಡೆಯಾದರೆ ಮತ್ತೆ ಕೆಲವು ನಾಯಕರ ಸಭೆಗಳು, ಮಾತುಕತೆಗಳು ಇದಕ್ಕೆ ಪುಷ್ಠಿ ನೀಡುತ್ತಿದೆ.

Advertisement

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಧಾನಿ ಭೇಟಿಗೆಂದು ಶುಕ್ರವಾರ ದೆಹಲಿ ವಿಮಾನ ಹತ್ತಿದ ಕೂಡಲೇ ಬಿಜೆಪಿಯಲ್ಲಿ ಕೆಲವು ಬೆಳವಣಿಗೆಗಳು ನಡೆದಿದೆ. ಅತ್ತ ಬಿಎಸ್ ವೈ ತಮ್ಮ ಪುತ್ರರೊಂದಿಗೆ ದೆಹಲಿಯತ್ತ ಮುಖ ಮಾಡಿದ್ದರೆ ಇತ್ತ ಕಂದಾಯ ಸಚಿವ ಆರ್.ಅಶೋಕ್ ಕಚೇರಿಯಲ್ಲಿ ಮಹತ್ವದ ಸಭೆ ನಡೆಯುತ್ತಿದೆ.

ಕಂದಾಯ ಸಚಿವರ ಕಚೇರಿಯಲ್ಲಿ ಸಚಿವರೊಂದಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಅರವಿಂದ ಬೆಲ್ಲದ್ ರಹಸ್ಯ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿ ಪರ ಪಾಳಯದಲ್ಲಿ ಕಾಣಿಸಿಕೊಂಡಿರುವ ಅಶೋಕ್, ಬೊಮ್ಮಾಯಿ ಮತ್ತು ವಿರೋಧಿ ಪಾಳಯದಲ್ಲಿ ಕಾಣಿಸಿಕೊಂಡಿರುವ ಅರವಿಂದ ಬೆಲ್ಲದ ನಡುವಿನ ಈ ಚರ್ಚೆ ಹಲವು ಕುತೂಹಲಗಳಿಗೆ ಕಾರಣವಾಗಿದೆ.

ರಾಜಭವನಕ್ಕೆ ನಳಿನ್ ಭೇಟಿ: ಬಿಜೆಪಿ ರಾಜ್ಯಾಧಕ್ಷ ನಳಿನ್ ಕುಮಾರ್ ಕಟೀಲ್ ಅವರು ಇಂದು ರಾಜಭವನಕ್ಕೆ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿ ದೆಹಲಿ ಭೇಟಿ ಬೆನ್ನಲ್ಲಿಯೇ ರಾಜ್ಯಾಧ್ಯಕ್ಷರ ಈ ಗವರ್ನರ್ ಭೇಟಿ ಕೂಡಾ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಬಿಎಸ್‌ವೈ ಬೆಂಬಲಿತ ಲಿಂಗಾಯತ ನಾಯಕರನ್ನು ಕಾಂಗ್ರೆಸ್ ಗೆ ಕರೆ ತರುತ್ತೇವೆ: ಎಂ.ಬಿ. ಪಾಟೀಲ್

Advertisement

ನೂತನ ರಾಜ್ಯಪಾಲರಾಗಿ ನೇಮಕರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಶುಭ ಕೋರುವ ಹಾಗೂ ಕುಶಲೋಪರಿ ವಿಚಾರಿಸುವ ನೆಪದಲ್ಲಿ ನಳಿನ್ ಕುಮಾರ್ ಕಟೀಲ್ ರಾಜಭವನಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಆದರೆ ಇದರೊಂದಿಗೆ ರಾಜಕೀಯ ವಿದ್ಯಮಾನಗಳ ಬಗ್ಗೆ ಕೂಡಾ ಚೆರ್ಚೆ ನಡೆಸಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತದೆ.

ಸಿಎಂ ಭೇಟಿಯಲ್ಲಿ ಹಲವು ನಿರೀಕ್ಷೆ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನಾರಚನೆಯ ಬಳಿಕ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ದೆಹಲಿಗೆ ಹೊರಟಿದ್ದಾರೆ. ಮುಖ್ಯಮಂತ್ರಿ ಕಚೇರಿ ಮಾಹಿತಿ ಪ್ರಕಾರ ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಪಡೆಯುವ ಸಲುವಾಗಿ ಈ ಭೇಟಿ ನಡೆಯಲಿದೆ. ಆದರೆ ರಾಜ್ಯ ಸಚಿವ ಸಂಪುಟ ಪುನಾರಚನೆಯೂ ಕಾರ್ಯಸೂಚಿಯಲ್ಲಿದೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಜು. 26ಕ್ಕೆ 2 ವರ್ಷ ಪೂರೈಸಲಿದೆ. ಸಂಪುಟ ಪುನಾರಚನೆ ಮಾಡಿ ಹೊಸಬರಿಗೆ ಅವಕಾಶ ಕೊಡಬೇಕೆಂಬ ಬೇಡಿಕೆ ಶಾಸಕರಿಂದ ಇದೆ. ಈ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆಯ ಬಗೆಗೂ ಯಡಿಯೂರಪ್ಪ ವರಿಷ್ಠರ ಜತೆಗೆ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬಿಎಸ್ ವೈ ಜೊತೆ ಪುತ್ರರಾದ ರಾಘವೇಂದ್ರ ಮತ್ತು ವಿಜಯೇಂದ್ರ ಕೂಡಾ ದೆಹಲಿಗೆ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next