Advertisement

ಬದುಕು ಹೊರಟ ಬಿಂದುವಿಗೆ ಮರಳುವುದಿಲ್ಲ; ಮರಳಬಾರದು ಕೂಡ!

11:12 PM Aug 25, 2019 | mahesh |

ಈ ವರ್ಷದ ಕೃಷ್ಣ ಜನ್ಮಾಷ್ಟಮಿ ಮುಗಿಯಿತು. ಅನುದಿನವೂ ನಾವು ದೇವರಾಗಿ ಸ್ಮರಿಸುವ, ಪೂಜಿಸುವ, ಆರಾಧಿಸುವ, ಶರಣೆನ್ನುವ ದೇವರನ್ನು ನಮ್ಮದೇ ಮನೆಯ ಮುದ್ದುಕಂದನಾಗಿ ಕಾಣುವ ಸದವಕಾಶಕ್ಕೆ ಇನ್ನು ಬರುವ ವರ್ಷದ ವರೆಗೆ ಕಾಯಬೇಕು.

Advertisement

ನಮ್ಮ ಒಂದೊಂದು ಹಬ್ಬಗಳನ್ನು ನೋಡುತ್ತ ಹೋದರೆ ದೇವರಲ್ಲಿ ನಮ್ಮ ಪ್ರತಿಬಿಂಬವನ್ನು ಕಂಡು ನಮ್ಮನ್ನೇ ನಾವು ಸ್ವೀಕರಿಸಿಕೊಳ್ಳುವ, ನಮ್ಮ ಬದುಕಿನ ಮಹೋನ್ನತಿಕೆಯನ್ನು ಕಾಣುವ ಅವಕಾಶಗಳು ಅವೇನೋ ಎಂಬ ಭಾವನೆ ಬರುತ್ತದೆ. ಆಗಷ್ಟೇ ಜನಿಸಿದ, ಬಳಿಕ ತುಸು ದೊಡ್ಡವನಾಗಿ ಬಾಲಲೀಲೆಗಳನ್ನು ಪ್ರದರ್ಶಿಸಿದ ಪುಟಾಣಿ ಕೃಷ್ಣನನ್ನು ಪೂಜಿಸುವುದಕ್ಕೆ ಕೃಷ್ಣಾಷ್ಟಮಿ. ಮುಂದೆ ಬರುವ ಚೌತಿಯಲ್ಲಿ ವಿನಾಯಕನ ಬಗೆಬಗೆಯ ಆಹಾರ ಸೇವನೆಯ ಹೊಟ್ಟೆಬಾಕ ಪ್ರವೃತ್ತಿಯೇ ವಿಶೇಷ. ಇವೆಲ್ಲದಕ್ಕಿಂತ ಹಿಂದೆ ನಾಗರ ಪಂಚಮಿ ಬರುತ್ತದೆ. ಅದು ವಾತಾವರಣದಲ್ಲಿ ಭಾರೀ ಉಷ್ಣ ಪ್ರವೃತ್ತಿ ಇರುವ ಸಮಯ. ಆಗ ನಾಗನಿಗೆ ಹಾಲೆರೆದು ತಂಪು ಮಾಡುತ್ತೇವೆ. ಹೀಗೆ ಒಂದೊಂದು ಹಬ್ಬದಲ್ಲಿಯೂ ನಮ್ಮದೇ ಆಹಾರ – ವಿಹಾರ ವಿಲಾಸಗಳು ದೇವರಲ್ಲಿ ಪ್ರತಿಬಿಂಬಿಸುವ ಹಾಗೆ ಕಾಣಿಸುತ್ತದೆ. ಹೌದೋ ಅಲ್ಲವೋ; ಆ ದೇವರೇ ಹೇಳಬೇಕು! ಅದು ಬದಿಗಿರಲಿ. ಅಷ್ಟಮಿಯ ಉಂಡೆ ಚಕ್ಕುಲಿಗಳನ್ನು ಮೆಲ್ಲುತ್ತಾ ಇರುವಾಗ ಚಿತ್ರ ವಿಚಿತ್ರ ಆಲೋಚನೆಗಳು ಮನಸ್ಸಿನಲ್ಲಿ ಕಾಡಿದವು.

ಶ್ರೀಕೃಷ್ಣನದ್ದು ಎಷ್ಟು ನಿಬಿಡವಾದ ಬದುಕು ನೋಡಿ. ಹುಟ್ಟಿನಿಂದ ನಿರ್ಯಾಣದ ವರೆಗೆ ಅನುಕ್ಷಣವೂ ಮಹತ್ಕಾರ್ಯಗಳು ದಟ್ಟಣಿಸಿದ ಜೀವನ ಅವನದು. ಪ್ರಾಯಶಃ ಮನುಷ್ಯ ಬದುಕಬೇಕು ಹೀಗೆ ಎಂದು ತನ್ನ ಜೀವತದ ಮೂಲಕ ತೋರಿಸಿಕೊಟ್ಟ ದೇವನಾತ. ಏನಾದರೂ ಮಾಡದೆ ಇದ್ದರೆ ಮನುಷ್ಯ ಸೋಮಾರಿಯಾಗುತ್ತಾನೆ. ಅಪಾಯಕಾರಿಯೂ ಆಗುತ್ತಾನೆ. ಕೆಲಸವಿಲ್ಲದ ಖಾಲಿ ಮನಸ್ಸು ದೆವ್ವಗಳ ಆಡುಂಬೊಲ ಅಂತ ಇಂಗ್ಲಿಷ್‌ ಗಾದೆಯೇ ಇದೆ. ಸರಿಯಾದ ಉದ್ಯೋಗವಿಲ್ಲದೆ ಯುವಕರು ಅಡ್ಡದಾರಿ ಹಿಡಿದ ನೂರಾರು ಉದಾಹರಣೆಗಳು ನಮ್ಮ ಕಣ್ಮುಂದೆಯೇ ಇವೆ.

ಕೃಷ್ಣನದು ಹಾಗಲ್ಲ. ಪ್ರತಿಕ್ಷಣದಲ್ಲೂ ಏನಾದರೂ ಒಂದು ಮಾಡುತ್ತಿದ್ದವನಾತ. ಅಂಬೆಗಾಲಿಕ್ಕುತ್ತಿದ್ದ ಹಾಗೆ ಗೋಪಿಕೆಯರನ್ನು ತುಂಟಾಟಗಳ ಮೂಲಕ ಕಾಡಲಾರಂಭಿಸಿದ. ಆ ವೇಳೆಗೆ ಅಷ್ಟಮ ಗರ್ಭಸ್ಥ ಶಿಶು ನಂದಗೋಕುಲದಲ್ಲಿ ಬೆಳೆಯುತ್ತಿದೆ ಎಂಬ ವಾರ್ತೆ ಕಂಸನ ಕಿವಿ ಮುಟ್ಟಿತ್ತು. ಆತ ಒಬ್ಬೊಬ್ಬರಾಗಿ ರಕ್ಕಸರನ್ನು ಕಳುಹಿಸಿದ. ಕೃಷ್ಣನ ಬಾಲ ಲೀಲೆಗಳು ದುಷ್ಟ ಶಿಕ್ಷಣ- ಶಿಷ್ಟ ರಕ್ಷಣವಾಗಿ ಬದಲಾಗುವುದು ಇಲ್ಲಿಂದ. ಶಕಟ ಧೇನುಕಾಸುರರು, ಪೂತನಿ, ಬಕಾಸುರನೇ ಆದಿಯಾಗಿ ಹಲವು ರಕ್ಕಸರನ್ನು ಕೊಂದು ನಿಗ್ರಹಿಸಿದ್ದು ಆಗಲೇ. ಆ ಹೊತ್ತಿಗೆ ಬಾಲ ಲೀಲೆಗಳೇ ಅವನ ಹೋರಾಟದ ಮಾರ್ಗವೂ ಆಗಿದ್ದವು. ಅದರ ಜತೆಗೆ ಶರಣಾಗತರನ್ನು ಉದ್ಧರಿಸುವ ಕಾರ್ಯವನ್ನೂ ಕೃಷ್ಣ ಮಾಡಿದ. ಯಶೋದೆ ತನ್ನನ್ನು ಕಟ್ಟಿಹಾಕಿದ್ದ ಒರಳನ್ನು ಎಳೆದುಕೊಂಡು ಹೋಗಿ ವೃಕ್ಷರೂಪಿಗಳಾಗಿ ನಿಂತಿದ್ದ ಇಬ್ಬರು ಶಾಪಗ್ರಸ್ತ ಗಂಧರ್ವರನ್ನು ಆತ ಉದ್ಧರಿಸಿದ.

ಕೊಂಚ ದೊಡ್ಡವನಾಗುತ್ತಿದ್ದಂತೆ ಕಾಳೀಯ ಮರ್ದನ, ಗೋವರ್ಧನೋದ್ಧರಣದಂತಹ ಕೃಷ್ಣನ ಮಹತ್ಕಾರ್ಯಗಳೇ ಮನಸ್ಸನ್ನು ತುಂಬುತ್ತವೆ. ಶ್ರೀಕೃಷ್ಣನನ್ನು ಶ್ರೀಮನ್ನಾರಾಯಣನ ಅವತಾರಗಳಲ್ಲಿ ಅತ್ಯುತ್ತಮ ಎನ್ನುವುದುಂಟು. ಒಂದೊಂದು ಅವತಾರಗಳಲ್ಲಿ ಒಂದೊಂದು ಗುಣವಿಶೇಷಗಳು, ಉದ್ದೇಶಗಳಾದರೆ ಮನುಷ್ಯ ಬದುಕಿನ ಪೂರ್ಣತ್ವವನ್ನು ತೋರಿಸಿಕೊಡುವಂಥದ್ದು ಕೃಷ್ಣಾವತಾರ ಎನ್ನಿಸುತ್ತದೆ. ಶ್ರೀಕೃಷ್ಣನನ್ನು ಉತ್ತಮ ಮನುಷ್ಯನಾಗಿ ಪರಿಭಾವಿಸಿದರೆ ಕೆಲವಂಶಗಳು ಮನಸ್ಸನ್ನು ತುಂಬ ಕಾಡುತ್ತವೆ. ಮಥುರೆಯಿಂದ ಅಕ್ರೂರ ಬಂದು ಬಿಲ್ಲಹಬ್ಬಕ್ಕೆ ಆಹ್ವಾನಿಸಿದ ಬಳಿಕದ ವಿದ್ಯಮಾನಗಳು ಅಂಥವುಗಳಲ್ಲಿ ಒಂದು.

Advertisement

ಅಲ್ಲಿಯ ತನಕ ಪರಿಪೂರ್ಣವಾಗಿ ಬದುಕಿದ್ದ, ಒಂದು ಭಾಗವೇ ಆಗಿ ಹೋಗಿದ್ದ, ರಾಧೆಯನ್ನು ಪ್ರೀತಿಸಿದ್ದ, ಅಸಂಖ್ಯ ಗೋಪಿಕೆಯರ ಸ್ನೇಹಿತನಾಗಿ ಬೆಳೆದು ಬಂದಿದ್ದ ನಂದಗೋಕುಲವನ್ನು ತೊರೆಯುವಾಗ ಕೃಷ್ಣನ ಮನಸ್ಸು ಹೇಗಿತ್ತು ಎನ್ನುವುದು ಸದಾ ಬೆರಗು ಹುಟ್ಟಿಸುತ್ತದೆ. ಇಡಿಯ ನಂದಗೋಕುಲ ಪ್ರೀತಿಸಿದ್ದರೆ ಕೃಷ್ಣನಿಗೂ ನಂದಗೋಕುಲದ ಬಗ್ಗೆ ಒಲವು, ಪ್ರೀತಿ ಇದ್ದಿರಲೇ ಬೇಕು. ಬಹಿರಂಗವಾಗಿ ಎಲ್ಲೂ ಕಾಣಿಸದೆ ಇದ್ದರೂ ಅದವನ ಮನಸ್ಸಿನಲ್ಲಿ ಸುಪ್ತವಾಗಿ ಇದ್ದಿರಲೇ ಬೇಕು. ಆದರೆ, ನಂದಗೋಕುಲವನ್ನು ತೊರೆದು ಅಕ್ರೂರನೊಂದಿಗೆ ತೆರಳಿದ ಶ್ರೀಕೃಷ್ಣ ಮತ್ತೆಂದೂ ಅಲ್ಲಿಗೆ ಕಾಲಿರಿಸುವುದಿಲ್ಲ.

ನಂದಗೋಕುಲದಲ್ಲಿ ಹೇಗಿತ್ತೋ ಹಾಗೆಯೇ ಅವನ ಮುಂದಿನ ಬದುಕು ಕೂಡ ಪ್ರೀತಿಯ ಗೋಪಿಕೆಯರನ್ನು, ರಾಧೆಯನ್ನು, ಎತ್ತಿ ಆಡಿಸಿದ ಯಶೋದೆ- ನಂದಗೋಪರನ್ನು ಒಮ್ಮೆಯೂ ನೆನಪಿಸಿಕೊಳ್ಳದಷ್ಟು ಮಹತ್ಕಾರ್ಯಗಳನ್ನು ತುಂಬಿಕೊಂಡಿತ್ತು. ಶ್ರೀಕೃಷ್ಣಾವತಾರದಲ್ಲಿ ಅವನು ಹೆಗಲ ಮೇಲೆ ಹೊತ್ತುಕೊಂಡು ಬಂದ ಜವಾಬ್ದಾರಿಗಳು ಹಾಗಿದ್ದವು; ಮನಸ್ಸಿನಲ್ಲಿ ಮತ್ತೆ ನಂದಗೋಕುಲದಲ್ಲೊಮ್ಮೆ ಅಡ್ಡಾಡುವ ಅಸೀಮ ಹಂಬಲ ಇದ್ದರೂ ಅದನ್ನು ತೋರಗೊಡದಷ್ಟು!

ನಾವೂ ಹಾಗೆಯೇ ಅಲ್ಲವೆ? ಮತ್ತೂಮ್ಮೆ ಬಾಲ್ಯಕ್ಕೆ ಮರಳಬೇಕು, ಅಮ್ಮನ ಮಡಿಲಿನಲ್ಲೊಮ್ಮೆ ಮಲಗಬೇಕು… ಎಷ್ಟೆಲ್ಲ ಆಸೆಗಳು! ಆದರೆ ನಮ್ಮ ಜವಾಬ್ದಾರಿಗಳು ಅವಕ್ಕೆ ಅವಕಾಶ ಕೊಡುವುದಿಲ್ಲ; ಬಾಲ್ಯಕ್ಕೆ, ಕಳೆದುಹೋದುದಕ್ಕೆ ಮತ್ತೆ ಮರಳಲಾಗುವುದಿಲ್ಲ. ಮರಳಬಾರದು ಕೂಡ! ಜೀವನ ಮತ್ತೆ ಹೊರಟ ಬಿಂದುವಿಗೆ ಮರಳಬಾರದು; ಮುಂದಕ್ಕೆ ಸಾಗುತ್ತಿರ ಬೇಕು, ಅಲ್ಲವೆ?

  ಪೂರ್ಣಾನಂದ

Advertisement

Udayavani is now on Telegram. Click here to join our channel and stay updated with the latest news.

Next