Advertisement

ಕುಡಿಯುವ ನೀರಿನ ಸಮಸ್ಯೆಗೆ ಸೋಮಶೇಖರ ರೆಡ್ಡಿ ಹೊಣೆ

03:15 PM May 14, 2019 | Team Udayavani |

ಬಳ್ಳಾರಿ: ಕುಡಿಯುವ ನೀರಿನ ಸಮಸ್ಯೆ ನಗರ ಶಾಸಕ ಬಿ.ಸೋಮಶೇಖರರೆಡ್ಡಿ ಅವರಿಗೂ ತಟ್ಟಿರುವುದು ಅವರ ಅಸಹಾಯಕತೆ ತೋರುತ್ತಿದ್ದು, ನೈತಿಕ ಹೊಣೆ ಹೊತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಯುವಸೇನಾ ಸೋಷಿಯಲ್ ಆ್ಯಕ್ಷನ್‌ ಕ್ಲಬ್‌ ಅಧ್ಯಕ್ಷ ಮೇಕಲ ಈಶ್ವರರೆಡ್ಡಿ ಆಗ್ರಹಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಶಾಸಕ ಜಿ.ಸೋಮಶೇಖರರೆಡ್ಡಿಯವರು ತಮ್ಮ ಮನೆಗೆ ಖಾಸಗಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿಕೊಂಡಿರುವುದು ಎಲ್ಲ ಪತ್ರಿಕೆಗಳಲ್ಲಿ ಬಿತ್ತರವಾಗಿದೆ. ವಾಸ್ತವದಲ್ಲಿ ಬಳ್ಳಾರಿ ನಗರಕ್ಕೆ ಪ್ರತಿ 10 ರಿಂದ 15 ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಇದನ್ನು ಸರಿಪಡಿಸಲಾಗದೆ, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗದೆ ತಮಗೂ ನೀರಿನ ಬಿಸಿ ತಟ್ಟಿದೆ ಎಂದು ಪತ್ರಿಕೆಗಳಲ್ಲಿ ಪ್ರಚಾರ ಪಡಿಸಿ ಸಾರ್ವಜನಿಕರ ಪ್ರಶ್ನೆಗಳಿಂದ ನುಣುಚಿಕೊಳ್ಳುತ್ತಿದ್ದಾರೆ. ಮುಂದಿನ 15 ದಿನಗಳ ಒಳಗಾಗಿ ಇರುವ ಲೋಪದೋಷಗಳನ್ನು ಸರಿಪಡಿಸಿ ಕನಿಷ್ಠ 10 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡದಿದ್ದಲ್ಲಿ ಪಾಲಿಕೆ ಎದುರು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಗರಕ್ಕೆ ಕುಡಿವ ನೀರು ಪೂರೈಸುವ ಅಲ್ಲೀಪುರ ಕೆರೆ ಏಳುವರೆ ಮೀಟರ್‌ ನೀರಿನ ಸಾಮರ್ಥ್ಯದಿಂದ ಐದುವರೆ ಮೀಟರ್‌ಗೆ ಇಳಿಕೆಯಾಗಿದೆ. ಇದಕ್ಕೆ ಕಾರಣವೇನು? ಕೊಳಗಲ್ಲು ಗ್ರಾಮದಲ್ಲಿ ಹೊಸದಾಗಿ ಕೆರೆ ನಿರ್ಮಿಸುವುದಾಗಿ ಮಾಜಿ ಸಚಿವ ಜನಾರ್ದನರೆಡ್ಡಿ ಅವಧಿಯಲ್ಲಿ ಸ್ಥಳ ಪರಿಶೀಲನೆ ಮಾಡಲಾಗಿತ್ತು. ಅದು ಸಾಧ್ಯವಾಗಿಲ್ಲ. ನಗರಕ್ಕೆ ವಾರದ ಏಳು ದಿನಗಳೂ ಕುಡಿವ ನೀರು ಪೂರೈಸುವ 24X7 ಕುಡಿಯುವ ನೀರಿನ ಯೋಜನೆ ಎಲ್ಲಿಗೆ ಬಂದು ನಿಂತಿದೆ. ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಇಷ್ಟೆಲ್ಲ ಸಮಸ್ಯೆಗಳು ಇದ್ದರೂ, ಸರಿಪಡಿಸಲಾಗದ ಶಾಸಕರು ತಮ್ಮ ಮನೆಗೂ ನೀರಿನ ಬಿಸಿ ಎನ್ನುತ್ತಿರುವುದು ಅವರ ನಿಸ್ಸಾಹಾಯಕತೆ ತೋರುತ್ತಿದ್ದು, ಇಂಥ ಶಾಸಕರು ನಮಗೆ ಬೇಡ. ಕೂಡಲೇ ನೈತಿಕ ಹೊಣೆ ಹೊತ್ತು ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಎಸ್‌.ಕೃಷ್ಣಾ, ಜಿ.ಎಂ.ಬಾಷಾ, ಸಲಾವುದ್ದೀನ್‌, ತೇಜು ಪಾಟೀಲ್, ಎಂ.ರಾಮಕೃಷ್ಣ, ಶಿವಾನಂದ, ಎಂ.ಕೆ.ಜಗನ್ನಾಥ, ಬಿ.ನರಸಿಂಹಬಾಬು, ಶ್ರೀನಿವಾಸ, ಕೆ.ವೆಂಕಟೇಶ್‌, ಶ್ರೀಧರ್‌, ಪಿ.ನಾರಾಯಣಿ ಮತ್ತು ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next