Advertisement

ಬೈಪನಹಳ್ಳಿ ನೀರಿನ ಸಮಸ್ಯೆ ಬಗೆಹರಿಸಿ

12:29 PM Jun 26, 2019 | Suhan S |

ಕೋಲಾರ: ತಾಲೂಕಿನ ಬೈಪನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಕೂಡಲೇ ಸಮಸ್ಯೆ ಬಗೆಹರಿಸಲು ಕೊಳವೆ ಬಾವಿ ಕೊರೆಸಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಬೈಪನಹಳ್ಳಿ ಗ್ರಾಮಸ್ಥರಿಂದ ಜಿಪಂ ಸಿಇಒಗೆ ಮನವಿ ನೀಡಿ ಅಗ್ರಹಿಸಲಾಯಿತು.

Advertisement

ಗ್ರಾಮದಲ್ಲಿರುವ ನೀರಿನ ಸಮಸ್ಯೆ ಬಗೆಹರಿಸುವುದರ ಜೊತೆಗೆ, ಬೋರ್‌ವೆಲ್ ಕೊರೆಸಲು ಅಡ್ಡಪಡಿಸುತ್ತಿರುವ ವ್ಯಕ್ತಿಗಳ ವಿರುದ್ಧ ಹಾಗೂ ಒತ್ತುವರಿಯಾಗಿರುವ ಕೆರೆ ಅಂಗಳವನ್ನು ಸರ್ವೇ ಮಾಡಿಸಿ, ಒತ್ತುವರಿದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬೈಪನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದರು.

ಉರಿಗಿಲಿ ಗ್ರಾಪಂ ವ್ಯಾಪ್ತಿಗೆ ಬರುವ ಬೈಪನಹಳ್ಳಿಯಲ್ಲಿ 3 ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು, ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಇದೇ ತಿಂಗಳ ಜೂ.3ರಂದು ಸಂಬಂಧಪಟ್ಟ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗೆ ಮನವಿ ಮಾಡಿದ್ದರೂ ಇದುವರೆಗೂ ನೀರಿನ ಸಮಸ್ಯೆ ಬಗೆಹರಿಸದ ಜೊತೆಗೆ ಊರಿನ ವಾಸ್ತವಾಂಶ ತಿಳಿದುಕೊಳ್ಳದೆ ಜನರ ಆಕ್ರೋಶಕ್ಕೆ ಕಾರಣರಾಗುತ್ತಿದ್ದಾರೆ.

ಕೂಡಲೇ ಸಮಸ್ಯೆ ಬಗೆಹರಿಸಿ: ಸರಕಾರಿ ಕೊಳವೆ ಬಾವಿ ಕೊರೆಸಲು ಕೆರೆ ಅಂಗಳದಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಅಡ್ಡಪಡಿಸುತ್ತಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ನೀರಿನ ಸಮಸ್ಯೆ ಬಗೆಹರಿಸಲು ವಿಫ‌ಲವಾಗಿ ನೀರಿಗಾಗಿ ಕೂಲಿ ನಾಲಿ ಬಿಟ್ಟು ಕಿ.ಮೀ.ಗಟ್ಟಲೇ ಅಲೆಯಬೇಕಾದ ಪರಿಸ್ಥಿತಿಯಿ ಇದೆ ಎಂದು ಕೂಡಲೇ ಕೊಳವೆ ಬಾವಿ ಕೊರೆಸಿ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.

ಜನರ ಸಮಸ್ಯೆಗೆ ಸ್ಪಂದಿಸಿಲ್ಲ: ರೈತ ಸಂಘದ ರಾಜ್ಯ ಉಪಾಧ್ಯಕ್ಷ ನಾರಾಯಣಗೌಡ ಮಾತನಾಡಿ, ಒಂದು ಕಡೆ ತೀವ್ರವಾದ ಬರಗಾಲ ಮತ್ತೂಂದೆಡೆ ಸರಕಾರ ಬರ ಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಆ ಆದೇಶ ಪತ್ರಿಕೆಗಳಿಗೆ ಸೀಮಿತವಾಗಿದೆ. ಪ್ರತಿಯೊಂದು ಪ್ರಗತಿ ಪರಿಶೀಲಾನಾ ಸಭೆ ಹಾಗೂ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಯಾವುದೇ ಕಾರಣಕ್ಕೂ ನೀರು ಮತ್ತು ಮೇವಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ, ಸಾಧ್ಯವಾದರೆ ಕೂಡಲೇ ಕೊಳವೆಬಾವಿ ಕೊರೆಸಿ ಇಲ್ಲವೇ ಖಾಸಗಿ ಬೋರ್‌ವೆಲ್ಅನ್ನು ವಶಪಡಿಸಿಕೊಂಡು ನೀರಿನ ಸಮಸ್ಯೆಯನ್ನು ನಿವಾರಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಆದೇಶ ನೀಡುತ್ತಿದ್ದರೂ ಅದಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.

Advertisement

ಕ್ರಮಕೈಗೊಂಡಿಲ್ಲ: ಜಲ ಮೂಲವಾದ ಕೆರೆಯನ್ನು ಕೆಲವು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ಇವರ ವಿರುದ್ಧ ಕ್ರಮ ಕೈಗೊಂಡು ಕೆರೆಯನ್ನು ಸರ್ವೇ ಮಾಡಿಸಿ, ಒತ್ತುವರಿ ಬಿಡಿಸಬೇಕೆಂದು ಆನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಸಿಇಒಗೆ ಮನವಿ: ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ನೀರಿನ ಸಮಸ್ಯೆ ಹಾಗೂ ಕೆರೆ ಒತ್ತುವರಿ ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಕೂಡಲೇ ಕೊಳವೆ ಬಾವಿ ಕೊರೆಸಿ ನೀರಿನ ಸಮಸ್ಯೆಯನ್ನು ಬಗೆಹರಿಸಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಅಗ್ರಹಿಸಿದರು

ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಜಗದೀಶ್‌, ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ನೀರಿನ ಸಮಸ್ಯೆಯನ್ನು ನಿವಾರಿಸಿ ಮತ್ತು ಕೆರೆ ಒತ್ತುವರಿಯನ್ನು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ತೆರವುಗೊಳಿಸುವ ಭರವಸೆ ನೀಡಿದರು.

ಮನವಿ ನೀಡುವಾಗ ಬೈರರೆಡ್ಡಿ, ನಾಗೇಶ್‌, ಮುನಿರೆಡ್ಡಿ, ವೆಂಕಟೇಶ್‌, ಬಾಬು ನಂಜಪ್ಪ, ಪಾಪಣ್ಣ, ವೆಂಕಟೇಗೌಡ, ಮಂಜುನಾಥ್‌, ನಾರಾಯಣಪ್ಪ, ಹಾಗೂ ಬೈಪನಹಳ್ಳಿ ಗ್ರಾಮಸ್ಥರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next