Advertisement

ಕುಮ್ಕಿ ಜಮೀನು ಸಮಸ್ಯೆಗೆ ಪರಿಹಾರ: ಸಚಿವ ಆರ್‌. ಅಶೋಕ್‌

10:39 PM Dec 28, 2022 | Team Udayavani |

ಸುವರ್ಣವಿಧಾನಸೌಧ: ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಸೇರಿದಂತೆ ರಾಜ್ಯದ ಐದಾರು ಜಿಲ್ಲೆಗಳಲ್ಲಿರುವ ಕುಮ್ಕಿ ಜಮೀನು ಸಮಸ್ಯೆ ಕುರಿತಾಗಿ ಸಾಧಕ-ಬಾಧಕಗಳು, ಕಾನೂನು ಪರಿಣಾಮಗಳನ್ನು ಕೂಲಂಕುಷವಾಗಿ ಚರ್ಚಿಸಿ ಪರಿಹಾರ ರೂಪದಲ್ಲಿ ಹೊಸ ಕಾಯ್ದೆ ತರುವ ಚಿಂತನೆ ಸರ್ಕಾರದ್ದಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

Advertisement

ಪರಿಷತ್‌ನಲ್ಲಿ ಬುಧವಾರ ಬಿಜೆಪಿ ಸದಸ್ಯ ಪ್ರತಾಪ ಸಿಂಹ ನಾಯಕ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರದಲ್ಲಿ ಸರ್ಕಾರ ಸಕಾರಾತ್ಮಕ ಚಿಂತನೆ ಹೊಂದಿದೆ ಎಂದು ತಿಳಿಸಿದರು.

ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಕೊಡಗು ಇನ್ನಿತರ ಜಿಲ್ಲೆಗಳಲ್ಲಿ ಕಾನೆ, ಬಾನೆ ಹೊಂದಿರುವವರಿಗೆ ಕಮ್ಕಿ ಸಕ್ರಮೀಕರಣ ವಿಚಾರ ಸುಲಭದ್ದಲ್ಲ. ಬ್ರಿಟಿಷರ ಆಳ್ವಿಕೆಯಲ್ಲಿ ಸೊಪ್ಪು ಬೆಳೆಯಲೆಂದು ನೀಡಿದ ಜಮೀನು ಇದಾಗಿದೆ. ಇದನ್ನು ಸಕ್ರಮೀಕರಣಗೊಳಿಸಿ ಉಳಿಮೆ ಮಾಡುವ ರೈತರಿಗೆ ನೀಡುವುದಕ್ಕೆ ಸುಲಭದ ಸ್ಥಿತಿ ಇಲ್ಲ. ಇದಕ್ಕೆ ಕೋರ್ಟ್‌ ಆದೇಶ, ನಿಯಮಾವಳಿಗಳು ಪ್ರಬಲವಾಗಿದ್ದು, ಇದಕ್ಕೆ ಹೊಸ ಕಾಯ್ದೆ ತರುವುದೇ ಪರಿಹಾರವಾಗಿದೆ.

ಗೋಮಾಳ, ಗಾಯರಾಣ, ಹುಲ್ಲಬನ್ನಿ, ಸೊಪ್ಪಿನಬೆಟ್ಟ ಇತ್ಯಾದಿ ಗ್ರಾಮೀಣ ಪ್ರದೇಶದಲ್ಲಿ ಇರುವ ಜಮೀನು ಮಂಜೂರಿಗೆ ನನ್ನ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಈ ವಿಷಯ ಅತ್ಯಂತ ಸಂಕೀರ್ಣವಾಗಿದ್ದು, ಅರಣ್ಯ, ಕಾನೂನು ಇಲಾಖೆಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಅಡ್ವೊಕೇಟ್‌ ಜನರಲ್‌ ಅವರೊಂದಿಗೆ ಚರ್ಚಿಸಲಾಗುವುದು. ಕುಮ್ಕಿ, ಸೊಪ್ಪಿನ ಬೆಟ್ಟ ಇತ್ಯಾದಿ ಜಮೀನು ಸಕ್ರಮೀಕರಣಕ್ಕೆ ಎಷ್ಟು ಜಮೀನು, ಎಲ್ಲಿ ಎಂಬ ಪ್ರಶ್ನೆಗಳು ಉದ್ಭವಿಸುತ್ತೆವೆ. ಕೇಂದ್ರ ಸರಕಾರದ ನಿಯಮದಂತೆ ಐದು ಎಕರೆಗಿಂತ ಕಡಿಮೆ ಜಮೀನು ನೀಡಬೇಕಾಗಿದೆ. ಇದನ್ನು ನೀಡಬೇಕಾದರೆ ಕಾನೂನು ತೊಡಕುಗಳು ಎದುರಾಗಲಿದ್ದು, ಈಗಾಗಲೇ ಅರಣ್ಯ ಇಲಾಖೆಯವರು ಜಮೀನು ತಮ್ಮ ಮಾಲಿಕತ್ವದ ಕುರಿತಾಗಿಪತ್ರ ಬರೆದಿದ್ದಾರೆ ಎಂದು ಹೇಳಿದರು.

ಈ ವಿಚಾರವಾಗಿ ಸರಕಾರ ಕೇವಲ ಸುತ್ತೋಲೆಗಳನ್ನು ಹೊರಡಿಸಿ ಕ್ರಮ ಕೈಗೊಂಡರೆ ಕೋರ್ಟ್‌ನಲ್ಲಿ ಇದು ನಿಲ್ಲದು. ಇದಕ್ಕೆ ಇರುವ ಏಕೈಕ ಮಾರ್ಗಎಂದರೆ ನೂತನ ಕಾಯ್ದೆಯಾಗಿದೆ. ಜತೆಗೆ ಈ ತರಹದ ಜಮೀನು ನೀಡಿಕೆ ವಿಚಾರದಲ್ಲೂ ಜಾಗೃತಿ ಹೆಜ್ಜೆ ಇರಿಸಬೇಕಾಗಿದೆ.ಇದೇ ಮಾದರಿಯ ಜಮೀನು ಪಟ್ಟಣ, ನಗರ ಪ್ರದೇಶದಲ್ಲಿಯೂ ಇದ್ದು, ಅದಕ್ಕೂ ನೂತನ ಕಾಯ್ದೆಯಲ್ಲಿ ಅವಕಾಶ ನೀಡಿದರೆ ಭೂಮಾಫಿಯಾಕ್ಕೆ ಲಾಭ ಮಾಡಿಕೊಟ್ಟಂತಾಗಲಿದೆ. ಅದಕ್ಕಾಗಿ ಇದನ್ನು ಕೇವಲ ಗ್ರಾಮೀಣ ಪ್ರದೇಶಳಿಗೆ ಸೀಮಿತಗೊಳಿಸುವ 2ರಿಂದ 5 ಎಕರೆಯ ಒಳಗಿನ ಜಮೀನು ಸಕ್ರಮೀಕರಣಗೊಳಿಸುವ ಚಿಂತನೆ ಇದೆ ಎಂದು ವಿವರಿಸಿದರು.

Advertisement

ಆದೇ ರೀತಿ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಕೆಲ ಕಡೆಯಕಾಫಿ ಬೆಳೆಗಾರರ ಸಮಸ್ಯೆಯೂ ಇದೇ ಮಾದರಿಯದ್ದಾಗಿದ್ದು, ಇದರ ಪರಿಹಾರಕ್ಕೆ ಕೇರಳ ಮಾದರಿಯಲ್ಲಿ ಕಾಫಿ ಬೆಳೆಗಾರರಿಗೆ ಜಮೀನನ್ನು 30 ವರ್ಷದ ಗುತ್ತಿಗೆಯಾಧಾರದಲ್ಲಿ ನೀಡಲು ಚಿಂತಿಸಲಾಗುತ್ತಿದೆ. ಜಮೀನು ಸರಕಾರಿಮಾಲಿಕತ್ವದಲ್ಲೇ ಇರಲಿದೆ ಎಂದು ಹೇಳಿದರು.

ಪಿ ಸರ್ವೇ ನಂಬರ್‌ ತೆಗೆದು ಹೊಸ ನಂಬರ್‌
ಸುವರ್ಣ ವಿಧಾನಸೌಧ: ರಾಜ್ಯದಲ್ಲಿ ರೈತರು ಉಳುಮೆ ಮಾಡುತ್ತಿರುವ ಸರ್ಕಾರಿ ಇಲ್ಲವೆ ಗೋಮಾಳ ಜಮೀನು ಪಿ ಸರ್ವೆ ನಂಬರ್‌ ತೆಗೆದು ಹೊಸ ಸರ್ವೇ ನಂಬರ್‌ ನೀಡಿಕೆ ನಿಟ್ಟಿನಲ್ಲಿ ನಮೂನೆ 6-10 ರವರೆಗಿನ ಭರ್ತಿಗೆ ಕೋಲಾರ ಜಿಲ್ಲೆಗೆ ವಿನಾಯಿತಿ ನೀಡಲಾಗಿದ್ದು, ಅದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು.

ಪರಿಷತ್‌ನಲ್ಲಿ ಬುಧವಾರ ಕಾಂಗ್ರೆಸ್‌ನ ಎಂ.ಎಲ್‌.ಅನಿಲ್‌ ಕುಮಾರ್‌ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರಕಾರಿ ಅಥವಾ ಗೋಮಾಳ ಜಮೀನಿನಲ್ಲಿ ರೈತರು ಉಳುಮೆ ಮಾಡುತ್ತಿದ್ದರೆ, ಜಮೀನು ವಿಸ್ತೀರ್ಣ, ಪೋಡಿ ಮಾಡಬೇಕು. ನಮೂನೆ 1-5 ರವರೆಗಿನವುಗಳನ್ನು ಸಿದ್ಧಪಡಿಸಿ ಅಳತೆ ಮಾಡಿ, ಆಕಾರಬಂಧು ದುರಸ್ತಿಪಡಿಸಿ ಹೊಸ ಸರ್ವೇ ನಂಬರ್‌ ನೀಡಬೇಕಾಗುತ್ತದೆ. ಕೋಲಾರ ಜಿಲ್ಲೆಯಲ್ಲಿ ಇಂತಹ 2,655 ಜಮೀನುಗಳಿಗೆ ನಮೂನೆ 1-5 ಸಿದ್ಧಪಡಿಸಲಾಗಿದ್ದು, ಅಲ್ಲಿ ನಮೂನೆ 6-10ಕ್ಕೆ ವಿನಾಯಿತಿ ನೀಡಲಾಗಿದೆ. ಇದೀಗ ಅದೇ ಮಾದರಿಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ನಕಲಿ ದಾಖಲೆ ಸೃಷ್ಟಿ ತಡೆಗೆ ಕ್ರಮ
ಸುವರ್ಣ ವಿಧಾನಸೌಧ: ರಾಜ್ಯದಲ್ಲಿ ಜಮೀನು, ಆಸ್ತಿ ಕುರಿತಾಗಿ ನಕಲಿ ದಾಖಲೆಗಳ ಸೃಷ್ಟಿ, ವಂಚನೆ ತಡೆ ನಿಟ್ಟಿನಲ್ಲಿ ಸರಕಾರ ಕೆ-2 ಎಂಬ ಯೋಜನೆ ಜಾರಿಗೊಳಿಸಿದ್ದು, ಜಮೀನಿನ ಮಾಲಿಕತ್ವ, ಅದರ ವಿಸ್ತರಣೆ ಮಾಹಿತಿಗಳನ್ನು ನೇರವಾಗಿ ಸಬ್‌ ರಿಜಿಸ್ಟರ್‌ ಕಚೇರಿಗಳಿಗೆ ರವಾನಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ. ಪರಿಷತ್‌ನಲ್ಲಿ ಕಾಂಗ್ರೆಸ್‌ನ ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿ, ಈ ಯೋಜನೆಯ ಪ್ರಾಯೋಗಿಕ ಕಾರ್ಯವನ್ನು ಬಳ್ಳಾರಿ ಜಿಲ್ಲೆಯಲ್ಲಿ ಕೈಗೊಳ್ಳಲಾಗಿದ್ದು, ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next