ಹಾಸನ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಘೋಷಿಸಿರುವ ಪರಿಹಾರ ಪ್ಯಾಕೇಜನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸರ್ಕಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಆಯಾ ಕ್ಷೇತ್ರದ ಶಾಸಕರ ಸಮಿತಿ ರಚಿಸಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರೂ, ರಾಜ್ಯ ಸರ್ಕಾರದ 1,610 ಕೋಟಿ ರೂ. ಮತ್ತು 500 ಕೋಟಿ ರೂ. ಪ್ಯಾಕೇಜ್‌ಗಳು ಘೋಷಿಸಿದ್ದರೂ ಅರ್ಹ ಫಲಾನುಭವಿಗಳಿಗೆ ದೊರೆತಿಲ್ಲ. ಆಟೋ, ಟ್ಯಾಕ್ಸಿ ಚಾಲಕರು, ಕ್ಷೌರಿಕರು, ಮಡಿವಾಳ ಸಮಾಜದವರು, ಹೂವು ಮತ್ತು ಜೋಳದ ಬೆಳೆಗಾರರು ಪರಿಹಾರಕ್ಕೆ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ಸರ್ಕಾರಗಳು ಮೌನವಾಗಿವೆ.
ಕೇವಲ ಪ್ರಚಾರಕ್ಕಾಗಿ ಪ್ಯಾಕೇಜ್ ಘೋಷಣೆ ಮಾಡ ಲಾಗಿದೆಯೇ ಎಂದು ಪ್ರಶ್ನಿಸಿದರು. ಹಸಿರು ವಲಯದಲ್ಲಿದ್ದ ಹಾಸನ ಜಿಲ್ಲೆಯಲ್ಲಿ ಈಗ ಕೊರೊನಾ ಸೋಂಕಿತರ ಸಂಖ್ಯೆ ಶತಕ ಮೀರಿ ದ್ವಿಶತಕದತ್ತ ಸಾಗಿದೆ. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ವಹಿಸಿದ್ದರೆ ಸೋಂಕಿತರ ಸಂಖ್ಯೆ ಇಷ್ಟಾಗುತ್ತಿರಲಿಲ್ಲ ಎಂದು ಆಪಾದಿಸಿದರು.
ಜಿಪಂ ಅಧ್ಯಕ್ಷೆ ಆರೋಪಕ್ಕೆ ತರಾಟೆ: ಕೊರೊನಾ ನಿಯಂತ್ರಣ ಕುರಿತು ನಡೆದ ಸಭೆಯಲ್ಲಿ ಜಿಪಂ ಅಧ್ಯಕ್ಷೆ ಶ್ವೇತಾ ಅವರು ಜೆಡಿಎಸ್ ಸದಸ್ಯರು ಸಭೆಗೆ ಗೈರಾಗುವ ಮೂಲಕ ಕೋರಂ ಕೊರತೆ ಸೃಷ್ಟಿಸಿ 15ನೇ ಹಣಕಾಸು ಅನುದಾನ ಅನುಮೋದನೆ ಯಾಗದಂತೆ ಅಡ್ಡಿಪಡಿಸಿದ್ದಾರೆ ಎಂದು ಆಪಾದಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ ಅವರು, ಜಿಪಂ ಅಧ್ಯಕ್ಷರು ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯದೇ ಅನುದಾನವನ್ನು ಮನಬಂದಂತೆ ಖರ್ಚು ಮಾಡುವುದನ್ನು ಜೆಡಿಎಸ್ ಸಹಿಸುವುದಿಲ್ಲ ಎಂದರು. ಎಂಎಲ್‌ಸಿ ಗೋಪಾಲಸ್ವಾಮಿ ಅವರು ಸ್ಪಷ್ಟ ಮಾಹಿತಿ ಪಡೆದು ಜೆಡಿಎಸ್ ಬಗ್ಗೆ ಮಾತನಾಡಬೇಕು. ಮಾಹಿತಿ ಇಲ್ಲದೇ ಮಾತನಾಡಬಾರದರು ಎಂದರು.