Advertisement

Solo Travel: ಶ್ರೀ ಕೃಷ್ಣ ಜನಿಸಿದ ಧರೆಯಲ್ಲಿ…

11:19 AM Sep 03, 2023 | Team Udayavani |

ಶ್ರೀಕೃಷ್ಣನ ನಾಡು ಎಂದಾಕ್ಷಣ ಕಣ್ಣೆದುರು ಬರುವುದು ಮಥುರೆ, ಉಜ್ಜಯನಿ, ಗೋಕುಲದ ಹೆಸರುಗಳೇ. ಆ ಊರುಗಳಿಗೆ ಭೇಟಿ ಕೊಟ್ಟು ಅಲ್ಲಿ ಕೃಷ್ಣನ ಹೆಜ್ಜೆಗುರುತು ಅರಸಿದವರ, ಆಗ ಕೇಳಿಸಿದ ಕೃಷ್ಣನ ಕಥೆಗಳಿಗೆ ತಲೆದೂಗಿ ಭಾವಪರವಶರಾದವರ ಅನುಭವ ಕಥನ…

Advertisement

ಅಯೋಧ್ಯೆ, ಮಥುರಾ, ಹರಿದ್ವಾರಾ (ಮಾಯಾ), ಕಾಶಿ, ಕಂಚಿ, ಉಜ್ಜಯಿನಿ, ದ್ವಾರಕಾವನ್ನು ಸಪ್ತ ಮೋಕ್ಷ ನಗರಿಗಳು ಎಂದು ಕರೆಯುತ್ತಾರೆ. ಈ ಪವಿತ್ರ ತಾಣಗಳಿಗೆ ತೀರ್ಥಯಾತ್ರೆ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ. ಉಜ್ಜಯಿನಿಯ ದರ್ಶನ ಮಾಡಬೇಕೆಂಬುದು ನನ್ನ  ಬಹುದಿನಗಳ ಆಸೆೆಯಾಗಿತ್ತು. ಬೆಂಗಳೂರಿನಿಂದ ರೈಲಿನಲ್ಲಿ ಬಂದೆ. 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಉಜ್ಜಯಿನಿ ದರ್ಶನ ಪಡೆದು, ಕೃಷ್ಣ ಜನ್ಮಭೂಮಿ ಮಥುರಾಗೆ ರೈಲಿನಲ್ಲಿ ಬಂದಿಳಿದೆ.

ವೃಂದಾವನ ಹಾಗೂ ಗೋವರ್ಧನ ನಗರಿಯ ಆಸುಪಾಸಿನಲ್ಲಿರುವ ಮಥುರಾ, ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿದೆ. ಬಾಲ್ಯದಲ್ಲಿ ಕೃಷ್ಣನ ಕತೆಗಳನ್ನು ಓದಿದ್ದ ನನಗೆ, ಅವನು ಹುಟ್ಟಿ ಓಡಾಡಿದ ಜಾಗವನ್ನು ನೋಡಬೇಕೆಂಬುದು ಬಹಳ ದಿನಗಳ ಕನಸಾಗಿತ್ತು.

ಬಾಲಕೃಷ್ಣನ ಹೆಜ್ಜೆಗುರುತು…

ಕೃಷ್ಣ ಬಾಲ್ಯದ ದಿನಗಳನ್ನು ಕಳೆದದ್ದು ಗೋಕುಲದಲ್ಲಿ. ಗೋಕುಲದ ಓಣಿಯಲ್ಲಿ ಹೋಗುವಾಗ, ಕೃಷ್ಣ ಪುಟ್ಟ ಹೆಜ್ಜೆಗಳನ್ನು ಹಾಕುತ್ತಾ ಕುಣಿದಾಡಿದ ದೃಶ್ಯಗಳು ಕಣ್ಣೆದುರು ಬರುತ್ತಿತ್ತು. ಇಲ್ಲಿ ಪಂಡಿತರು ಕೃಷ್ಣನ ಸಂಪೂರ್ಣ ಜನ್ಮವೃತ್ತಾಂತವನ್ನು ವಿವರಿಸು­ತ್ತಾರೆ. ಕದಂಬ ವೃಕ್ಷದಿಂದ ಸುತ್ತುವರೆದ ಪವಿತ್ರ ಕುಂಡ ಇಲ್ಲಿದೆ. ವಸುದೇವನು ಇಲ್ಲಿ ಕೃಷ್ಣನಿಗೆ ಸ್ನಾನ ಮಾಡಿಸಿದನು ಎಂಬ ಪ್ರತೀತಿ ಇದೆ. ಹೀಗಾಗಿ ಇಲ್ಲಿ ನವಜಾತ ಶಿಶುಗಳಿಗೆ ಸ್ನಾನ ಮಾಡಿಸುತ್ತಾರೆ. ಪವಿತ್ರ ಕುಂಡದ ಬಳಿ ಇರುವ ಮರಗಳಿಗೆ ಭಕ್ತಾದಿಗಳು ಕೆಂಪುಬಣ್ಣದ ವಸ್ತ್ರ ಕಟ್ಟುತ್ತಾರೆ. ಇಲ್ಲಿ ಪ್ರಾರ್ಥನೆ ಮಾಡಿದರೆ ಕೃಷ್ಣ ಬೇಡಿದ್ದನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಇಲ್ಲಿದೆ.

Advertisement

ಇಸ್ಕಾನ್‌, ವೃಂದಾವನ

ಕೃಷ್ಣ ಬಲರಾಮರ ದೇವಸ್ಥಾನವನ್ನು 1975ರಲ್ಲಿ ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದರು ನಿರ್ಮಿಸಿದರು. ಇಲ್ಲಿ ಕೃಷ್ಣ, ಬಲರಾಮ, ರಾಧೆ ಹಾಗೂ ಗೋಪಿಕೆಯರನ್ನು ಪೂಜಿಸಲಾಗುತ್ತದೆ. ಇಸ್ಕಾನ್‌ ನಿಂದ 2012ರಲ್ಲಿ ನಿರ್ಮಿತವಾದ ಪ್ರೇಮ ಮಂದಿರ, ವೃಂದಾವನದ ಪ್ರಮುಖ ಅಕರ್ಷಣೆ. ವಿದ್ಯುತ್‌ ದೀಪಗಳಿಂದ ಜಗಮಗಿಸುವ ಈ ದೇಗುಲವನ್ನು ಬಿಳಿ ಅಮೃತಶಿಲೆಯಿಂದ ನಿರ್ಮಿಸಿ¨ªಾರೆ. ದೇವಾಲಯದ ಸುತ್ತಲೂ ಸಂಗೀತ ಕಾರಂಜಿ ಸೇರಿದಂತೆ ಕೃಷ್ಣನ ಹಲವು ಸ್ಥಬ್ಧ ಚಿತ್ರಗಳು ಮನಸೂರೆಗೊಳ್ಳುತ್ತವೆ. ಕಾಳಿಂಗ ಮರ್ದನ ಮತ್ತು ಗೋವರ್ಧನ ಗಿರಿಯನ್ನು ಎತ್ತಿ ಹಿಡಿದ ಕಲಾಕೃತಿಗಳು ಅದ್ಭುತವಾಗಿ ಮೂಡಿಬಂದಿದೆ. ವೃಂದಾವನದ ಬಳಿ ಇರುವ ಬಾಂಕೆ ಬಿಹಾರಿ ದೇಗುಲದಲ್ಲಿ, ಕೃಷ್ಣ ಹಾಗೂ ರಾಧೆಯರ ಸಂಯುಕ್ತ ರೂಪದಲ್ಲಿ ಬಾಂಕೆ ಬಿಹಾರಿಯನ್ನು ಆರಾಧಿಸುತ್ತಾರೆ.

ಕೃಷ್ಣ ಜನ್ಮಭೂಮಿ

ಕೃಷ್ಣ ಜನ್ಮಭೂಮಿ ಮಥುರಾದ ಪ್ರಮುಖ ದೇವಾಲಯಗಳಲ್ಲಿ ಒಂದು. ಯಶೋದೆ ಇಲ್ಲಿಯೇ ಸೆರೆಮನೆಯಲ್ಲಿ ಕೃಷ್ಣನಿಗೆ ಜನ್ಮ ನೀಡಿದಳು ಎಂದು ನಂಬಲಾಗುತ್ತದೆ. ಕೃಷ್ಣ ಜನ್ಮಭೂಮಿಯ ಬಳಿಯಲ್ಲೇ ಇರುವ ಬರಸಾನಾ ರಾಧಾ ರಾಣಿ ದೇವಾಲಯದಲ್ಲಿ ರಾಧೆಯನ್ನು ಪೂಜಿಸಲಾಗುತ್ತದೆ. ಹೋಳಿ ಹಬ್ಬದಾಚರಣೆಗೆ ಇದು ಪ್ರಸಿದ್ಧವಾಗಿದೆ. ಗಮನಿಸಬೇಕಾದ ಅಂಶವೆಂದರೆ, ಗೋಕುಲದ ಹೊರತಾಗಿ ಉಳಿದ ದೇವಾಲಯಗಳು ಮಧ್ಯಾಹ್ನ 12 ರಿಂದ 4 ಗಂಟೆ ತನಕ ಮುಚಿØರುತ್ತದೆ.

ಗೋವರ್ಧನ ಗಿರಿ

ಮಥುರಾ ನಗರದ ಜನರು ಬಿರುಗಾಳಿ ಸಹಿತ ಅತಿವೃಷ್ಟಿಯಿಂದ ತತ್ತರಿಸಿದಾಗ ಗೋವರ್ಧನ ಗಿರಿಯನ್ನು ಕಿರುಬೆರಳಿನಲ್ಲಿ ಎತ್ತಿಹಿಡಿದು, ತನ್ನ ಊರಿನ ನಿವಾಸಿಗಳಿಗೆ, ಗೋವುಗಳಿಗೆ ಕೃಷ್ಣ ಪರಮಾತ್ಮ ರಕ್ಷಣೆ ನೀಡಿದ ಕತೆ ನಮಗೆಲ್ಲ ಗೊತ್ತಿದೆ. ಸುಮಾರು 8 ಕಿಮೀ ಉದ್ದವಿರುವ ಗೋವರ್ಧನ ಗಿರಿಗೆ ಲಕ್ಷಾಂತರ ಭಕ್ತಾದಿಗಳು ಕಾಲ್ನಡಿಗೆಯಲ್ಲಿ ಪರಿಕ್ರಮಕ್ಕಾಗಿ ಆಗಮಿಸುತ್ತಾರೆ.

ಹೋಗುವುದು ಹೇಗೆ?:

ಬೆಂಗಳೂರಿನಿಂದ ಮಥುರಾಗೆ ರೈಲಿನಲ್ಲಿ ಹೋಗುವುದಾದರೆ ಕರ್ನಾಟಕ ಎಕ್ಸ್‌ಪ್ರೆಸ್‌ನಲ್ಲಿ 36 ಗಂಟೆಯ ಪಯಣ. ಮಥುರಾಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಆಗ್ರಾ. ಮಥುರಾದಿಂದ ಆಗ್ರಾ ಕೇವಲ 60 ಕಿಮೀ ದೂರವಿದ್ದು, ರೈಲು ಹಾಗೂ ಬಸ್‌ ಸೌಕರ್ಯವಿದೆ. ಹೀಗಾಗಿ ಮಥುರಾಕ್ಕೆ ತೆರಳುವಾಗ ತಾಜ್‌ ಮಹಲ್‌ ಹಾಗೂ ಆಗ್ರಾ ಕೋಟೆಯನ್ನು ಕಣ್ತುಂಬಿಕೊಳ್ಳಬಹುದು.

ತಂಗಲು ವ್ಯವಸ್ಥೆ:

ಮಥುರಾ ಸುತ್ತಮುತ್ತ ಒಂದು ರಾತ್ರಿ ತಂಗಲು 800 ರೂ ಯಿಂದ ಪ್ರಾರಂಭವಾಗಿ 2000ರೂ ತನಕ ಹೋಟೆಲ್‌ ರೂಂಗಳು ಸಿಗುತ್ತದೆ. ವಿವಿಧ ಬುಕಿಂಗ್‌ ಆಪ್‌ ಗಳಲ್ಲಿ ಈ ಬಗ್ಗೆ ಮಾಹಿತಿ ಸಿಗುತ್ತದೆ. ಮಥುರಾ ಮಾತ್ರ ನೋಡಲು ರೈಲಿನಲ್ಲಿ ತೆರಳುವುದಾದರೆ, ಓಡಾಟ ಎಲ್ಲ ಸೇರಿ 8ರಿಂದ 10 ಸಾವಿರ ಖರ್ಚಾಗುತ್ತದೆ. ವಿಮಾನದಲ್ಲಿ ತೆರಳುವುದಾದರೆ, ಎಲ್ಲವೂ ಸೇರಿ  ಒಬ್ಬರಿಗೆ ಸುಮಾರು 18ರಿಂದ 20 ಸಾವಿರ ಖರ್ಚಾಗುತ್ತದೆ.

ಸೋಲೋ ಟ್ರಾವೆಲ್‌ ಮಾಡುವಾಗ ಮುನ್ನೆಚ್ಚರಿಕೆ:

  • ರಾತ್ರಿ ಹೊತ್ತು ಒಂಟಿಯಾಗಿ ಓಡಾಡಬೇಡಿ, ನಿಮ್ಮ ಬಳಿ ಪೆಪ್ಪರ್‌ ಸ್ಪ್ರೇ ಇರಲಿ
  • ನೀವು ಹೋಗುವ ಊರಿನ ಪೊಲೀಸ್‌ ಠಾಣೆಯ ನಂಬರ್‌ ಇರಲಿ. ಆದಷ್ಟೂ ರೈಲ್ವೇ ನಿಲ್ದಾಣ, ಬಸ್‌ ನಿಲ್ದಾಣದ ಸಮೀಪವೇ ಉಳಿದುಕೊಳ್ಳಿ
  • ಹೋಗುವ ಸ್ಥಳದ ಬಗ್ಗೆ ಸರಿಯಾದ ಮಾಹಿತಿ ಕಲೆಹಾಕಿಕೊಳ್ಳಿ, ಹಾಗೆಯೇ ನೋಡಬಹುದಾದ ಸ್ಥಳಗಳ ವೇಳಾಪಟ್ಟಿ ಮಾಡಿಕೊಳ್ಳಿ. ಉದಾಹರಣೆಗೆ: ಆಗ್ರಾ, ಮಥುರಾ, ಗ್ವಾಲಿಯರ್‌ ಹತ್ತಿರದಲ್ಲಿರುವ ಸ್ಥಳಗಳಾಗಿದ್ದು, ಒಂದೇ ಟ್ರಿಪ್‌ನಲ್ಲಿ ತೆರಳಬಹುದು
  • ತುಂಬಾ ಸ್ಥಳಗಳನ್ನು ಪ್ಲಾನ್‌ ಮಾಡಬೇಡಿ. 3ರಿಂದ 5 ದಿನದ ಟ್ರಿಪ್‌ನಲ್ಲಿ ಕನಿಷ್ಠ ಪಕ್ಷ ಅರ್ಧ ದಿನವನ್ನಾದರೂ ಬಿಡುವಾಗಿರಿಸಿ.

-ಪ್ರಜ್ಞಾ ಹೆಬ್ಬಾರ್‌, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next