Advertisement

ಸಿದ್ಧರಾಮೇಶ್ವರ ಜಾತ್ರೆಗೆ ಅದ್ಧೂರಿ ಸಿದ್ಧತೆ

12:06 PM Jan 11, 2020 | Naveen |

ಸೊಲ್ಲಾಪುರ: ಮಕರ ಸಂಕ್ರಮಣದಂದು ಆರಂಭವಾಗುವ ಸೊನ್ನಲಿಗೆ ಶರಣ ಶಿವಯೋಗಿ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವ (ಗಡ್ಡಿ ಜಾತ್ರೆ) ಅಂಗವಾಗಿ ಜ. 13ರಿಂದ 17ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಜಾತ್ರೆ ಸಿದ್ಧತೆ ಪೂರ್ಣಗೊಂಡಿವೆ ಎಂದು ಸಿದ್ಧೇಶ್ವರ ದೇವಸ್ಥಾನ ಪಂಚ ಸಮಿತಿ ಅಧ್ಯಕ್ಷ ಧರ್ಮರಾಜ ಕಾಡಾದಿ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೊಲ್ಲಾಪುರದ ಗ್ರಾಮ ದೇವತೆ ಶಿವಯೋಗಿ ಸಿದ್ಧರಾಮೇಶ್ವರ ಜಾತ್ರೆ ಅಂಗವಾಗಿ ಮಹಾನಗರ ಪಾಲಿಕೆ, ಪೊಲೀಸ್‌ ಇಲಾಖೆ, ದೇವಸ್ಥಾನ ಸಮಿತಿ ಸಜ್ಜಾಗಿದೆ ಎಂದು ಮಾಹಿತಿ ನೀಡಿದರು. ಮಹಾರಾಷ್ಟ್ರ ಸೇರಿದಂತೆ ಕರ್ನಾಟಕದ ಕಲಬುರಗಿ, ವಿಜಯಪುರ, ಹುಬ್ಬಳ್ಳಿ ಹಾಗೂ ಇತರ ರಾಜ್ಯಗಳ ವ್ಯಾಪಾರಿಗಳು ಈಗಾಗಲೇ ಮಳಿಗೆಗಳನ್ನು ಖರೀದಿಸಿದ್ದಾರೆ. ಕಳೆದ ವರ್ಷ ಮಳಿಗೆಗಳಿಂದಲೇ ಲಕ್ಷಾಂತರ ರೂ. ಸಂಗ್ರಹವಾಗಿತ್ತು ಎಂದರು.

ಕಾರ್ಯಕ್ರಮ ವಿವರ: ಜ. 13ರಂದು 68 ಲಿಂಗಗಳಿಗೆ ತೈಲಾಭಿಷೇಕ ಕಾರ್ಯಕ್ರಮ, ಜ. 14ರಂದು ಮಧ್ಯಾಹ್ನ 1 ಗಂಟೆಗೆ ಸಮ್ಮತಿ ಕಟ್ಟೆಯಲ್ಲಿ ಅಕ್ಷತಾ ಸಮಾರಂಭ, ಜ. 15 ರಂದು ಹೋಮ ಮೈದಾನದಲ್ಲಿ ಹೋಮ ಪ್ರದೀಪನ ಸಮಾರಂಭ, ಜ. 16ರಂದು ರಾತ್ರಿ 8 ಗಂಟೆಗೆ ಮದ್ದು ಸುಡುವ ಕಾರ್ಯಕ್ರಮ, ಜ.17ರಂದು ರಾತ್ರಿ ಮಲ್ಲಿಕಾರ್ಜುನ ಮಂದಿರದಲ್ಲಿ ನಂದಿಧ್ವಜಗಳ ವಸ್ತ್ರವಿಸರ್ಜನೆ ಕಾರ್ಯಕ್ರಮ ನಡೆಯಲಿವೆ ಎಂದು ಸಿದ್ಧೇಶ್ವರ ಜಾತ್ರಾ ಮಧ್ಯವರ್ತಿ ಸಮಿತಿ ಪ್ರಮುಖ ಭೀಮಾಶಂಕರ ಪಟಣೆ ತಿಳಿಸಿದರು.

ಮೆರವಣಿಗೆ: ಸಿದ್ಧರಾಮನ ಯೋಗದಂಡವಾಗಿರುವ ನಂದಿಧ್ವಜ, ಪಲ್ಲಕ್ಕಿ ಮೆರವಣಿಗೆ ಜ. 13ರಂದು ಮುಂಜಾನೆ 8ಕ್ಕೆ ಮಲ್ಲಿಕಾರ್ಜುನ ಮಂದಿರದ ಹತ್ತಿರವಿರುವ ಹಿರೇಹಬ್ಬು ಮಠದದಿಂದ ಸಿದ್ಧೇಶ್ವರ ಮಂದಿರಕ್ಕೆ ಹೊರಡಲಿದೆ. ನಂತರ ಮಧ್ಯಾಹ್ನ 1 ಗಂಟೆಗೆ ನಂದಿಧ್ವಜಗಳ ಜೊತೆಗೆ 68 ಲಿಂಗಗಳಿಗೆ ತೈಲಾಭಿಷೇಕ ಕಾರ್ಯಕ್ರಮ ನಡೆದು, ರಾತ್ರಿ 8ಕ್ಕೆ ಮರಳಿ ಹಿರೇಹಬ್ಬು ಮಠ ತಲುಪಲಿದೆ ಎಂದು ಮೆರವಣಿಗೆ ಸಮಿತಿ ಪ್ರಮುಖ ವಿಶ್ವನಾಥ ಲಬ್ಟಾ ತಿಳಿಸಿದರು.

ರಂಗೋಲಿ: ಜ. 14ರಂದು ನಡೆಯಲಿರುವ ಅಕ್ಷತಾ ಸಮಾರಂಭದಂದು ಸಂಸ್ಕಾರ ಭಾರತಿ ಕಲಾವಿದರು ಹಿರೇಹಬ್ಬು ಮಠದಿಂದ ಸಿದ್ಧೇಶ್ವರ ಮಂದಿರದಲ್ಲಿರುವ ಸಮ್ಮತಿ ಕಟ್ಟೆಯ ವರೆಗೆ, ಅಂದರೆ ಸುಮಾರು 3 ಕಿ.ಮೀ ಮಾರ್ಗದಲ್ಲಿ ರಂಗೋಲಿ ಹಾಕಲಿದ್ದಾರೆ. ಅಲ್ಲದೇ ಜ. 15ರಂದು ನಡೆಯುವ ನಂದಿ ಧ್ವಜಗಳ ಮೆರವಣಿಗೆಯಲ್ಲಿ ಪಸಾರೆ ಮನೆ ಹತ್ತಿರದಿಂದ ವಿಜಾಪುರ ವೇಶ ಬಡಾವಣೆ ವರೆಗೆ ರಸ್ತೆಯಲ್ಲಿ ಕಲಾ ಫೌಂಡೆಷನ್‌ ಕಾರ್ಯಕರ್ತರು ರಂಗೋಲಿ ಹಾಕಲಿದ್ದಾರೆ.

Advertisement

ಸ್ಟಾಲ್ಸ್‌ ವ್ಯವಸ್ಥೆ: ಸುಮಾರು ಒಂದು ತಿಂಗಳ ಕಾಲ ನಡೆಯುವ ಜಾತ್ರೆಯಲ್ಲಿ ವ್ಯಾಪಾರಿಗಳಿಗಾಗಿ 250 ಸ್ಟಾಲ್ಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಶಿವಕುಮಾರ ಪಾಟೀಲ ತಿಳಿಸಿದರು.

ವಿದ್ಯುತ್‌ ದೀಪಾಲಂಕಾರ: ಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸಿದ್ಧೇಶ್ವರ ಮಂದಿರ, ಮಲ್ಲಿಕಾರ್ಜುನ ಮಂದಿರ ಹಾಗೂ 68 ಲಿಂಗಗಳಿಗೆ ಬಣ್ಣದ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಸಿದ್ಧೇಶ್ವರ ಮಂದಿರ ಮತ್ತು ಮಲ್ಲಿಕಾರ್ಜುನ ಮಂದಿರಕ್ಕೆ ವಿವಿಧ ಬಣ್ಣಗಳನ್ನು ಬಳಿಯಲಾಗಿದೆ ಎಂದು ಗಿರೀಶ ಗೋರನಳ್ಳಿ ತಿಳಿಸಿದರು.

ಜಾನುವಾರುಗಳ ಬಜಾರ್‌: ಜಾತ್ರೆ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ರೇವಣಸಿದ್ಧೇಶ್ವರ ಮಂದಿರದ ಆವರಣದಲ್ಲಿ ಜಾನುವಾರಗಳ ಬಜಾರ್‌ ನಡೆಯಲಿದೆ. ಕೆಲವು ತಾಂತ್ರಿಕ ಸಮಸ್ಯೆಗಳಿಂದ ಜಾನುವಾರಗಳ ಬಜಾರ್‌ ಸ್ಥಳ ಬದಲಾಗುವ ಸಾಧ್ಯತೆ ಇದೆ. ಅಂದಾಜು 20 ಸಾವಿರಕ್ಕೂ ಹೆಚ್ಚು ಜಾನುವಾರು
ಮಾರಾಟಕ್ಕೆ ಸೇರಲಿವೆ ಎಂದು ಸಂತೆ ಸಮಿತಿಯ ಪ್ರಮುಖ ಚಿದಾನಂದ ವನಾರೋಟೆ ತಿಳಿಸಿದರು.

ಮಹಾಪ್ರಸಾದ ವ್ಯವಸ್ಥೆ: ಸಿದ್ಧೇಶ್ವರ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರಿಗಾಗಿ ಮಹಾಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಜಾತ್ರೆ ನಿಮಿತ್ತ ವಿಶೇಷವಾಗಿ ಸುಮಾರು 50 ಸಾವಿರ ಜೋಳದ ರೊಟ್ಟಿ ಮಾಡಲಾಗಿದೆ ಎಂದು ಪ್ರಸಾದ ಸಮಿತಿ ಪ್ರಮುಖ ಬಸವರಾಜ ಅಷ್ಟಗಿ ತಿಳಿಸಿದರು.

ಸುವರ್ಣ ಸಿದ್ಧೇಶ್ವರ: ಸುವರ್ಣ ಸಿದ್ಧೇಶ್ವರ ಮಂದಿರ ನಿರ್ಮಾಣದ ಕಾರ್ಯ ನಡೆಯುತಿದ್ದು, ಮಂದಿರ ನಿರ್ಮಾಣದ ಶೇ. 35ಕೆಲಸ ಮುಗಿದಿದ್ದು ಸಭಾ ಮಂಟಪದ ಕಾರ್ಯದ ಸಲುವಾಗಿ 5ರಿಂದ 6 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯಲಿದೆ. ಅದರಂತೆ ಧ್ಯಾನ ಮಂದಿರದ ರೂಪುರೇಷೆಯೂ ಸಿದ್ಧವಾಗಿದೆ. ಭಕ್ತರಿಗಾಗಿ ಭಕ್ತನಿವಾಸ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ಥಾನ ಪಂಚ ಸಮಿತಿ ಅಧ್ಯಕ್ಷ ಧರ್ಮರಾಜ ಕಾಡಾದಿ ತಿಳಿಸಿದರು.

ಪೊಲೀಸ್‌ ಬಿಗಿ ಭದ್ರತೆ: ಮಂದಿರದಲ್ಲಿ 32ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಮೆರವಣಿಗೆ ಮಾರ್ಗದಲ್ಲಿ, ಹೋಮ ಮೈದಾನ, ಪಂಚಹಕಟ್ಟಾ ಪರಿಸರದಲ್ಲಿ 40 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಮಂದಿರ ಸಮಿತಿಯಿಂದ ಸುಮಾರು 150
ಸ್ವಯಂ ಸೇವಕರು ಮತ್ತು 150 ಪೊಲೀಸ್‌ರನ್ನು ನೇಮಿಸಲಾಗಿದೆ. ಭಕ್ತರಿಗಾಗಿ ಒಂದು ಕೋಟಿ ರೂ. ಅಪಘಾತ ವಿಮೆ ಯೋಜನೆ ಮಾಡಲಾಗಿದೆ ಎಂದು ಸಿದ್ಧೇಶ್ವರ ದೇವಸ್ಥಾನ ಪಂಚ ಸಮಿತಿ ಅಧ್ಯಕ್ಷರು ತಿಳಿಸಿದರು.

ಆ್ಯಪ್‌ ಬಿಡುಗಡೆ: ಸೋಷಿಯಲ್‌ ಮಿಡಿಯಾ ಮತ್ತು ವೆಬ್‌ಸೈಟ್‌ ಲೋಕಾರ್ಪಣೆ ಮಾಡಲಾಗುವುದು. ಅಲ್ಲದೇ ಶ್ರೀ ಸಿದ್ದೇಶ್ವರ ದೇವಸ್ಥಾನದ ಮಾಹಿತಿ ತಿಳಿಸುವ ಸಲುವಾಗಿ ಜ. 14ರಂದು ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಲಾಗುವುದು. ಜಾಗಾ ಹಂಚಿಕೆ ಸಮಿತಿ ಪ್ರಮುಖ ಶಿವಕುಮಾರ ಪಾಟೀಲ, ವಿದ್ಯುತ್‌ ರೋಷಣಾಯಿ ಪ್ರಮುಖರಾದ ಗಿರೀಶ ಗೋರನಳ್ಳಿ, ಕೃಷಿ ಪ್ರದರ್ಶನ ಸಮಿತಿ ಅಧ್ಯಕ್ಷ
ಗುರುರಾಜ ಮಾಳಗೆ, ಪ್ರಸಿದ್ಧಿ ಪ್ರಮುಖ ಡಾ| ರಾಜಶೇಖರ ಯೇಳಿಕರ, ಪ್ರಸಾದ ಸಮಿತಿಯ ಪ್ರಮುಖ ಬಸವರಾಜ ಅಷ್ಟಗಿ, ಜಾನುವಾರ ಸಂತೆ ಸಮಿತಿ ಪ್ರಮುಖ ಚಿದಾನಂದ ವನಾರೋಟೆ, ಸ್ಟಾಲ್ಸ್ಗಳ ವ್ಯವಸ್ಥೆ ಪ್ರಮುಖ ಶಿವಕುಮಾರ ಪಾಟೀಲ, ಮದ್ದು ಸುಡುವ ಪ್ರಮುಖರಾದ ವಿಶ್ವನಾಥ ಆಳಂಗೆ, ಮಲ್ಲಿಕಾರ್ಜುನ ಕಳಕೆ, ಸೋಮಶೇಖರ ದೇಶಮುಖ, ಆರ್‌.ಎಸ್‌.ಪಾಟೀಲ, ನೀಲಕಂಠಪ್ಪಾ ಕೋನಾಪೂರೆ, ರಾಮಕೃಷ್ಣ ನಷ್ಠೆ, ಸೋಮಶೇಖರ ದೇಶಮುಖ, ಬಾಳಾಸಾಹೇಬ ಭೋಗಾಡೆ, ಸುಭಾಷ ಮುನಾಳೆ, ರಾಜೇಂದ್ರ ಘೂಲಿ, ಕಾಶಿನಾಥ ದರ್ಗೊಪಾಟೀಲ, ಸುರೇಶ ಮ್ಹೇತ್ರೆ -ಕುಂಬಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next