ಮಂಗಳೂರು: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ನೆನಪಿನಲ್ಲಿ ಜನ ಜಾಗೃತಿಯೊಂದಿಗೆ ದೇಶ ಭಕ್ತಿ, ರಾಷ್ಟ್ರ ಪ್ರೇಮ ಸಾರಲು ಭಾರತೀಯ ಭೂ ಸೇನೆಯ ಬಾರ್ಡರ್ ರೋಡ್ ಆರ್ಗನೈಸೇಶನ್ (ಬಿಆರ್‌ಒ) ಸಂಸ್ಥೆ ಹಮ್ಮಿಕೊಂಡಿರುವ ಇಂಡಿಯಾ: 75 ಬಿಆರ್‌ಒ ಮೋಟಾರ್ ಸೈಕಲ್ ಎಕ್ಸ್‌ಪೆಡಿಶನ್-2021 ಮೋಟರ್ ಬೈಕ್ ರ‍್ಯಾಲಿ ಶನಿವಾರ ಸಂಜೆ ಮಂಗಳೂರಿಗೆ ಆಗಮಿಸಿದ್ದು, ರವಿವಾರ ವಿಶೇಷ ಕಾರ್ಯಕ್ರಮದ ಮೂಲಕ ಮುಂದಿನ ಪಯಣಕ್ಕೆ ಹಸುರು ನಿಶಾನೆ ತೋರಲಾಯಿತು.
ಡೊಂಗರಕೇರಿಯ ಕೆನರಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ವಿ. ಸುನಿಲ್ ಕುಮಾರ್ ಅವರು ಪ್ರಾಣದ ಹಂಗನ್ನು ತೊರೆದು ರಾತ್ರಿ ಹಗಲೆನ್ನದೆ ದೇಶ ಸೇವೆ ಮಾಡುವ ದೇಶಪ್ರೇಮಿ ಸೈನಿಕರ ಬಗ್ಗೆ ಪ್ರತಿ ಯೊಬ್ಬರೂ ಹೆಮ್ಮೆ, ಅಭಿಮಾನ ಹೊಂದಿರಬೇಕು. ಸೈನಿಕರ ಬಗ್ಗೆ ಮತ್ತು ದೇಶಾಭಿಮಾನ ಮೂಡಿಸುವ ವಿಷಯ ಗಳು ಪಠ್ಯದಲ್ಲಿ ಅಳವಡಿಸಿಕೊಳ್ಳ ಬೇಕಾದ ಆವಶ್ಯಕತೆ ಇದೆ ಎಂದರು.
ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಮಾತನಾಡಿ, ದೇಶಕ್ಕಾಗಿ ಸೇವೆ ಮಾಡುವ ಸೈನಿಕರನ್ನು ನಾವು ಗೌರವಿಸಬೇಕು ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಅವರು ಮಾತನಾಡಿ, ಎನ್‌ಸಿಸಿ ಕೆಡೆಟ್‌ಗಳಿಗೆ ಸೂಕ್ತ ತರಬೇತಿ ನೀಡುವ ವ್ಯವಸ್ಥೆ ಈ ಭಾಗದಲ್ಲಿ ಆಗಬೇಕಿದೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗವನ್ನು ಒಳಗೊಂಡಂತೆ ತರಬೇತಿ ಕೇಂದ್ರ ಸ್ಥಾಪನೆಯಾಗಬೇಕು ಎಂದರು.
ಶಾಸಕ ಯು.ಟಿ. ಖಾದರ್ ಮುಖ್ಯ ಅತಿಥಿಯಾಗಿದ್ದರು. ಮೇಯರ್ ಪ್ರೇಮಾನಂದ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್.ಯಡಪಡಿತ್ತಾಯ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಬಿಆರ್‌ಒ ತಂಡದ ನಾಯಕ ಕರ್ನಲ್ ಪಿ.ಎಸ್.ರೆಡ್ಡಿ, ಮಾಜಿ ಸೈನಿಕರ ಸಂಘದ ಪದಾಧಿಕಾರಿ ಕ| ಎನ್. ಶರತ್ ಭಂಡಾರಿ, ಬ್ರಿಗೇಡಿಯರ್ ಐ.ಎನ್.ರೈ, ನಿವೃತ್ತ ಯೋಧ ಕ್ಯಾ| ರಮೇಶ್ ಕಾರ್ಣಿಕ್, ಬ್ರಿಗೇಡಿಯರ್ ಪೂರ್ವಿಮಾತ್ ಡಿ.ಎಂ., ಸಚಿನ್ ಕುಲಕರ್ಣಿ, ಮಿಥುನ್ ಚೌಟರ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಸ್.ಎಂ.ಐರನ್, ಮುಂತಾದವರು ಉಪಸ್ಥಿತರಿದ್ದರು. ಕೆ.ಎ.ಕೆ.ಶರ್ಮ ವಂದಿಸಿದರು.
20 ಸಾವಿರ ಕಿ.ಮೀ. ಬೈಕ್ ರ‍್ಯಾಲಿ
ಬಿಆರ್‌ಒ ದೇಶದ ಗಡಿಯಲ್ಲಿ ಉತ್ತಮ ಮೂಲ ಸೌಕರ್ಯ ಒದಗಿಸುವಲ್ಲಿ ಕೆಲಸ ಮಾಡುವ ಸಂಘಟನೆಯಾಗಿದೆ. ಈ ರ್ಯಾಲಿ ದೇಶದ ಎಲ್ಲ ರಾಜ್ಯಗಳನ್ನು ಸಂಪರ್ಕಿಸುವಂತೆ 75 ದಿನಗಳಲ್ಲಿ 75 ಬೈಕ್‌ಗಳಲ್ಲಿ 6 ತಂಡಗಳಲ್ಲಿ 20 ಸಾವಿರ ಕಿ.ಮೀ. ಕ್ರಮಿಸುವ ಗುರಿ ಹೊಂದಿದೆ. ಇದರ 6ನೇ ತಂಡ ಡಿ. 9ರಂದು ಕೇರಳದ ತಿರುವನಂತಪುರಂನಿಂದ ಬೈಕ್ ರ‍್ಯಾಲಿ ಆರಂಭಿಸಿದ್ದು, ಡಿ.11ರಂದು ಸಂಜೆ ತಲಪಾಡಿ ಮೂಲಕ ಕರ್ನಾಟಕ ಪ್ರವೇಶಿಸಿದೆ. ಒಟ್ಟು 26 ಮಂದಿ ರ್ಯಾಲಿಯಲ್ಲಿ ಆಗಮಿಸಿದ್ದಾರೆ. ರಾಜ್ಯದಲ್ಲಿ ಹಾದು ಹೋಗುತ್ತಿರುವ ಏಕೈಕ ತಂಡ ಇದಾಗಿದ್ದು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕರ್ನಾಟಕದ ಮೂಲಕ ಗೋವಾ ಪ್ರವೇಶಿಸಲಿದೆ.