Advertisement

ಚದುರಿ ಛಿದ್ರಗೊಂಡ ಯೋಧರ ದೇಹ

12:30 AM Feb 15, 2019 | |

ಶ್ರೀನಗರ/ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೊರಾಲ್ಲಿ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ ಸಿಆರ್‌ಪಿಎಫ್ ಯೋಧರ ಮೇಲಿನ ದಾಳಿಯ ತೀವ್ರತೆ ಎಷ್ಟಿತ್ತು ಎಂದರೆ   10-12 ಕಿ.ಮೀ. ವರೆಗೂ ಕೇಳಿಬಂದಿತ್ತು. ಪುಲ್ವಾಮಾ ಹಾಗೂ ಸುತ್ತಲಿನ ಪ್ರದೇಶದವರೆಗೂ ಈ ಸದ್ದು ಕೇಳಿದೆ ಎಂದು ಸ್ಥಳೀಯರು ಹೇಳಿದ್ದಾರೆ. 

Advertisement

ಘಟನಾ ಸ್ಥಳದಲ್ಲಿ  ಸಿಆರ್‌ಪಿಎಫ್ ಯೋಧರ ಮೃತ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅವು ಎಷ್ಟರ ಮಟ್ಟಿಗೆ ವಿರೂಪಗೊಂಡಿವೆಯೆಂದರೆ, ಗುರುತು ಹಿಡಿಯಲು ಕೆಲವು ದಿನಗಳೇ ಬೇಕಾಗಬಹುದು ಎನ್ನಲಾಗಿದೆ. ಸ್ಫೋಟಕ್ಕೆ ಯಾವ ರೀತಿಯ ವಾಹನವನ್ನು ಬಳಸಲಾಗಿತ್ತು ಎಂಬುದು ಗುರುತು ಸಿಗುವಂತೆಯೇ ಇರಲಿಲ್ಲ. ಯಾಕೆಂದರೆ ವಾಹನ ಸ್ಫೋಟಗೊಂಡ ರಭಸಕ್ಕೆ ಕಬ್ಬಿಣದ ತುಂಡುಗಳನ್ನು ಬಿಟ್ಟರೆ ಇನ್ನೇನೂ ಸ್ಥಳದಲ್ಲಿ ಉಳಿದಿಲ್ಲ. ಸ್ಫೋಟ ನಡೆಯುತ್ತಿದ್ದಂತೆಯೇ ಸುತ್ತಲಿನ ಜನರು ಭಯದಿಂದ ಓಡಿದ್ದರು. ಘಟನೆ ಸ್ಥಳದಿಂದ ಕೇವಲ 300 ಮೀಟರ್‌ ದೂರದಲ್ಲಿದ್ದ ಲೆಥ್‌ಪೋರಾ ಮಾರ್ಕೆಟ್‌ನಲ್ಲಿ ಅಂಗಡಿಕಾರರು ಸುರಕ್ಷತೆಗಾಗಿ ಶಟರ್‌ ಎಳೆದುಕೊಂಡು ಕಾಲ್ಕಿತ್ತಿದ್ದರು. ಇಲ್ಲಿಂದ ಸ್ವಲ್ಪ ದೂರದಲ್ಲೇ ಕಮಾಂಡೋ ತರಬೇತಿ ಕೇಂದ್ರವೂ ಇದೆ. 

ಸುರಕ್ಷಿತವಲ್ಲವೇ?: ಜಮ್ಮುವಿನಿಂದ ಶ್ರೀನಗರಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ ಅತ್ಯಂತ ಸುರಕ್ಷಿತ ಎಂದೇ ಭಾವಿಸಲಾಗಿದೆ. ಈ ಹೆದ್ದಾರಿ ಗುಂಟ 24 ಗಂಟೆಗಳ ಕಾಲ ಭಾರಿ ಬಿಗಿ ಭದ್ರತೆಯೂ ಇರುತ್ತದೆ. ಎರಡು ದಿನಗಳಲ್ಲಿ ಈ ಭಾಗದಲ್ಲಿ ವಿಪರೀತ ಹಿಮ ಬಿದ್ದುದರಿಂದ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಗುರುವಾರ ಭಾರಿ ಸಂಖ್ಯೆಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಕಾಶ್ಮೀರಕ್ಕೆ ತೆರಳಬೇಕಾಗಿತ್ತು. ಇಂಥ ಸುರಕ್ಷಿತ ಹೆದ್ದಾರಿಯಲ್ಲೇ ಉಗ್ರರು ದಾಳಿ ನಡೆಸಿದ್ದು ಈಗ ಸೇನಾ ಪಡೆಯನ್ನು ಚಿಂತೆಗೀಡು ಮಾಡಿದೆ.

ಎನ್‌ಐಎ ತಂಡ ಕಾಶ್ಮೀರಕ್ಕೆ: ಘಟನೆಯ ತನಿಖೆಯ ಹೊಣೆಯನ್ನು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ವಹಿಸಿಕೊಂಡಿದ್ದು, ಶುಕ್ರವಾರ ಕಣಿವೆ ರಾಜ್ಯಕ್ಕೆ  ತಲುಪಲಿದೆ. ಸ್ಥಳದಲ್ಲಿ ಬೆರಳಚ್ಚು ಮೌಲೀಕರಣ ಹಾಗೂ ತನಿಖೆಗಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ನೆರವಾಗಲಿದೆ. ಜತೆಗೆ ಎನ್‌ಎಸ್‌ಜಿ ತಂಡ ಕೂಡ ಇರಲಿದೆ.

ಭಾರತಕ್ಕೆ ಬೆಂಬಲ: ಭಯೋತ್ಪಾದನೆಯನ್ನು ಎದುರಿಸಲು ಮತ್ತು ಅದರ ನಿರ್ಮೂಲನೆಗೆ ಭಾರತದೊಂದಿಗೆ ನಾವು ಸಹಕರಿಸುತ್ತೇವೆ ಎಂದು ಭಾರತಕ್ಕೆ ಅಮೆರಿಕದ ರಾಯಭಾರಿ ಕೆನ್ನೆತ್‌ ಜಸ್ಟರ್‌ ಹೇಳಿದ್ದಾರೆ. ಸಂತ್ರಸ್ತರ ಕುಟುಂಬಕ್ಕೆ ನಮ್ಮ ಸಂತಾಪವಿದೆ. ಈ ಕೃತ್ಯವನ್ನು ನಾವು ಖಂಡಿಸುತ್ತೇವೆ ಎಂದು ಅವರು ಹಳಿದ್ದಾರೆ. ಫ್ರಾನ್ಸ್‌, ರಷ್ಯಾ, ಬ್ರಿಟನ್‌, ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಸಹಿತ ವಿಶ್ವದ ಹಲವು ಸರಕಾರಿ ಮುಖ್ಯಸ್ಥರು  ಈ ಘಟನೆಯನ್ನು ಖಂಡಿಸಿದ್ದಾರೆ.

Advertisement

ದೋವಲ್‌ ನೇತೃತ್ವ: ದಾಳಿಯ ಭೀಕರತೆ ಅನಾವರಣಗೊಳ್ಳುತ್ತಿದ್ದಂತೆ,  ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ರಾಜನಾಥ್‌ ಸಿಂಗ್‌ ಮಾತುಕತೆ ನಡೆಸಿದ್ದಾರೆ. ಸನ್ನಿವೇಶದ ಮೇಲ್ವಿಚಾರಣೆಯನ್ನು ಅಜಿತ್‌ ದೋವಲ್‌ ಮಾಡುತ್ತಿದ್ದಾರೆ.

ಬಾಲಿವುಡ್‌ನಿಂದ ಸಂತಾಪ: ಪುಲ್ವಾಮಾದಲ್ಲಿ ನಡೆದ ವಿಧ್ವಂಸಕ ಕೃತ್ಯವನ್ನು ಬಾಲಿವುಡ್‌ ಸಹ ಖಂಡಿಸಿದೆ. ಟ್ವಿಟರ್‌ನ ಮೂಲಕ ಪ್ರಿಯಾಂಕಾ ಚೋಪ್ರಾ, ಅಕ್ಷಯ್‌ ಕುಮಾರ್‌, ವರುಣ್‌ ಧವನ್‌, ಕರಣ್‌ ಜೋಹರ್‌, ಅಭಿಷೇಕ್‌ ಬಚ್ಚನ್‌, ಅಜಯ್‌ ದೇವಗನ್‌, ರಿತೇಶ್‌ ದೇಶಮುಖ್‌, ಮಾಧವನ್‌, ಅನುಪಮ ಖೇ, ಗುಲ್‌ ಪನಾಗ್‌ ಮುಂತಾದವರು ಘಟನೆಯ ವಿರುದ್ಧ ಕಿಡಿ ಕಾರಿದ್ದು, ಹುತಾತ್ಮ ಯೋಧರ ಕುಟುಂಬಗಳಿಗೆ ಸಾಂತ್ವನ ಕೋರಿದ್ದಾರೆ. 

ಸಾಯಿಸಿದ್ದೇವೆ… ಎಂದ ಉಗ್ರ!: ಉಗ್ರ ದಾಳಿ ನಡೆದ ಅನಂತರ ಚಿತ್ರೀಕರಿಸಲಾಗಿದೆ ಎನ್ನಲಾದ ಒಂದು ವೀಡಿಯೋ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೋ ಮಾಡಿದ ವ್ಯಕ್ತಿ “ಸಾಯಿಸಿದ್ದೇವೆ… ಸಾಯಿಸಿದ್ದೇವೆ’ ಎಂದು ಹೇಳುವುದು ದಾಖಲಾಗಿದೆ. ಅಲ್ಲದೆ ಸಿಆರ್‌ಪಿಎಫ್ ಯೋಧರ ಶವವನ್ನು ನೋಡಿ “ಅಲ್ಲಿ ಶವಗಳು ಕಾಣಿಸುತ್ತಿವೆ’ ಎಂದೂ ಆತ ಹೇಳಿದ್ದು ಕೇಳಿ ಬಂದಿದೆ. ಮೊಬೈಲ್‌ನಲ್ಲಿ ಈ ವೀಡಿಯೋ ಚಿತ್ರೀಕರಿಸಲಾಗಿದೆ.

ದಾಳಿ ನಡೆಸಿದ್ದು ಯಾರು? 
ಆತ್ಮಹತ್ಯಾ ದಾಳಿಕೋರನನ್ನು ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಆದಿಲ್‌ ಅಹಮದ್‌ ಎಂದು ಗುರುತಿಸಲಾಗಿದೆ. ಈತನನ್ನು ಅದಿಲ್‌ ಅಹಮದ್‌ ಗಾಡಿ ಟಕ್ರಾನೆವಾಲಾ ಎಂದು ಕರೆಯಲಾಗುತ್ತಿತ್ತು. ಅಷ್ಟೇ ಅಲ್ಲ, ಈತನನ್ನು ಗುಂಡಿಬಾಗ್‌ನ ವಖಾಸ್‌ ಕಮಾಂಡೋ ಎಂದೂ ಗುರುತಿಸಲಾಗುತ್ತಿತ್ತು. ಈತ ಪುಲ್ವಾಮದ ಕಾಕಾಪೋರ ನಿವಾಸಿ. ಕಳೆದ ವರ್ಷವಷ್ಟೇ ಈತ ಉಗ್ರ ಸಂಘಟನೆಗೆ ಸೇರಿದ್ದ ಎನ್ನಲಾಗಿದೆ. “ನನ್ನ ಹೆಸರು  ಆದಿಲ್‌. ನಾನು ವರ್ಷದ ಹಿಂದೆ ಜೈಶ್‌ ಸೇರಿದ್ದೆ. ಒಂದು ವರ್ಷ ಕಾದ ನಂತರ ನನಗೆ ನನ್ನ ಉದ್ದೇಶ ಈಡೇರಿಸುವ ಅವಕಾಶ ಬಂದಿದೆ. ಈ ವೀಡಿಯೋ ನಿಮ್ಮನ್ನು ತಲುಪುವ ವರೆಗೆ ನಾನು ಸ್ವರ್ಗದಲ್ಲಿರುತ್ತೇನೆ. ಇದು ಕಾಶ್ಮೀರದ ಜನರಿಗೆ ನನ್ನ ಕೊನೆಯ ಸಂದೇಶ’ ಎಂದು ವೀಡಿಯೋದಲ್ಲಿ ಹೇಳಿದ್ದಾನೆ. 

ಸ್ಥಳೀಯ ಯುವಕನ ಆಯ್ಕೆ !  
ಸಾಮಾನ್ಯವಾಗಿ ದೊಡ್ಡ ಮಟ್ಟದ ಉಗ್ರ ದಾಳಿಗೆ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ಪಾಕಿಸ್ಥಾನದ ಉಗ್ರರನ್ನು ಬಳಸಿಕೊಳ್ಳುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಪುಲ್ವಾಮಾದ ವ್ಯಕ್ತಿ ಆದಿಲ್‌  ಹುಸೇನ್‌ನನ್ನು ಬಳಸಿಕೊಂಡಿದೆ. ಈತ ಉಗ್ರ ಸಂಘಟನೆ ಸೇರುವುದಕ್ಕೂ ಮೊದಲು ಪುಲ್ವಾಮಾದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ. ಒಂದು ಮೂಲಗಳ ಪ್ರಕಾರ ಈತ 2017 ರಲ್ಲಿ ಉಗ್ರ ಸಂಘಟನೆ ಸೇರಿದ್ದು, ಅದಕ್ಕೂ ಮುನ್ನ ಈತನನ್ನು ಬ್ರೇನ್‌ವಾಶ್‌ ಮಾಡಲಾಗಿತ್ತು. ಈತ ವಿದ್ಯಾಭ್ಯಾಸವನ್ನು ಅರ್ಧಕ್ಕೇ ತ್ಯಜಿಸಿದ್ದ. ಸ್ಥಳೀಯ ಯುವಕರು ಭಾರತೀಯ ಸೇನೆಯ ವಿರುದ್ಧ ದಾಳಿ ನಡೆಸಲು ಹೆಚ್ಚು ಸಮರ್ಥರು ಎಂಬುದು ಜೈಶ್‌ ಉಗ್ರರಿಗೆ ಭಾವಿಸಿದ್ದರಿಂದಲೇ ಈತನನ್ನು ಬಳಸಿಕೊಳ್ಳಲಾಗಿದೆ.

ವಾರ ಮೊದಲೇ ಸೂಚನೆ?
ಗುರುವಾರದ ದಾಳಿಯ ಬಗ್ಗೆ ಕೇಂದ್ರ ಗುಪ್ತಚರ ಸಂಸ್ಥೆ ಮುನ್ನೆಚ್ಚರಿಕೆ ನೀಡಿತ್ತು ಎಂದು ಹೇಳಲಾಗಿದೆ. ಸುಧಾರಿತ ಸ್ಫೋಟಕಗಳನ್ನು ಬಳಸಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಫೆ. 8 ರಂದು ಗುಪ್ತಚರ ದಳಗಳು ಸೂಚನೆ ನೀಡಿದ್ದವು. ಅಷ್ಟೇ ಅಲ್ಲ, ರಜೆಗೆ ಬಂದ ನಂತರದಲ್ಲಿ ವಾಪಸ್‌ ತೆರಳುವುದಕ್ಕೂ ಮುನ್ನ ಈ ಪ್ರದೇಶದಲ್ಲಿ ಸೂಕ್ತ ಭದ್ರತೆ ವ್ಯವಸ್ಥೆ ಮಾಡಬೇಕು ಎಂದೂ ಸೂಚನೆ ನೀಡಲಾಗಿತ್ತು. ಗುಪ್ತಚರ ದಳ ಸೂಚನೆ ನೀಡಿದ ಆರು ದಿನಗಳಲ್ಲೇ ಈ ಘಟನೆ ನಡೆದಿದೆ.

ಇಂದು ಭದ್ರತಾ ಸಮಿತಿ ಸಭೆ
ಸ್ಫೋಟದ ಅನಂತರದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭದ್ರತೆಗಾಗಿನ ಕೇಂದ್ರ ಸಚಿವ ಸಂಪುಟ ಸಭೆ ಸೇರಲಿದ್ದು, ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಈ ಮಧ್ಯೆ ಮಾತನಾಡಿದ ಗೃಹ ಸಚಿವ ರಾಜನಾಥ್‌ ಸಿಂಗ್‌, “ಪಾಕ್‌ ಮೂಲದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ಈ ಕೃತ್ಯವೆಸಗಿದೆ. ಕಠಿನ ಪ್ರತಿಕ್ರಿಯೆಯನ್ನು ನೀಡಲಾಗುತ್ತದೆ ಎಂಬ ಭರವಸೆಯನ್ನು ದೇಶದ ಜನರಿಗೆ ನೀಡುತ್ತೇನೆ’ ಎಂದಿದ್ದಾರೆ.

ಇಂಟರ್‌ನೆಟ್‌ ಬಂದ್‌
ಪುಲ್ವಾಮಾ ಘಟನೆಯ ಬೆನ್ನಲ್ಲೇ ಕಾಶ್ಮೀರದಾದ್ಯಂತ ಮೊಬೈಲ್‌ ಇಂಟರ್‌ನೆಟ್‌ ಸ್ಥಗಿತಗೊಳಿಸಲಾಗಿದೆ. ಅಷ್ಟೇ ಅಲ್ಲ, ಮುನ್ನೆಚ್ಚರಿಕೆ ಕ್ರಮವಾಗಿ ಸ್ಪೀಡ್‌ ಅನ್ನೂ ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದೆ.

ನಡೆಯಿತು ಮತ್ತೂಂದು ದಾಳಿ
ಪುಲ್ವಾಮಾದಲ್ಲಿ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಈ ಭಾಗದಲ್ಲಿ ಸುಮಾರು 15 ಗ್ರಾಮಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಈ ಮಧ್ಯೆಯೇ ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿರುವಾಗ ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಉಗ್ರರನ್ನು ಸಿಆರ್‌ಪಿಎಫ್ ಯೋಧರು ಸುತ್ತುವರಿದಿದ್ದಾರೆ. ಆದರೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದರಿಂದ ಆರು ಉಗ್ರರು ತಪ್ಪಿಸಿಕೊಂ ಡಿದ್ದಾರೆ. ಉಗ್ರ ಆದಿಲ್‌ ಗ್ರಾಮ ಕಾಕಪೋರದಲ್ಲೇ ಈ ಕದನ ನಡೆದಿದ್ದು, ಖಚಿತ ಸುಳಿವಿನ ಮೇರೆಗೆ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಘಟನೆಯಲ್ಲಿ ಯಾವುದೇ ಸಾವುನೋವು ವರದಿಯಾಗಿಲ್ಲ.

ಪಾಕಿಸ್ಥಾನವೇ ಕಾರಣ: ಪುಲ್ವಾಮಾ ದಾಳಿಗೆ ಪಾಕಿಸ್ಥಾನವೇ ಕಾರಣ ಎಂದು ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ ಮಲ್ಲಿಕ್‌ ಹೇಳಿದ್ದಾರೆ. ಸ್ಫೋಟಕ್ಕೆ ಬಳಸಿದ ಸ್ಫೋಟಕ 350 ಕಿಲೋ ಇದ್ದು, ಇದನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿಸಿರಲು ಸಾಧ್ಯವೇ ಇಲ್ಲ. ಇದಕ್ಕೆ ನಾವು ತಕ್ಕ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ಜಮ್ಮು – ಕಾಶ್ಮೀರದಲ್ಲಿ ಸಿಆರ್‌ಪಿಎಫ್
ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರ ಪಡೆಗಳಲ್ಲಿ ಅತಿ ದೊಡ್ಡ ಪಡೆ ಸಿಆರ್‌ಪಿಎಫ್. 
ಮೂಲ ಕರ್ತವ್ಯ-  ಕಾನೂನು ಸುವ್ಯವಸ್ಥೆ ಪಾಲನೆ. 

1990    ರಿಂದ ಕಾಶ್ಮೀರದ ಪ್ರತಿ ಜಿಲ್ಲೆಯಲ್ಲೂ ನಿಯೋಜನೆ. 
60,000    ಸದ್ಯದ ಮಟ್ಟಿಗೆ ಇಷ್ಟು ಯೋಧರು ಸೇವೆಯಲ್ಲಿ. 
2017    ರಲ್ಲಿ  ಸಿಆರ್‌ಪಿಎಫ್ ಮೇಲೆ ಐಇಡಿ ದಾಳಿ ನಡೆದಿತ್ತು.
2018    ಸಣ್ಣ ಪ್ರಮಾಣದ ಹತ್ತು ದಾಳಿ 

ಪ್ರಮುಖ ದಾಳಿಗಳು
2018 ಫೆ. 7: ಶ್ರೀನಗರ ಮಹಾರಾಜ ಹರಿ ಸಿಂಗ್‌ ಆಸ್ಪತ್ರೆ ಬಳಿ ಉಗ್ರರು ದಾಳಿ. ಈ ಘಟನೆಯಲ್ಲಿ ಇಬ್ಬರು ಪೊಲೀಸರ ಸಾವು. ತಪ್ಪಿಸಿಕೊಂಡಿದ್ದ ಲಷ್ಕರ್‌ ಉಗ್ರ ನವೀದ್‌ ಜಾಟ್‌.
2017 ಡಿ. 31: ಲೇಥ್‌ಪೋರಾ ಪ್ರದೇಶದಲ್ಲೇ 24 ಗಂಟೆ ಎನ್‌ಕೌಂಟರ್‌. ಐವರು ಸಿಆರ್‌ಪಿಎಫ್ ಯೋಧರು ಹುತಾತ್ಮ. ಮೂವರು ಉಗ್ರರ ಹತ್ಯೆ
2016 ನ. 29: ಜಮ್ಮುವಿನ ನಗ್ರೋತಾದಲ್ಲಿ ಸೇನಾ ನೆಲೆಗೆ ಉಗ್ರರ ಲಗ್ಗೆ. ಏಳು ಯೋಧರು ಹುತಾತ್ಮ. ಇಬ್ಬರು ಅಧಿಕಾರಿಗಳ ಸಾವು. 
2016 ಅ.6: ಹಂದ್ವಾರಾದಲ್ಲಿ ರಾಷ್ಟ್ರೀಯ ರೈಫ‌ಲ್ಸ್‌ ಕ್ಯಾಂಪ್‌ ಮೇಲೆ ದಾಳಿಗೆ ಸಂಚು. ಮೂವರು ಉಗ್ರರ ಹತ್ಯೆ 
2016 ಅ. 2: ರಾಷ್ಟ್ರೀಯ ರೈಫ‌ಲ್ಸ್‌ ಸೇನಾ ನೆಲೆಯ ಮೇಲೆ ದಾಳಿಗೆ ಯತ್ನ. ಇಬ್ಬರು ಉಗ್ರರ ಹತ್ಯೆ. ಯೋಧ ಹುತಾತ್ಮ
2016 ಸೆ.18: ಉರಿ ಸೇನಾ ನೆಲೆಯ ಮೇಲೆ ದಾಳಿ. 19 ಯೋಧರು ಹುತಾತ್ಮ. 4 ಉಗ್ರರೂ ಫಿನಿಶ್‌. ಘಟನೆಗೆ ಪ್ರತೀಕಾರವಾಗಿ ನಡೆದಿತ್ತು ಸರ್ಜಿಕಲ್‌ ಸ್ಟ್ರೈಕ್‌
2016 ಜೂ. 25: ಶ್ರೀನಗರದ ಪಾಂಪೊರೆಯಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ, 8 ಮಂದಿ ಹುತಾತ್ಮ. 20 ಯೋಧರಿಗೆ ಗಾಯ
2016 ಫೆ. 21: ಶ್ರೀನಗರದ ಸರಕಾರಿ ಕಟ್ಟಡಕ್ಕೆ ನುಗ್ಗಿದ್ದ ಉಗ್ರರು. ಇಬ್ಬರು ಕ್ಯಾಪ್ಟನ್‌ಗಳು ಸೇರಿ ಮೂವರು ಯೋಧರು ಹುತಾತ್ಮ. 2 ದಿನಗಳ ಕಾರ್ಯಾಚರಣೆಯಲ್ಲಿ ಉಗ್ರನ ಹತ್ಯೆ
2016 ಜ. 1: ಪಠಾಣ್‌ಕೋಟ್‌ ವಾಯುನೆಲೆಯ ಮೇಲೆ ನಡೆದ ದಾಳಿಯಲ್ಲಿ ಮೂವರು ಯೋಧರು ಸಾವನ್ನಪ್ಪಿದ್ದರು. ಆರು ಉಗ್ರರನ್ನು ಹತ್ಯೆಗೈಯಲಾಗಿತ್ತು.

ಪುಲ್ವಾಮಾದಲ್ಲಿನ ಉಗ್ರ ದಾಳಿಯನ್ನು ಭಾರತ ಬಲವಾಗಿ ಖಂಡಿಸುತ್ತದೆ. ಭಯೋತ್ಪಾದನೆಯ ವಿರುದ್ಧ ಹೋರಾಡಲು ನಮ್ಮ ದೇಶ ಒಗ್ಗಟ್ಟಾಗಿ ಎದ್ದು ನಿಲ್ಲುತ್ತದೆ. 
ರಾಮನಾಥ್‌ ಕೋವಿಂದ್‌, ರಾಷ್ಟ್ರಪತಿ

ಸಿಆರ್‌ಪಿಎಫ್ ಯೋಧರ ಮೇಲಿನ ದಾಳಿ ನೋವು ತಂದಿದೆ. ಘಟನೆಯಲ್ಲಿ ಹಲವಾರು ಯೋಧರು ಹುತಾತ್ಮರಾಗಿದ್ದಾರೆ. ಅವರಿಗೆ ನನ್ನ ಶ್ರದ್ಧಾಂಜಲಿ. 
ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

ಸಿಆರ್‌ಪಿಎಫ್ ಯೋಧರ ಮೇಲಿನ ದಾಳಿ ನನ್ನಲ್ಲಿ ತೀವ್ರ ದುಃಖ ತಂದಿದೆ. ಘಟನೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಯೋಧರು ಸಾವನ್ನಪ್ಪಿದ್ದು, ಕೆಲವರು ಗಂಭೀರ ವಾಗಿ ಗಾಯಗೊಂಡಿದ್ದಾರೆ. ಹುತಾತ್ಮರಾದ ಯೋಧರಿಗೆ ನನ್ನ ಶ್ರದ್ಧಾಂಜಲಿ. 
ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ 

ಪುಲ್ವಾಮಾ ದಾಳಿ ಪದಗಳಲ್ಲಿ ಹೇಳಿಕೊಳ್ಳಲಾಗದಷ್ಟು ನೋವು ತಂದಿದೆ. ಇಂಥ ದಾಳಿಗಳಿಂದ ನಮ್ಮ ಸೇನೆ ಧೈರ್ಯಗುಂದುವುದಿಲ್ಲ. ಉಗ್ರವಾದವನ್ನು ಖಂಡಿತವಾಗಿಯೂ ದಮನ ಮಾಡುತ್ತವೆ. 
ಅಮಿತ್‌ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ

ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ದಾಳಿ ಹೇಡಿಗಳ ಕೃತ್ಯವಾಗಿದ್ದು ಇದು ಖಂಡನೀಯ. ದೇಶಕ್ಕಾಗಿ ಪ್ರಾಣ ತೆತ್ತ ಹುತಾತ್ಮ ಸೈನಿಕರ ಕುಟುಂಬಕ್ಕೆ ಸಾಂತ್ವನ ಸಲ್ಲಿಸಬಯಸುತ್ತೇನೆ. 
 ಶರದ್‌ ಪವಾರ್‌, ಎನ್‌ಸಿಪಿ ನಾಯಕ

ಹುತಾತ್ಮರಾದ ಯೋಧರ ಪ್ರತಿಯೊಂದು ರಕ್ತದ ಹನಿಗೂ ಭಾರತ ಪ್ರತೀಕಾರ ತೀರಿಸಿಕೊಳ್ಳುತ್ತದೆ. ಈ ಘಟನೆ ಖಂಡನೀಯ. 
ವಿ.ಕೆ. ಸಿಂಗ್‌, ವಿದೇಶಾಂಗ ಇಲಾಖೆಯ ಸಹಾಯಕ ಸಚಿವ

ಫ‌ುಲ್ವಾಮಾ ಘಟನೆಯ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸಲ್ಲದು. ಹಾಗಾಗಿ, ಉತ್ತರ ಪ್ರದೇಶದಲ್ಲಿ ನಾನು ಚಾಲನೆ ಮಾಡಿರುವ ರಾಜಕೀಯ ಚಟುವಟಿಕೆಗಳನ್ನು ಸ್ವಲ್ಪ ದಿನದ ಮಟ್ಟಿಗೆ ನಿಲ್ಲಿಸಿ ದಿಲ್ಲಿಗೆ ಹಿಂದಿರುಗುತ್ತಿದ್ದೇನೆ. 
ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ಯೋಧರ ಮೇಲಿನ ಉಗ್ರರ ದಾಳಿ ಖಂಡನೀಯ. ಹುತಾತ್ಮರಿಗೆ ಕುಟುಂಬಗಳಿಗೆ ನನ್ನ ಸಾಂತ್ವನ. ಗಾಯಗೊಂಡ ಯೋಧರು ಬೇಗನೇ ಗುಣಮುಖರಾಗಲಿ ಎಂದು ಹಾರೈಸುವೆ. 
ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next