Advertisement

Jammu-ಕಾಶ್ಮೀರದಲ್ಲಿ ಬಂದೂಕಲ್ಲ; ಬಾಡಿಕ್ಯಾಮ್‌ ಅಸ್ತ್ರ

01:07 AM Jul 08, 2024 | Team Udayavani |

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ಥಾನ ಪ್ರೇರಿತ ಉಗ್ರರು ಇದುವರೆಗೆ ಸ್ಥಳೀಯರು ತಮ್ಮ ಪರವಾಗಿ ಕೆಲಸ ಮಾಡುವಂತೆ ಬಂದೂಕು ತೋರಿಸಿ ಬೆದರಿಕೆ ಹಾಕುತ್ತಿದ್ದರು. ಅದಕ್ಕೆ ಸ್ಥಳೀಯರು ಸೆಡ್ಡು ಹೊಡೆಯಲು ಆರಂಭಿಸಿದ ಬಳಿಕ ದೇಹದಲ್ಲಿ ರಹಸ್ಯವಾಗಿ ಧರಿಸುವ “ಬಾಡಿ ಕ್ಯಾಮ್‌’ ಉಪಯೋಗಿಸಿ ಸ್ಥಳೀಯರನ್ನು ಬ್ಲ್ಯಾಕ್‌ಮೇಲ್ ಮಾಡುವ ಹೊಸ ತಂತ್ರ ಅನುಸರಿಸುತ್ತಿರು ವುದು ಬೆಳಕಿಗೆ ಬಂದಿದೆ.

Advertisement

ಉಗ್ರರು ಎಂದು ತಿಳಿಯದೆ ಸ್ಥಳೀಯರು ಸಣ್ಣ ಪುಟ್ಟ ಸಹಾಯ ಮಾಡಿದರೆ ಅದನ್ನು ಬಾಡಿ ಕ್ಯಾಮ್‌ ಮೂಲಕ ಚಿತ್ರೀಕರಿಸುತ್ತಾರೆ. ಅನಂತರ ಆ ವೀಡಿಯೋಗಳನ್ನು ಪ್ರದರ್ಶಿಸಿ ತಮ್ಮ ಪರವಾಗಿ ಕೆಲಸ ಮಾಡದಿದ್ದರೆ ಪೊಲೀಸರಿಗೆ ಅಥವಾ ಸೇನೆಗೆ “ಉಗ್ರರ ಪರ ಕೆಲಸ ಮಾಡುತ್ತಿದ್ದಾರೆ’ ಎಂದು ಮಾಹಿತಿ ನೀಡುವ ಬೆದರಿಕೆ ಒಡ್ಡುತ್ತಾರೆ. ತಮಗೆ ಊಟ, ವಸತಿ ಮತ್ತಿತರ ವ್ಯವಸ್ಥೆಗಳನ್ನು ಮಾಡದಿದ್ದರೆ ಈ ವೀಡಿಯೋಗಳನ್ನು ವೈರಲ್‌ ಮಾಡಿ ಉಗ್ರರೊಂದಿಗೆ ನಂಟು ಹೊಂದಿರುವಂತೆ ಬಿಂಬಿಸುವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳನ್ನು ಉಲ್ಲೇಖೀಸಿ ಇಂಗ್ಲಿಷ್‌ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಜಮ್ಮು-ಕಾಶ್ಮೀರದ ಬಸಂತ್‌ಘರ್‌ಎಂಬಲ್ಲಿ ಗ್ರಾಮ ರಕ್ಷಣ ಪಡೆಯ ಸಿಬಂದಿಯೊಬ್ಬರನ್ನು ಉಗ್ರರು ಇತ್ತೀಚೆಗೆ ಹತ್ಯೆಗೈದಿದ್ದರು. ಈ ಸಂಬಂಧ ಭದ್ರತ ಪಡೆಗಳು ಉಗ್ರರನ್ನು ಬೆನ್ನಟ್ಟಿದ್ದ ಸಂದರ್ಭದಲ್ಲಿ ಈ ಹೊಸ ತಂತ್ರದ ಬಗ್ಗೆ ಸುಳಿವು ಸಿಕ್ಕಿದೆ. ಕಣಿವೆಯ ಹಲವು ಗ್ರಾಮಗಳಲ್ಲಿ ಉಗ್ರರು ಇದೇ ಮಾದರಿಯಲ್ಲಿ ಸ್ಥಳೀಯರನ್ನು ತಮ್ಮ ಪರವಾಗಿ ಕೆಲಸ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ ಎಂಬುದಾಗಿ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಣಿವೆಯಲ್ಲಿದ್ದಾರೆ 110 ವಿದೇಶಿ ಉಗ್ರರು
ಕಣಿವೆಯಾದ್ಯಂತ 110 ಮಂದಿ ವಿದೇಶಿ ಉಗ್ರರು ಸಕ್ರಿಯರಾಗಿದ್ದಾರೆ. ಈ ಪೈಕಿ ಉತ್ತರ ಪೀರ್‌ ಪಾಂಜಾಲ್‌ ಶ್ರೇಣಿಯಲ್ಲಿ 60 ಉಗ್ರರು ಸಕ್ರಿಯರಾಗಿದ್ದರೆ, 50 ಮಂದಿ ದಕ್ಷಿಣ ಶ್ರೇಣಿಗಳಲ್ಲಿ ಅಡಗಿದ್ದಾರೆಂದು ಶೋಧ ಕಾರ್ಯಾಚರಣೆ ನಿರತ ಭದ್ರತ ಪಡೆಗಳು ಮಾಹಿತಿ ನೀಡಿವೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next