Advertisement

Rural Govt., ಶಾಲೆಗಳಿಗೆ ಸೌರಶಕ್ತಿ; ಉಡುಪಿಯ 25 ಶಾಲೆಗಳಲ್ಲಿ “ಸೋಲಾರ್‌’ ಅನುಷ್ಠಾನ ಗುರಿ

12:52 AM Sep 10, 2024 | Team Udayavani |

ಕುಂದಾಪುರ: ಉಡುಪಿ ಜಿಲ್ಲೆಯ ಸರಕಾರಿ ಆಸ್ಪತ್ರೆಗಳ ಬಳಿಕ, ಈಗ ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲೂ ಸೌರಶಕ್ತಿಯ ಸದ್ಬಳಕೆಗೆ ಯೋಜನೆ ಮೂಲಕ ವಿದ್ಯುತ್‌ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡಲಾಗಿದೆ.

Advertisement

ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಸೆಲ್ಕೋ ಸೋಲಾರ್‌ ಫೌಂಡೇಶನ್‌ ನೇತೃತ್ವದಲ್ಲಿ ಬೆಂಗಳೂರು ಮೂಲದ ಕ್ಯಾನ್‌ಫಿನ್‌ ಹೋಮ್ಸ್‌ ಸಂಸ್ಥೆಯ ಸಹಯೋಗದಲ್ಲಿ ಹಕ್ಲಾಡಿ ಸರಕಾರಿ ಪ್ರೌಢಶಾಲೆ, ಕಕ್ಕುಂಜೆ ಸರಕಾರಿ ಶಾಲೆಯನ್ನು ಸಂಪೂರ್ಣ ಸೋಲಾರ್‌ ಸ್ವಾವಲಂಬಿಯನ್ನಾಗಿ ಮಾಡ ಲಾಗಿದೆ. ಈ ವರ್ಷ ಉಡುಪಿ ಜಿಲ್ಲೆಯ ಗ್ರಾಮಾಂತರ ಪ್ರದೇಶದ 25 ಸರಕಾರಿ ಶಾಲೆಗಳಲ್ಲಿ ಸಂಪೂರ್ಣ ಸೌರ ಶಕ್ತಿಯನ್ನು ಬಳಸಿಕೊಳ್ಳುವ ಗುರಿ ಹೊಂದಲಾಗಿದೆ.

ಕಕ್ಕುಂಜೆ ಶಾಲೆಗೆ “ಸೌರಶಕ್ತಿ’ ಬಲ
ಬ್ರಹ್ಮಾವರ ವಲಯದ ಹಾಲಾಡಿ ಸಮೀಪದ 110 ಮಕ್ಕಳಿರುವ ಕಕ್ಕುಂಜೆ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ 5.16 ಲಕ್ಷ ರೂ. ವೆಚ್ಚದಲ್ಲಿ ಸೋಲಾರ್‌ ಶಕ್ತಿಯನ್ನು ಅನುಷ್ಠಾನಗೊಳಿಸಲಾಗಿದೆ.

200 ಎಎಚ್‌ನ 8 ಬ್ಯಾಟರಿಗಳನ್ನು ಅಳವಡಿಸಲಾಗಿದ್ದು, 6 ಕೆ.ವಿ. ಸೌರಶಕ್ತಿ ಸೌಲಭ್ಯ ಸಿಗಲಿದೆ. ಇದರಿಂದ ಫ್ಯಾನ್‌, ಬೆಳಕಿನ ವ್ಯವಸ್ಥೆ, ಬಿಸಿಯೂಟ ತಯಾರಿಗೆ ಮಿಕ್ಸಿ ಬಳಕೆ, ಮೋಟಾರು ಪಂಪ್‌ ಬಳಕೆ, ಕಂಪ್ಯೂಟರ್‌ ಲ್ಯಾಬ್‌, ವಿಜ್ಞಾನ ಲ್ಯಾಬ್‌ಗಳಿಗೆ ಸೌರಶಕ್ತಿಯೇ ಬಳಕೆಯಾಗಲಿದೆ. ಇದರಿಂದ ಮಾಸಿಕವಾಗಿ ಬರುತ್ತಿದ್ದ 3 ಸಾವಿರ ರೂ. ವಿದ್ಯುತ್‌ ಬಿಲ್‌ ಉಳಿತಾಯವಾಗಲಿದೆ.

ಗ್ರಾಮೀಣ ಶಾಲೆಗಳೇ ಯಾಕೆ?
ಗ್ರಾಮಾಂತರ ಭಾಗದ ಬಹುತೇಕ ಕಡೆಗಳ ಸರಕಾರಿ ಶಾಲೆಗಳಲ್ಲಿ ಈಗ ವಿಜ್ಞಾನ ಹಾಗೂ ಕಂಪ್ಯೂಟರ್‌ ಲ್ಯಾಬ್‌ಗಳಿರುತ್ತವೆ. ಬಿಸಿಯೂಟ, ಮೋಟಾರು ಬಳಕೆಗೆ ವಿದ್ಯುತ್‌ ಆವಶ್ಯಕ. ಆದರೆ ಮಳೆಗಾಲದಲ್ಲಿ ವಿದ್ಯುತ್‌ ಕೈಕೊಡು ವುದೇ ಜಾಸ್ತಿಯಾಗಿದ್ದರಿಂದ ಸಮಸ್ಯೆ ಉದ್ಭವವಾಗುತ್ತಿತ್ತು. ಅದನ್ನು ಮನಗಂಡು ಸೆಲ್ಕೋ ಸಂಸ್ಥೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಲವು ಶಾಲೆಗಳನ್ನು ಆಯ್ಕೆ ಮಾಡಿಕೊಂಡು, ಅಲ್ಲಿ ಸೌರ ಶಕ್ತಿ ಅನುಷ್ಠಾನಕ್ಕೆ ಮುಂದಾಗಿದೆ. ಈಗಾಗಲೇ 2 ಶಾಲೆಗಳಲ್ಲಿ ಅನುಷ್ಠಾನ ಪೂರ್ಣ ಗೊಂಡಿದ್ದು, ಈ ತಿಂಗಳೊಳಗೆ ಇನ್ನು 2-3 ಶಾಲೆಗಳಲ್ಲಿ ಈ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈ ಶೈಕ್ಷಣಿಕ ವರ್ಷದೊಳಗೆ ಉಡುಪಿ ಜಿಲ್ಲೆಯ 25 ಶಾಲೆಗಳನ್ನು ಸೋಲಾರ್‌ ಸ್ವಾವಲಂಬಿ ಯಾಗಿಸುವ ಗುರಿಯಿದೆ ಎನ್ನುತ್ತಾರೆ ಸೆಲ್ಕೋ ಫೌಂಡೇಶನ್‌ನ ಪ್ರಾದೇಶಿಕ ವ್ಯವಸ್ಥಾಪಕ ಶೇಖರ್‌ ಶೆಟ್ಟಿ.

Advertisement

ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆ ಸಹಿತ ಉಡುಪಿ ಜಿಲ್ಲೆಯಲ್ಲಿ 1,098 ಹಾಗೂ ದ.ಕ. ಜಿಲ್ಲೆಯಲ್ಲಿ 1,782 ಶಾಲೆಗಳಿವೆ.

ಉಳಿದ ಶಾಲೆಗಳಿಗೂ ಉತ್ತೇಜನ
ಸೌರಶಕ್ತಿಯನ್ನು ಸದ್ಬಳಕೆಗೆ ಇದೊಂದು ಉತ್ತಮ ಕಾರ್ಯಕ್ರಮ ವಾಗಿದ್ದು, ಇದರಿಂದ ವಿದ್ಯುತ್‌ ಉಳಿತಾಯವಾಗಲಿದೆ. ಮುಖ್ಯವಾಗಿ ಗ್ರಾಮೀಣ ಭಾಗದ ಶಾಲೆಗಳಿಗೆ ಇದರಿಂದ ಬಹಳಷ್ಟು ಅನುಕೂಲವಾಗಲಿದೆ. 2 ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಜಿಲ್ಲೆಯ ಇನ್ನಷ್ಟು ಶಾಲೆಗಳಲ್ಲಿ ಸೋಲಾರ್‌ ಅಳವಡಿಕೆಗೆ ಉತ್ತೇಜನ ನೀಡಲಾಗುವುದು.
– ಕೆ. ಗಣಪತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನಿರ್ದೇಶಕ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next