Advertisement

ಔರಾದ್‌ನಲ್ಲಿ ಸೋಲಾರ್‌ ಪಾರ್ಕ್‌ಗೆ ಕೇಂದ್ರ ಅಸ್ತು

11:56 AM Sep 05, 2022 | Team Udayavani |

ಬೀದರ: ಎರಡು ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಔರಾದ ತಾಲೂಕಿನಲ್ಲಿ ಮನುಕುಲದ ಭವಿಷ್ಯವಾಗಿರುವ “ಸೋಲಾರ್‌ ಪಾರ್ಕ್‌’ ನಿರ್ಮಾಣವಾಗುವ ಮೂಲಕ ಝಗಮಗಿಸುವ ಕಾಲ ಸನ್ನಿಹಿತವಾಗಿದೆ. ಜಿಲ್ಲೆಯ ಬಹು ದಿನಗಳ ಬೇಡಿಕೆಯಾಗಿದ್ದ “ಸೋಲಾರ್‌ ಪಾರ್ಕ್‌’ ಸ್ಥಾಪನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದ್ದು, ಗಡಿ ನಾಡಿನಲ್ಲಿ ಜನ ಜೀವನ ಸುಧಾರಿಸುವ ಹೊಸ ಭರವಸೆ ಮೂಡಿದೆ.

Advertisement

ಕೇಂದ್ರದ ನೂತನ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಭಗವಂತ ಖೂಬಾ ಅವರು ತವರು ಕ್ಷೇತ್ರದಲ್ಲಿ ಸೋಲಾರ್‌ ಪಾರ್ಕ್‌ ನಿರ್ಮಾಣಕ್ಕೆ ತಮ್ಮ ಸಚಿವಾಲಯದಿಂದ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಔರಾದ ತಾಲೂಕಿನಲ್ಲಿ ಸುಮಾರು 3,500 ಎಕರೆ ಪ್ರದೇಶದಲ್ಲಿ ಸೌರ ಪಾರ್ಕ್‌ ಸ್ಥಾಪಿಸಿ, ಆ ಮೂಲಕ ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ.

500 ಗಿಗಾ ವ್ಯಾಟ್‌ ಗುರಿ:

ಸೋಲಾರ್‌ ಮೇಲೆಯೇ ಮುಂದಿನ ಭವಿಷ್ಯ ಅವಲಂಬಿತವಾಗಿದೆ. ಹಾಗಾಗಿ ಭಾರತದಲ್ಲಿ ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬ ನೆ ಯನ್ನು ಹೊಂದಿ, 2030ರವೆಗೆ 500 ಗಿಗಾ ವ್ಯಾಟ್‌ ವಿದ್ಯುತ್‌ ಶಕ್ತಿಯನ್ನು ಹಸಿರು ಇಂಧನ ಮೂಲಗಳಿಂದ ಉತ್ಪಾದಿಸುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಗುರಿಯಾಗಿದೆ. ರಾಜ್ಯದಲ್ಲಿ 30 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದ್ದು, ಈ ಪೈಕಿ ಶೇ.50ರಷ್ಟು ವಿದ್ಯುತ್‌ ಹಸಿರು ಇಂಧನ ಸೇರಿದೆ. 7500 ಮೆಗಾವ್ಯಾಟ್‌ ಸೋಲಾರ್‌ ಮೂಲಕ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದ್ದು, ಮುಂದಿನ 5 ವರ್ಷಗಳಲ್ಲಿ 17 ಸಾವಿರ ಮೆಗಾವ್ಯಾಟ್‌ ಹೆಚ್ಚಿಸಲು ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ ಸಚಿವಾಲಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಔರಾದನಲ್ಲಿ ಸ್ಥಾಪನೆಯಾಗುವ ಸೋಲಾರ್‌ ಪಾರ್ಕ್‌ ಸಹ ದೊಡ್ಡ ಕೊಡುಗೆ ನೀಡಬಲ್ಲದು.

ಖಾಸಗಿ ಸಹಭಾಗಿತ್ವದಲ್ಲಿ ಸುಮಾರು 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಬೀದರ, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸೋಲಾರ್‌ ಪಾರ್ಕ್‌ ನಿರ್ಮಾಣ ಕುರಿತಂತೆ ಈ ಹಿಂದೆ ಕೇಂದ್ರ ಸಚಿವ ಖೂಬಾ ಭರವಸೆ ನೀಡಿದ್ದರು. ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಅವರು ಸಹ ತವರು ಕ್ಷೇತ್ರದಲ್ಲಿ ಪಾರ್ಕ್‌ ನಿರ್ಮಾಣ ಸಂಬಂಧ ಸಾಕಷ್ಟು ಪ್ರಯತ್ನ ನಡೆಸಿದ್ದರು. ಅದರಂತೆ ಔರಾದ ತಾಲೂಕಿನಲ್ಲಿ ರೈತರ ಜಮೀನನ್ನು ಗುತ್ತಿಗೆ (ಲೀಜ್‌) ಪಡೆದು ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಗೊಳಿಸಲು ಸಚಿವಾಲಯ ಸಿದ್ಧತೆ ನಡೆಸಿದೆ.

Advertisement

ಸೋಲಾರ್‌ ಪಾರ್ಕ್‌ಗೆ 3,500 ಎಕರೆ ಜಮೀನು ಅವಶ್ಯಕತೆಯಿದ್ದು, ಔರಾದ ತಾಲೂಕಿನಲ್ಲಿ ಜಾಗ ಗುರುತಿಸುವಲ್ಲಿ ಜಿಲ್ಲಾಡಳಿತ ಕಾರ್ಯನಿರತವಾಗಿದೆ. ಉಸ್ತುವಾರಿ ಸಚಿವ ಮುನೇನಕೊಪ್ಪ ಮತ್ತು ಕ್ಷೇತ್ರದ ಶಾಸಕರಾದ ಪ್ರಭು ಚವ್ಹಾಣ ಅವರು ಸಹ ವಿಶೇಷ ಕಾಳಜಿ ವಹಿಸಿ, ರೈತರಿಗೆ ಭೂಮಿ ಗುತ್ತಿಗೆ ಪಡೆಯುವ ಕಾರ್ಯದಲ್ಲಿ ಪ್ರಯತ್ನಿಸಬೇಕಿದೆ. ಆ ಮೂಲಕ ಹಿಂದುಳಿದ ಗಡಿ ತಾಲೂಕಿನಲ್ಲಿ ಕೃಷಿಗೆ ಉತ್ತೇಜನ, ಉದ್ಯೋಗ ಮತ್ತು ಆರ್ಥಿಕ ಅಭಿವೃದ್ಧಿಗೆ ಸಾಧ್ಯತೆಗಳನ್ನು ಬಳಸಿಕೊಳ್ಳಬೇಕಿದೆ.

ರೈತರು ಸಹಕರಿಸಬೇಕು

ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿ ಸುವ ನಿಟ್ಟಿನಲ್ಲಿ ಔರಾದ ತಾಲೂಕಿನಲ್ಲಿ ಸೋಲಾರ್‌ ಪಾರ್ಕ್‌ ಸ್ಥಾಪನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಪಾರ್ಕ್‌ ಸ್ಥಾಪನೆ ಸಂಬಂಧ ರಾಜ್ಯ ಸರ್ಕಾರ ಸಹ ಸಚಿವಾಲಯದ ಜತೆಗೆ ನಿರಂತರ ಸಂಪರ್ಕದಲ್ಲಿದೆ. ರಾಜ್ಯದಿಂದ ಎಲ್ಲ ಸಹಕಾರ ನೀಡುವ ಭರವಸೆಯನ್ನು ಸಿಎಂ ಬೊಮ್ಮಾಯಿ ನೀಡಿದ್ದಾರೆ. ಸೋಲಾರ್‌ ಪಾರ್ಕ್‌ಗೆ 3,500 ಎಕರೆ ಭೂಮಿ ಅವಶ್ಯಕತೆ ಇದ್ದು, ರೈತರು ತಮ್ಮ ಜಮೀನನ್ನು ಸರ್ಕಾರಕ್ಕೆ ಗುತ್ತಿಗೆ (ಲೀಸ್‌) ನೀಡ ಬೇಕು ಎಂದು ಮನವಿ ಮಾಡುತ್ತೇನೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ದಾರೆ.

●ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next