Advertisement
ರೈತರು ಹತ್ತಾರು ಸಮಸ್ಯೆಗಳನ್ನು ಎದುರಿಸಿಕೊಂಡು ಕಷ್ಟಪಟ್ಟು ಬೆಳೆ ಬೆಳೆಯುತ್ತಾರೆ. ಅಲ್ಲಿಯ ತನಕದ ಸಮಸ್ಯೆಗಳದು ಒಂದು ಪಟ್ಟಿಯಾದರೆ. ಬೆಳೆ ಬಂದ ನಂತರ ಅದನ್ನು ಕಾಪಾಡಿಕೊಳ್ಳುವುದು ಮತ್ತೂಂದು ಸಾಹಸ. ಅನೇಕಾನೇಕ ಕೀಟಗಳು ಹುಟ್ಟಿಕೊಂಡು ಬೆಳೆಗಳೆಲ್ಲವೂ ಹೆಚ್ಚಾಗಿ ರೋಗಭಾದೆಗೆ ತುತ್ತಾಗಿ ನಾಶವಾಗುತ್ತಿವೆ. ಅದರ ನಿವಾರಣೆಗಾಗಿ ಕೀಟ ನಾಶಕಗಳ ಮೊರೆ ಹೋಗಿ ಅದಕ್ಕೊಂದಿಷ್ಟು ಖರ್ಚು ಮಾಡಬೇಕಾಗುತ್ತದೆ. ರಾಸಾಯನಿಕ ಕೀಟನಾಶಕಗಳ ಬಳಕೆಯಿಂದ ಆಹಾರ ವಿಷಪೂರಿತಗೊಳ್ಳುವುದಲ್ಲದೆ, ಕೃಷಿ ಭೂಮಿಯು ತನ್ನ ಸತ್ವವನ್ನು ಕಳೆದುಕೊಳ್ಳುವ ಅಪಾಯವೂ ಇರುತ್ತದೆ.
ಇದಕ್ಕೆಲ್ಲಾ ಪರಿಹಾರ ಒದಗಿಸುವ ಸಲುವಾಗಿ ಹೊಸದೊಂದು ಕೀಟನಾಶಕ ಉತ್ಪನ್ನವೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಅದುವೇ ಸೋಲಾರ್ ಕೀಟನಾಶಕ! ಇದನ್ನು SOLAR INSECTS TRAP ಎಂದೂ ಕರೆಯಬಹುದು.
ರಾಸಾಯನಿಕ ವಸ್ತುಗಳನ್ನು ಒಳಗೊಳ್ಳದೆ, ಕೇವಲ ಸೂರ್ಯನ ಬೆಳಕಿನ ಶಕ್ತಿಯನ್ನು ಬಳಸಿಕೊಂಡು ಈ ವ್ಯವಸ್ಥೆ ಕಾರ್ಯಾಚರಿಸುತ್ತದೆ. ಸಂಶೋಧನೆ, ಅಧ್ಯಯನಕ್ಕೆ ಒಳಪಟ್ಟಿರುವ ಈ ಯಂತ್ರವನ್ನು ಈಗಾಗಲೇ ಅನೇಕ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆಗೊಳಪಡಿಸಲಾಗಿದೆ. ಅಲ್ಲದೆ ಕೃಷಿ ವಿಜ್ಞಾನಿಗಳಿಂದಲೂ ಇದರ ಕಾರ್ಯಕ್ಷಮತೆಯನ್ನು ಖಾತರಿ ಪಡಿಸಿಕೊಳ್ಳಲಾಗಿದೆ. ರೈತರಿಗೆ ಕೈಗೆಟುಕುವ ದರವನ್ನು ನಿಗದಿಪಡಿಸಲಾಗಿದೆ. ಮನೆಗಳಲ್ಲಿ ಹುಳ ಹುಪ್ಪಟೆಗಳನ್ನು ಆಕರ್ಷಿಸುವ ಬಲ್ಬ್ ಉರಿಸುವುದನ್ನು ನೀವು ನೋಡಿರಬಹುದು. ಆ ಬಲ್ಬಿನ ಸುತ್ತಲೂ ವಿದ್ಯುತ್ ಹರಿಬಿಟ್ಟ ಕಂಬಿಗಳಿರುತ್ತವೆ. ಬೆಳಕಿಗೆ ಆಕರ್ಷಿತಗೊಳ್ಳುವ ಹುಳ ಹುಪ್ಪಟೆಗಳು ಈ ಕಂಬಿಗಳಿಗೆ ತಗುಲಿ ಮರಣವನ್ನಪುತ್ತವೆ. ಅದೇ ರೀತಿಯ ತಂತ್ರಜ್ಞಾನ ಈ ಸೋಲಾರ್ ಕೀಟನಾಶಕದ್ದು. ಇಲ್ಲಿ ಅಳವಡಿಸಲಾಗಿರುವ ಬಲ್ಬ್ ಸೂರ್ಯನ ಶಕ್ತಿಯಿಂದ ಚಾಲೂ ಆಗುತ್ತದೆ.
Related Articles
ಈ ಯಂತ್ರದಲ್ಲಿ ಕೀಟಗಳನ್ನು ಆಕರ್ಷಿಸುವಂಥ ವಿಶೇಷ ತಂತ್ರಜ್ಞಾನವನ್ನು ಒಳಗೊಂಡಂತಹ ಬೆಳಕು ಬಲ್ಬ್ಅನ್ನು ಅಭಿವೃದ್ಧಿಪಡಿಸಿದ್ದು , ಅದರಿಂದ ಹೊಮ್ಮುವ ಬೆಳಕಿಗೆ ಆಕರ್ಷಿತಗೊಳ್ಳುವ ಕೀಟಗಳು ಬಳಿ ಬಂದು ಕೆಳಗಿಟ್ಟಿರುವ ಬುಟ್ಟಿಯಲ್ಲಿನ ನೀರಿನನಲ್ಲಿ ಬಿದ್ದು ಸಾಯುವವು. ಬಲ್ಬ್ ತನ್ನಷ್ಟಕ್ಕೆ ತಾನೇ ಆನ್ ಆಗುತ್ತವೆ, ಮತ್ತು ತನ್ನಷ್ಟಕ್ಕೆ ತಾನೇ ಆಫ್ ಕೂಡಾ ಆಗುತ್ತದೆ. ಸಾಮಾನ್ಯವಾಗಿ ಸಂಜೆ 7ಕ್ಕೆ ಆನ್ ಆಗಿ ರಾತ್ರಿ 10ಕ್ಕೆ ಆಫ್ ಆಗುತ್ತದೆ.
Advertisement
– ಬೆಳೆಗಳ ಎತ್ತರಕ್ಕನುಗುಣವಾಗಿ 1.5 ಎಕರೆಯಿಂದ 2 ಎಕರೆ ವಿಸ್ತೀರ್ಣದ ತನಕದ ಕೀಟಗಳನ್ನು ಆಕರ್ಷಿಸಬಲ್ಲದು– ಹಣ್ಣು, ತರಕಾರಿ, ತೋಟಗಾರಿಕೆ, ಅರಣ್ಯ ಬೆಳೆಗಳಂಥವಕ್ಕೆಲ್ಲಾ ಇದನ್ನು ಬಳಸಬಹುದು
– ಸೈನಿಕ ಹುಳು, ರಸ ಹೀರುವ ಕೀಟ, ಕಾಯಿ ಕೊರಕ, ಕಾಂಡ ಕೊರಕ, ಬೇರು ಹುಳ, ಥ್ರಿಪ್ಸ್, ಎಲೆ ತಿನ್ನುವ ಕೀಟ, ಧ್ವಮರಿ, ಲೀಫ್ ಮೈನರ್ಸ್, ಮಾತ್, ಮುಂತಾದವನ್ನು ಬಲಿ ಪಡೆಯಬಲ್ಲುದು
-3ರಿಂದ 5 ವರ್ಷ ಯಂತ್ರದ ವಾರೆಂಟಿ ಉಪಯೋಗಗಳು
ಕೃಷಿ ಭೂಮಿಯ ಮಣ್ಣು ಮಲಿನಗೊಳ್ಳುವುದು ತಪ್ಪುತ್ತದೆ
ಆಹಾರ ಕಲುಷಿತಗೊಳ್ಳುವುದನ್ನು ತಡೆಗಟ್ಟಬಹುದು
ರೈತರಿಗೆ 80% ರಿಂದ 95% ವರೆಗೂ ರಾಸಾಯನಿಕ ಕೀಟನಾಶಕಗಳ ಖರ್ಚು ಉಳಿಯುವುದು ವಿ.ಸೂ- ಈ ವ್ಯವಸ್ಥೆ ಹಾರಾಡುವ ಕೀಟಗಳಿಗೆ ಮಾತ್ರ ರಾಮಬಾಣವಾಗಬಲ್ಲುದು. ಓಡಾಡುವ ಕೀಟಗಳು ನಾಶವಾಗುವುದಿಲ್ಲ, ಆದರೆ ಮುಖ್ಯವಾಗಿ ತಿಳಿಯಬೇಕಾಗಿರುವ ವಿಷಯವೇನೆಂದರೆ, ಓಡಾಡುವ ಕೀಟಗಳು ಜನಿಸುವುದು ಹಾರಾಡುವ ಕೀಟಗಳ ಮೊಟ್ಟೆಗಳಿಂದ! ಆದ್ದರಿಂದ ಪರೋಕ್ಷವಾಗಿ ಓಡಾಡುವ ಕೀಟಗಳ ನಿಯಂತ್ರಣವನ್ನು ಮಾಡುತ್ತದೆ ಎನ್ನಬಹುದು. -ನಾಗರಾಜ್