Advertisement

ಪೃಥ್ವಿಯ ನಿಗೂಢತೆಯ ಹುಡುಕಾಟದಲ್ಲಿ ಸೌರಭ 

06:00 AM Sep 07, 2018 | Team Udayavani |

ಪಂಚಭೂತಗಳೊಡಲಾಳವನ್ನು ಸೀಳಿದರೂ ರಹಸ್ಯವನ್ನು ಗರ್ಭದೊಳಗೆ ಹೂತ್ತಿಟ್ಟ ಭೂ ಮಾತೆ. ಪೃಥ್ವಿಯ ಪಂಚಭೂತಗಳ ವೃತ್ತಾಕಾರದ ನಡುವೆ ಶಿವನ ಆನಂದ ತಾಂಡವ, ಶಿವ ಸ್ವರೂಪದ ನಿಸರ್ಗದಲ್ಲಿ ಸಂತಸ ಹೇಗಿತ್ತು ಎನ್ನುವ ಅನುಭವ ಪ್ರೇಕ್ಷಕರಲ್ಲಿ ಭಾಸವಾಗುತ್ತಿತ್ತು. ಶಿವನ ಜಟೆಯಿಂದ ಹರಿದು ಬರುವಂತೆ ಪಂಚಭೂತಗಳ ಆಗಮನ. ಭಗವಂತನನ್ನು ಸೇರಲು ಹಲವಾರು ಭಕ್ತಿಮಾರ್ಗಗಳಿಂದ ಮೋಕ್ಷವನ್ನು ಪಡೆಯುವಂತೆ ವೇದಿಕೆಯಲ್ಲಿ ಪಂಚಭೂತಗಳ ಆಗಮನ ಕಣ್ಣಿಗೆ ಕಟ್ಟಿದಂತಿತ್ತು. ಪೃಥ್ವಿಯಲ್ಲಿ ಋಷಿ ಪರಂಪರೆ ಯೋಗ, ಸಂಗೀತ, ನೃತ್ಯ ಗುರುಕುಲ ಪದ್ಧತಿ ಹೇಗಿತ್ತು ಎಂಬುದು ಪೃಥ್ವಿಯಲ್ಲಿ ಮೂಡಿ ಬಂದಿದೆ. ಚರಕ ಸಂಹಿತೆಯ ಆರ್ಯುವೇದ ಗ್ರಂಥದ ರಚನೆಕಾರ ಚರಕ ಮಹರ್ಷಿ ಹಾಗೂ ನಾಟ್ಯಶಾಸ್ತ್ರದ ಪಿತಾಮಹಾ ಭರತಮುನಿಯನ್ನು ನೆನಪಿಸಿದ್ದು ಮಾತ್ರವಲ್ಲದೆ, ಪೃಥ್ವಿಯಲ್ಲಿ ಜನರ ಆರೋಗ್ಯವೆಲ್ಲ ಪಂಚಭೂತಗಳ ಚಿಪ್ಪಿನಲ್ಲಿ ಅಡಗಿದೆ. ಭೂಮಿ, ಆಕಾಶ, ನೀರು, ಗಾಳಿ, ಅಗ್ನಿ ಈ ಐದು ಪಂಚಭೂತಗಳು ಸಮತೋಲನದಲ್ಲಿದ್ದರೆ ಮಾತ್ರ ಮಾನವ ಆರೋಗ್ಯದಿಂದ ಇರಬಲ್ಲ, ಆಧುನಿಕ ಉಪಕರಣದಿಂದಲ್ಲ ಎನ್ನುವ ಸಂದೇಶವನ್ನು ರೂಪಕ ನೀಡಿದ್ದು ಶ್ಲಾಘನೀಯ. ಪರಿಶುದ್ಧ ನೀರು, ಪರಿಶುದ್ಧ ಗಾಳಿ, ಹವಾಮಾನ ಉಷ್ಣತೆ, ಕಲ್ಮಶ ರಹಿತ ಆಕಾಶ, ಮಾಲಿನ್ಯ ರಹಿತ ಭೂಮಿಯಲ್ಲಿ ನಮ್ಮ ಆರೋಗ್ಯ ಅಡಗಿದೆ ಎಂಬುದನ್ನು ಮತ್ತೂಮ್ಮೆ ನೆನಪಿಸಿದೆ. ಈ ಪೃಥ್ವಿ ಆರೋಗ್ಯ ಜೊತೆಗೆ ದೇಹದ ಮೈಕಟ್ಟು ಕೂಡ ಅಷ್ಟೆ ಅಗತ್ಯ ಎಂಬ ಅಂಶ ಭರತನ ನಾಟ್ಯ ಶಾಸ್ತ್ರದ ಮೂಲಕ ಪ್ರಯೋಗ ಕಂಡದ್ದು ಸ್ತುತ್ಯರ್ಹ. ಭಾರತ ಆರೋಗ್ಯ ಮತ್ತು ಮೈಕಟ್ಟಿಗಾಗಿ ಯೋಗ ಎಂಬ ಅಸ್ತ್ರವನ್ನು ಈ ಜಗತ್ತಿಗೆ ನೀಡಿದೆ. ವಿಜ್ಞಾನ ಕೂಡ ಯೋಗಕ್ಕೆ ತಲೆಬಾಗಿದೆ. ಪಂಚಭೂತ ಎಂದರೆ ಬೇರೆ ಏನೂ ಅಲ್ಲ, ನಮ್ಮ ಪರಿಸರ. ಈ ಪರಿಸರವನ್ನು ಮಾಲಿನ್ಯ ರಹಿತವನ್ನಾಗಿ ಮಾಡಿಕೊಂಡು, ಆರೋಗ್ಯಕ್ಕಾಗಿ ಯೋಗ ಎಂಬ ಸಂದೇಶವನ್ನು ಪೃಥ್ವಿ ಪ್ರಸ್ತುತ ಪಡಿಸಿದ್ದು ಅಭಿನಂದನಾರ್ಹ. ಆಧುನಿಕ ಬದುಕಿನ ಜಂಜಾಟದಲ್ಲಿ ಸಿಲುಕಿರುವ ಪೃಥ್ವಿ ಧೂಮಪಾನ, ಅತ್ಯಾಚಾರದಂತ ಪಾಪಕೃತ್ಯಗಳ ಕೂಪವಾಗಿ ಬದಲಾಗಿದ್ದು ನƒತ್ಯದಲ್ಲಿ ಪ್ರಸ್ತುತಗೊಂಡಿದೆ. ಶಬ್ದಮಾಲಿನ್ಯದಿಂದ ಭೂತಾಯಿ ಕೂಗು ಯಾರಿಗೂ ಕೇಳಿಸಲಾಗದಷ್ಟು ಕ್ಷೀಣವಾಗಿತ್ತು. 

Advertisement

ಚಲನವಲನದಲ್ಲಿ ಹೆಜ್ಜೆಗಾರಿಕೆಗೆ ಕೊಂಚ ಗಮನ ಹರಿಸಿದರೆ ಉತ್ತಮವಾಗಿ ಕಾಣುತ್ತಿತ್ತು. ಪೃಥ್ವಿ ಅಪಾಯದಲ್ಲಿದೆ, ಸಹನಾ ಮೂರ್ತಿಯಾದ ಮಾತೆ ಇನ್ನೂ ಮಗುವಿನಂತೆ ಎಚ್ಚರಿಸುವುದು ಕಂಡು ಬಂತು. ಅಗೆದು ಅಗೆದು ಬರಡಾಗಿ, ಅಳಿಸುತ್ತಿರುವ ಹಣೆಯ ಕುಂಕುಮ ನಾನುಳಿದರೆ ಮತ್ತೆ ನನ್ನ ಗರ್ಭದಲ್ಲಿ ನಿಮಗೆ ಜನ್ಮ ನೀಡಬಲ್ಲೆ, ಆದರೆ ಮೃತ್ಯುಕೂಪದಿಂದ ನಿಮ್ಮನ್ನು ಕಾಪಾಡುವವರಾರು ಎಂಬ ಪ್ರಶ್ನೆಗೆ ನಾವು ಉತ್ತರಿಸಬೇಕಾದ ಸಮಯ ಬಂದಿದೆ. ಆಗಲೇ ಪೃಥ್ವಿ ನೃತ್ಯ ರೂಪಕ ಸಾರ್ಥಕತೆಯನ್ನು ಕಾಣಲು ಸಾಧ್ಯ. ಡಾ| ಶ್ರೀವಿದ್ಯಾ ಮುರಳೀಧರ್‌ ಅವರ ಹೊಸ ಪ್ರಯತ್ನ, ಆಲೋಚನೆ, ಪ್ರಕೃತಿಯ ಕಾಳಜಿ ಪ್ರಶಂಸಾರ್ಹ. ವಿಶೇಷ ವಿನ್ಯಾಸದ ಆಕರ್ಷಕ ಉಡುಗೆ ತೊಡುಗೆಗಳು, ಶಾಸ್ತ್ರೀಯ ಚೌಕಟ್ಟಿನಲ್ಲಿನೊಳಗೆ ಸುಮಾರು ಮೂವತ್ತೆ$çದು ನೃತ್ಯ ವಿದ್ಯಾರ್ಥಿಗಳಿಂದ ಪೃಥ್ವಿ ನೃತ್ಯರೂಪಕವನ್ನು ಶ್ರೀವಿದ್ಯಾ ಮುರಳೀಧರ್‌ ಚಂದವಾಗಿ ನಿರ್ವಹಿಸಿದ್ದಾರೆ. ಡಾ| ಮೋಹನ ಕುಂಟಾರು ಇವರ ನಿರೂಪಣಾ ಸಾಹಿತ್ಯ, ರಾಮಚಂದ್ರ ರಾವ್‌ ಅವರ ಹಿನ್ನಲೆ ಧ್ವನಿಯಿಂದ ನೃತ್ಯರೂಪಕ ಮೂಡಿ ಬಂದಿದೆ. ಗಣ್ಯರಿಗೆ ಹಾಗೂ ನೃತ್ಯ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಬದಲು ಗಿಡಗಳನ್ನು ನೀಡುತ್ತಿದ್ದರೆ ಪೃಥ್ವಿಗೆ ಇನ್ನೂ ತೂಕ ಬರುತ್ತಿತ್ತು. 

ವಿ|ಪ್ರಮೋದ್‌ ಉಳ್ಳಾಲ್‌ 

Advertisement

Udayavani is now on Telegram. Click here to join our channel and stay updated with the latest news.

Next