ಹುಬ್ಬಳ್ಳಿ: ವಿದ್ಯುತ್ ಕೊರತೆ ನೀಗಿಸಲು ಸೌರಶಕ್ತಿ ಪರ್ಯಾಯ ವ್ಯವಸ್ಥೆಯಾಗಿದ್ದು, ಮುಂಬರುವ 25 ವರ್ಷಗಳಲ್ಲಿ ಇದರ ಬಳಕೆ ಐದಾರು ಪಟ್ಟು ಹೆಚ್ಚಾಗಲಿದೆ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ| ವಿಜಯ ಸಂಕೇಶ್ವರ ಹೇಳಿದರು.
ತಾರಿಹಾಳ ಕೈಗಾರಿಕಾ ವಸಾಹತುವಿನ ಎಕ್ಸೆಲ್ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಆರ್ಬ್ (ಒಆರ್‌ಬಿ) ಎನರ್ಜಿ ಸಂಸ್ಥೆ ಸ್ಥಾಪಿಸಿದ 100 ಕಿಲೋವ್ಯಾಟ್ ಸೌರಶಕ್ತಿ ಮೇಲ್ಛಾವಣಿ ವ್ಯವಸ್ಥೆ ಘಟಕವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
18 ವರ್ಷಗಳ ಹಿಂದೆ 1 ಮೆಗಾವ್ಯಾಟ್ ಸೌರಶಕ್ತಿ ಉತ್ಪಾದನೆ ಮಾಡಲು ಅಂದಾಜು 18 ಕೋಟಿ ರೂ. ವೆಚ್ಚವಾಗುತ್ತಿತ್ತು. ಅದನ್ನು ವಾಣಿಜ್ಯೋದ್ಯಮ ದೃಷ್ಟಿಯಿಂದ ಹೂಡಿಕೆ ಮಾಡುವ ಉದ್ದೇಶ ಹೊಂದಲಾಗಿತ್ತು. ಆದರೆ, ಕಾರಣಾಂತರಗಳಿಂದ ಸ್ಥಗಿತಗೊಳಿಸಲಾಯಿತು.
ಸದ್ಯ ವಿಆರ್‌ಎಲ್ ಸಂಸ್ಥೆಯ 82 ಶಾಖೆಗಳಲ್ಲಿ ಸೌರಶಕ್ತಿ ಉತ್ಪಾದಿಸಲಾಗುತ್ತಿದೆ. ಮುಂದಿನ 5-6 ವರ್ಷಗಳಲ್ಲಿ ಶೇ. 90ರಷ್ಟು ಸ್ವಂತಕ್ಕಾಗಿ ಬಳಕೆ ಮಾಡಿಕೊಳ್ಳಲಾಗುವುದು ಎಂದರು. ರಾಜ್ಯ ಸರಕಾರ ಸೌರಶಕ್ತಿ ಉತ್ಪಾದನೆಗೆ ಉತ್ತಮ ಸಹಕಾರ ನೀಡುತ್ತಿಲ್ಲ. ಸಮಯಕ್ಕೆ ಸರಿಯಾಗಿ ಹಣ ಪಾವತಿಸುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಆರ್ಬ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಪಿ. ರಮೇಶ ಮಾತನಾಡಿದರು. ಹಿರಿಯ ಪ್ರಧಾನ ವ್ಯವಸ್ಥಾಪಕ ಟಿ. ಸುಧೀಂದ್ರ, ಪ್ರಕಾಶ ಮಾಧವನ ಕುನ್ನೂರ, ಹೆಸ್ಕಾಂ ಅಧಿಕಾರಿಗಳಾದ ಜಗದೀಶ ಬೆಳಗಲಿ, ಅಬ್ದುಲ್ ರಹೀಂ ಸವಣೂರ ಇತರರಿದ್ದರು. ವಿಕಾಸ ಶಿಂಧೆ ಸ್ವಾಗತಿಸಿದರು. ಈಶ್ವರ ಮೆಡ್ಲೆರಿ ನಿರೂಪಿಸಿದರು.