Advertisement

ನಗರದಲ್ಲಿ ರಸ್ತೆ ಬದಿ ತ್ಯಾಜ್ಯ ಎಸೆಯುವವರ ಕಣ್ಗಾವಲಿಗೆ ಸೋಲಾರ್‌ ಸಿಸಿ ಕೆಮರಾ

08:10 PM Sep 01, 2021 | Team Udayavani |

ಮಹಾನಗರ: ನಗರದ ರಸ್ತೆ ಬದಿಯಲ್ಲಿ ಅಲ್ಲಲ್ಲಿ ಕಸ ಹಾಕುವ “ಬ್ಲ್ಯಾಕ್‌ಸ್ಪಾಟ್‌’ಗಳನ್ನು ನಿಯಂತ್ರಿಸಲು ನಗರದ ವಿವಿಧೆಡೆ ಸೋಲಾರ್‌ ಚಾಲಿತ ಸಿಸಿ ಕೆಮರಾಗಳನ್ನು ಅಳವಡಿಸಲು ಮಹಾನಗರ ಪಾಲಿಕೆ ಮುಂದಾಗಿದೆ.

Advertisement

ಮೊದಲ ಹಂತದಲ್ಲಿ ನಗರದ ಸುರತ್ಕಲ್‌, ನಂದಿಗುಡ್ಡೆ ಎರಡು ಕಡೆ, ಪಳ್ನೀರು, ಆಕಾಶಭವನ, ರಥಬೀದಿಯಲ್ಲಿ ಸೋಲಾರ್‌ ಕೆಮರಾವನ್ನು ಅಳವಡಿಸಿದೆ. ಈ ಸಿಸಿ ಕೆಮರಾಕ್ಕೆ ಸೋಲಾರ್‌ ವ್ಯವಸ್ಥೆ ಅಳವಡಿಸಿರುವ ಕಾರಣ ಯಾವುದೇ ರೀತಿಯ ಕೇಬಲ್‌ ಸಂಪರ್ಕ ಅಳವಡಿಸುವ ಆವಶ್ಯಕತೆ ಇರುವುದಿಲ್ಲ. ಇದೇ ಕಾರಣಕ್ಕೆ ಈ ಕೆಮರಾ ಕಂಬವನ್ನು ಒಂದು ಕಡೆಯಿಂದ ಮತ್ತೂಂದು ಕಡೆಗೆ ಸ್ಥಳಾಂತರ ಮಾಡಲೂ ಸಾಧ್ಯವಿದೆ. ಇದೇ ಕಾರಣಕ್ಕೆ ನಗರದಲ್ಲಿ ಯಾವ ಪ್ರದೇಶಕ್ಕೆ ಸಿಸಿ ಕೆಮರಾ ಅಗತ್ಯವಿದೆ ಎಂಬುವುದನ್ನು ತಿಳಿದು ಸ್ಥಳಾಂತರಿಸುವ ಕೆಲಸವೂ ನಡೆಯುತ್ತಿದೆ. ಇನ್ನು, ಅಪರಾಧ ಚಟುವಟಿಗೆ ನಿಯಂತ್ರಣಕ್ಕೂ ಈ ಕೆಮರಾ ಸಹಕಾರಿಯಾಗಲಿದೆ.

ಈಗಾಗಲೇ ಅಳವಡಿಸಿದ ಸೋಲಾರ್‌ ಸಿಸಿ ಕೆಮರಾದಲ್ಲಿ ಸೆರೆಯಾದ ವೀಡಿಯೋ ಫೂಟೇಜ್‌ ಮಹಾನಗರ ಪಾಲಿಕೆ ಕಟ್ಟಡದಲ್ಲಿರುವ ಕಮಾಂಡ್‌ ಕಂಟ್ರೋಲ್‌ ಸೆಂಟರ್‌ನಲ್ಲೂ ಸಂಗ್ರಹವಾಗುತ್ತದೆ. ಅಲ್ಲದೆ, ಆರೋಗ್ಯ ನಿರೀಕ್ಷಕರ ಮೊಬೈಲ್‌ಗ‌ಳಿಗೂ ಸಂಪರ್ಕ ಕಲ್ಪಿಸಲಾಗಿದ್ದು, ಮೊಬೈಲ್‌, ಕಂಪ್ಯೂಟರ್‌ ಮುಖೇನವೂ ವೀಕ್ಷಣೆಗೂ ಸಾಧ್ಯವಿದೆ.

ಪಾಲಿಕೆ ಅಧಿಕಾರಿ ಶಬರಿನಾಥ್‌ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಸೋಲಾರ್‌ ಸಿಸಿ ಕೆಮರಾವನ್ನು ಸಾರ್ವಜನಿಕರು ಕಸ ಎಸೆದು ಉಂಟಾಗುವ ಬ್ಲ್ಯಾಕ್‌ ಸ್ಪಾಟ್‌ಗಳಲ್ಲಿ ಅಳವಡಿಸಲಾಗಿದೆ. ಕೆಮರಾ ಅಳವಡಿಸಿದ ಬಳಿಕ ಈಗಾಗಲೇ ನಗರದ ಆಕಾಶಭವನ ಸಹಿತ ವಿವಿಧ ಕಡೆಗಳಲ್ಲಿ ರಸ್ತೆ ಬದಿ ಎಸೆಯುವುದು ಕಡಿಮೆಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು ಕಂಡುಬಂದರೆ ಅವರ ಮುಖ ಚಹರೆ ಮತ್ತು ವಾಹನಗಳಲ್ಲಿನ ನಂಬರ್‌ ಪ್ಲೇಟ್‌ ಕೂಡ ಕೆಮರಾದಲ್ಲಿ ಸೆರೆಯಾಗುತ್ತದೆ. ಅಂತಹವರ ವಿರುದ್ಧ ದೂರು ದಾಖಲಿಸಲು ಇದು ನೆರವಾಗುತ್ತದೆ’ ಎನ್ನುತ್ತಾರೆ.

ಏನಿದು ಸೋಲಾರ್‌  ಸಿ.ಸಿ. ಕೆಮರಾ? :

Advertisement

ಸೌರ ವಿದ್ಯುತ್‌ ಸಹಾಯದಿಂದ ಈ ಸಿಸಿ ಕೆಮರಾ ಕಾರ್ಯನಿರ್ವಹಿಸುತ್ತದೆ. ಸುಮಾರು 15 ಅಡಿ ಎತ್ತರದ ಕಂಬದಲ್ಲಿ ಸಿಸಿ ಕೆಮರಾ ಅಳವಡಿಸ ಲಾಗುತ್ತದೆ. ಸೋಲಾರ್‌ ಪ್ಯಾನಲ್‌ ಮುಖೇನ ಇದರಲ್ಲಿ ವಿದ್ಯುತ್‌ ಉತ್ಪಾದನೆಯಾಗುತ್ತದೆ. 4 ಜಿ ವೈಫೈ ರೂಟರ್‌ ಅಳವಡಿಸಲಾಗಿದ್ದು, ಅದಕ್ಕೆ ಮೊಬೈಲ್‌ ಸಿಮ್‌ ಜೋಡಿಸಲಾಗಿದೆ. ನಾಲ್ಕು ಮೆಗಾಫಿಕ್ಸೆಲ್‌ ಕೆಮರಾ, ನಾಲ್ಕು ಎಂ.ಎಂ. ಲೆನ್ಸ್‌ ಅಳವಡಿಸಲಾಗಿದೆ. 40 ವ್ಯಾಟ್‌ ಸೋಲಾರ್‌ ಪ್ಯಾನಲ್‌ಗೆ 40 ಎಎಚ್‌ ಬ್ಯಾಟರಿಯನ್ನು ಅಳವಡಿಸಲಾಗಿದೆ. 128 ಜಿ.ಬಿ. ಡಾಟಾ ಸಾಮರ್ಥ್ಯ ಹೊಂದಿದೆ. ಈ ಇಲ್ಲಿ ಸಂಗ್ರಹವಾಗುವ ವೀಡಿಯೋ ಫೂಟೇಜ್‌ಗಳನ್ನು ನೆಟ್‌ವರ್ಕ್‌ ಮುಖೇನ ಮೊಬೈಲ್‌, ಕಂಪ್ಯೂಟರ್‌ಗಳಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆ.

ಮಂಗಳೂರು ನಗರದ ಆರು ಕಡೆಗಳಲ್ಲಿ ಸೋಲಾರ್‌ ಸಿಸಿ ಕೆಮರಾವನ್ನು ಅಳವಡಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದು ಉಂಟಾಗುವ ಬ್ಲ್ಯಾಕ್‌ಸ್ಪಾಟ್‌ ಕಡಿಮೆ ಮಾಡುವುದು ಮುಖ್ಯ ಉದ್ದೇಶ. ಈ ಸಿಸಿ ಕೆಮರಾವನ್ನು ಒಂದು ಕಡೆಯಿಂದ ಮತ್ತೂಂದು ಕಡೆಗೆ ಸ್ಥಳಾಂತರ ಮಾಡಬಹುದಾಗಿದೆ. ವೈಫೈ ತಂತ್ರಜ್ಞಾನ ಇರುವದರಿಂದ ಆರೋಗ್ಯ ನಿರೀಕ್ಷಕರು ಅವರ ಮೊಬೈಲ್‌ನಲ್ಲಿ ವೀಡಿಯೋ ಫೂಟೇಜ್‌ ವೀಕ್ಷಿಸಬಹುದು. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ದೂರು ದಾಖಲಿಸಲು ಇದು ನೆರವಾಗುತ್ತದೆ. -ಪ್ರೇಮಾನಂದ ಶೆಟ್ಟಿ,ಮನಪಾ ಮೇಯರ್‌

 

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next