ಸೊಲ್ಲಾಪುರ: ಅಕ್ಕಲಕೋಟ ತಾಲೂಕಿನ ನಾಗಣಸೂರ ಗ್ರಾಮದ ಭಾಗದಲ್ಲಿ ಬುಧವಾರ ರಾತ್ರಿ ಬಿರುಗಾಳಿ ಸಹಿತ ಮಳೆ ಸುರಿದ ಪರಿಣಾಮ ಅಪಾರ ಪ್ರಮಾಣದ ದ್ರಾಕ್ಷಿ ಬೆಳೆ ನೆಲಕ್ಕುರುಳಿದ್ದು, ಲಕ್ಷಾಂತರ ರೂ. ಬೆಳೆ ಹಾನಿಯಾಗಿದೆ.
ಅಕ್ಕಲಕೋಟ ತಾಲೂಕಿನ ನಾಗಣಸೂರ ಗ್ರಾಮದ ಭಾಗದಲ್ಲಿ ಬುಧವಾರ ರಾತ್ರಿ ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆ ಸುರಿಯಿತು. ಆಕಸ್ಮಿಕವಾಗಿ ಸುರಿದ ಈ ಅಕಾಲಿಕ ಮಳೆಯಿಂದ ನಾಗಣಸೂರ ಭಾಗದ ಹೊಲ ಗದ್ದೆಗಳಲ್ಲಿದ್ದ ಜೋಳ, ದ್ರಾಕ್ಷಿ, ಗೋಧಿ ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಇದರಿಂದ ಲಕ್ಷಾಂತರ ರೂ. ಖರ್ಚು ಮಾಡಿ ದ್ರಾಕ್ಷಿ ಬೆಳೆದ ರೈತರಿಗೆ ಅಪಾರ ನಷ್ಟವಾಗಿದೆ.
ನಾಗಣಸೂರ ಗ್ರಾಮದ ಭಾಗದಲ್ಲಿ ಸುಮಾರು 300 ರಿಂದ 400 ಎಕರೆಯಲ್ಲಿ ದ್ರಾಕ್ಷಿ ಬೆಳೆಯಿದೆ. ಸುಮಾರು 60 ರಿಂದ 70 ರೈತರು ದ್ರಾಕ್ಷಿ ಬೆಳೆದಿದ್ದಾರೆ. ಇದರಲ್ಲಿ ಗ್ರಾಮದ ಗುಲಾಬ ಪ್ರಚಂಡೆ, ಧನರಾಜ ಧನಶೆಟ್ಟಿ, ಶಾಂತಪ್ಪ ಗಂಗೋಂಡಾ, ಶಿವಾನಂದ ಖೋನಾಪುರೆ, ಶಿವಾನಂದ ಕಲ್ಯಾಣ, ಪ್ರಕಾಶ ಕಲಶೆಟ್ಟಿ ಸೇರಿದಂತೆ ಸುಮಾರು 25ರಿಂದ 30 ರೈತರ ಗದ್ದೆಗಳಲ್ಲಿ ಬೆಳೆದಿದ್ದ ದ್ರಾಕ್ಷಿ ಬೆಳೆ ಸಂಪೂರ್ಣ ನೆಲಕ್ಕುರುಳಿವೆ.
ಅಕಾಲಿಕ ಮಳೆ, ಬಿರುಗಾಳಿಯಿಂದ 12 ಎಕರೆಯಲ್ಲಿ ಸುಮಾರು ಐದು ಎಕರೆ ದ್ರಾಕ್ಷಿ ಬೆಳೆ ಹಾನಿಯಾಗಿದೆ. ಅಲ್ಲದೇ ಎಕರೆಗೆ ನಾಲ್ಕು ಟನ್ ಒಣ ದ್ರಾಕ್ಷಿ ಬರುತಿತ್ತು. ಈಗ ಅದು ಕೂಡ ಹಾಳಾಗಿವೆ. ಈ ಕುರಿತು ಶಾಸಕರಿಗೆ ಮತ್ತು ತಹಶೀಲ್ದಾರ್‌ಗೆ ತಿಳಿಸಿದ್ದೇನೆ. ಸರಕಾರದಿಂದ ಬೆಳೆ ಹಾನಿ ಪರಿಹಾರ ಒದಗಿಸಬೇಕು.
ಬಸವರಾಜ ಖೇಡ,
ರೈತ, ನಾಗಣಸೂರ
ಅಕ್ಕಲಕೋಟ ತಾಲೂಕಿನ ನಾಗಣಸೂರ ಭಾಗದಲ್ಲಿ ಬುಧವಾರ ರಾತ್ರಿ ಅಕಾಲಿಕ ಮಳೆಯಿಂದ ದ್ರಾಕ್ಷಿ ಬೆಳೆ ಹಾನಿಯಾಗಿದೆ. ಈ ಕುರಿತು ತಹಶೀಲ್ದಾರ್‌ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಹೇಳಿದ್ದೇನೆ. ನಿಸರ್ಗದಿಂದ ರೈತರಿಗೆ ಹಾನಿಯಾಗಿದೆ. ಕೂಡಲೇ ಅವರಿಗೆ ಬೆಳೆ ಹಾನಿ ಪರಿಹಾರ ಒದಗಿಸುವಂತೆ ಸರಕಾರಕ್ಕೆ ಒತ್ತಾಯಿಸುತ್ತೇನೆ.
.
ಸಚಿನ್ ಕಲ್ಯಾಣಶೆಟ್ಟಿ,
ಶಾಸಕ, ಅಕ್ಕಲಕೋಟ