Advertisement
ಉಡುಪಿಯ ಕ್ಲೊನೆಕ್ ಆಟೋಮೇಶನ್ ಸಿಸ್ಟಮ್ಸ್ ಕಂಪನಿ ಕೃಷಿ ತಂತ್ರ ಬ್ರ್ಯಾಂಡ್‌ನಡಿ ಸಂಚಾರಿ ಮಣ್ಣು ಪರೀಕ್ಷೆ ಪ್ರಯೋಗಾಲಯ ರೂಪಿಸಿದೆ. ನೋಡುವುದಕ್ಕೆ ಸಣ್ಣ ಫ್ರಿಜ್‌ನಂತೆ ಕಾಣುವ ಈ ಯಂತ್ರ ಸ್ವಯಂಚಾಲಿತವಾಗಿ ಕಾರ್ಯನಿರ್ವಹಣೆಯೊಂದಿಗೆ ಕೆಲವೇ ನಿಮಿಷಗಳಲ್ಲಿ ಮಣ್ಣು ಪರೀಕ್ಷೆ ವರದಿ ನೀಡುತ್ತದೆ. ದ್ವಿಚಕ್ರ ವಾಹನದಲ್ಲಿಯೇ ಇದನ್ನು ಸಾಗಣೆ ಮಾಡಬಹುದಾಗಿದೆ.
Related Articles
Advertisement
30 ನಿಮಿಷದಲ್ಲೇ ಫಲಿತಾಂಶ: ಕೃಷಿ ತಂತ್ರ ಮಣ್ಣು ಪರೀಕ್ಷೆ ಯಂತ್ರದ ಸಹಾಯದಿಂದ ರೈತರು ಸುಲಭ ಹಾಗೂ ತ್ವರಿತವಾಗಿ ಮಣ್ಣು ಪರೀಕ್ಷೆ ಫಲಿತಾಂಶ ಪಡೆಯಬಹುದಾಗಿದೆ. ಸಣ್ಣ ಫ್ರಿಜ್ ಮಾದರಿಯಲ್ಲಿರುವ ಮಣ್ಣು ಪರೀಕ್ಷೆ ಯಂತ್ರ ರೊಬೊಟಿಕ್ ಮತ್ತು ಕಂಪ್ಯೂಟರ್ ಆಧಾರಿತವಾಗಿ ಕಾರ್ಯನಿರ್ವಹಿಸುತ್ತದೆ. ಮಣ್ಣು ಪರೀಕ್ಷೆಗೆ ಪ್ರಯೋಗಾಲಯದಲ್ಲಿ ತಜ್ಞರು ಮಣ್ಣಿಗೆ ಕೆಮಿಕಲ್ ಹಾಕಿ ಪ್ರಯೋಗಕ್ಕೆ ಮುಂದಾಗುತ್ತಾರೆ. ಆದರೆ, ಈ ಯಂತ್ರದಲ್ಲಿ ಕೇವಲ ಮಣ್ಣನ್ನು ನೀರಿನಲ್ಲಿ ಹಾಕಿ ಕಲಕಿಸಿ, ಆ ನೀರನ್ನು ಯಂತ್ರದೊಳಗೆ ಹಾಕಿದರೆ ಸಾಕು ತನ್ನಿಂದ ತಾನೇ ಪರೀಕ್ಷೆ ಕೈಗೊಂಡು 25-30 ನಿಮಿಷದಲ್ಲಿ ಮಣ್ಣಿನಲ್ಲಿರುವ ಪೋಷಕಾಂಶ, ಖನಿಜ, ತೇವಾಂಶ, ಬೆಳೆ ಮಾದರಿ ಇನ್ನಿತರ ಮಾಹಿತಿಯನ್ನು ನೀಡುತ್ತದೆ. 14 ಕೆಜಿ ತೂಕವಿರುವ ಈ ಯಂತ್ರ ಸೌರವಿದ್ಯುತ್ ಶಕ್ತಿಯಿಂದ ಕಾರ್ಯನಿರ್ವಹಿಸುತ್ತಿದ್ದು, 12 ವೋಲ್ಟ್ ಬ್ಯಾಟರಿಯನ್ನು ಹೊಂದಿದೆ. ಒಂದು ಮಣ್ಣಿನ ಪರೀಕ್ಷೆ ಮಾಡಿದ ನಂತರ 45 ನಿಮಿಷ ಮತ್ತೂಂದು ಪರೀಕ್ಷೆ ಮಾಡುವಂತಿಲ್ಲ. ದಿನಕ್ಕೆ 6 ಪರೀಕ್ಷೆಗಳನ್ನು ಮಾಡಬಹುದಾಗಿದೆ.
ಆರು ಭಾಷೆಗಳಲ್ಲಿ ಸಂದೇಶ : ಮಣ್ಣು ಪರೀಕ್ಷೆ ಯಂತ್ರಕ್ಕೆ ಕಂಪ್ಯೂಟರ್ ಇಲ್ಲವೇ ಲ್ಯಾಪ್‌ಟಾಪ್ ಅಗತ್ಯವಿದೆ. ಮಣ್ಣು ಪರೀಕ್ಷೆಗೆ ಬರುವ ರೈತರ ಹೆಸರು, ವಿಳಾಸ, ಊರು, ಮೊಬೈಲ್ ಸಂಖ್ಯೆ ಇತ್ಯಾದಿ ಮಾಹಿತಿ ಸಂಗ್ರಹಿಸಲಾಗುತ್ತದೆ. ಪರೀಕ್ಷೆ ಕೈಗೊಂಡ ನಂತರ 25-30 ನಿಮಿಷದಲ್ಲಿ ಸಂಬಂಧಿಸಿದ ರೈತನ ಮೊಬೈಲ್‌ಗೆ ವರದಿ ಸಂದೇಶ ರವಾನೆಯಾಗುತ್ತದೆ. ಇಂಗ್ಲೀಷ್ ಅಲ್ಲದೆ ಐದು ಪ್ರಾದೇಶಿಕ ಭಾಷೆಗಳಲ್ಲಿ ಸಂದೇಶ ರವಾನೆಯಾಗುತ್ತದೆ. ಕನ್ನಡ, ತೆಲುಗು, ತಮಿಳು, ಬಂಗಾಳಿ, ಮರಾಠಿ ಭಾಷೆಗಳಲ್ಲಿ ಇದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಾದೇಶಿಕ ಭಾಷೆಗಳನ್ನು ಇದಕ್ಕೆ ಅಳವಡಿಸಲಾಗುತ್ತಿದೆ.
ಯಂತ್ರದ ದರ 65 ಸಾವಿರ ರೂ. : ಈ ಯಂತ್ರ ಪ್ರಸ್ತುತ 45 ಸಾವಿರ ರೂ. ಯಂತ್ರದ ದರ ಇದ್ದು, ಒಂದು ಕಾಟ್ರೇಜ್‌ಗೆ 20 ಸಾವಿರ ರೂ. ಸೇರಿ ಒಟ್ಟು 65 ಸಾವಿರ ರೂ.ನಲ್ಲಿ ದೊರೆಯಲಿದೆ. ಗ್ರಾಮೀಣ ಪ್ರದೇಶದ ರೈತ ಉತ್ಪಾದಕ ಕಂಪನಿಗಳಿಗೆ ಯಂತ್ರ ನೀಡಲಾಗುತ್ತದೆ. ವೈಯಕ್ತಿಕವಾಗಿ ರೈತರು ಖರೀದಿ ಮಾಡಿದರೆ ಪ್ರಯೋಜನವಾಗದು. ರೈತ ಉತ್ಪಾದಕ ಕಂಪನಿ, ಎನ್‌ಜಿಒಗಳು ಇದನ್ನು ಖರೀದಿಸಿದರೆ ಒಬ್ಬರಿಗೆ ಉದ್ಯೋಗ ನೀಡಬಹುದು. ರೈತರ ಹೊಲಗಳ ಮಣ್ಣು ಪರೀಕ್ಷೆಯನ್ನು ಸಕಾಲಿಕ ಹಾಗೂ ಸುಲಭ ರೀತಿಯಲ್ಲಿ ಕೈಗೊಂಡು ತಕ್ಷಣಕ್ಕೆ ಫಲಿತಾಂಶ ನೀಡಬಹುದು ಎಂಬುದು ಕಂಪನಿಯವರ ಅಭಿಪ್ರಾಯ. ಯಂತ್ರದ ನಿರ್ವಹಣೆ ಸುಲಭವಾಗಿದ್ದು, ಇದರ ನಿರ್ವಹಣೆ ಮಾಡುವ ಸಿಬ್ಬಂದಿಗೆ ಒಂದು ದಿನದಲ್ಲಿಯೇ ತರಬೇತಿ ನೀಡಲಾಗುತ್ತದೆ. ಒಂದು ಮಣ್ಣು ಪರೀಕ್ಷೆಗೆ 200ರಿಂದ 600 ರೂ.ವರೆಗೆ ಶುಲ್ಕ ವಿಧಿಸಬಹುದಾಗಿದೆ. ನ್ಯೂಟ್ರಿಶನ್ ಸೇರಿದಂತೆ ಪೂರ್ಣ ಪ್ರಮಾಣದ ಪರೀಕ್ಷೆಗೆ ಕೈಗೊಳ್ಳಬೇಕಾದರೆ 600 ರೂ. ಶುಲ್ಕ ಆಗಲಿದೆ. ಇದೇ ಪರೀಕ್ಷೆಯನ್ನು ಖಾಸಗಿಯಾಗಿ ಕೈಗೊಂಡರೆ 1,500ರಿಂದ 2,000 ರೂ.ವರೆಗೆ ಶುಲ್ಕ ಪಡೆಯಲಾಗುತ್ತದೆ ಎಂಬುದು ಕಂಪನಿಯ ಸಹ ಸಂಸ್ಥಾಪಕ ಆನಂದ ಬೆಳ್ಳನ್ ರಾಮನ್ ಅನಿಸಿಕೆ.
ಮಣ್ಣು ಪರೀಕ್ಷೆ ಯಂತ್ರವನ್ನು 1000 ಕಡೆಯ ಮಣ್ಣುಗಳನ್ನು ಪಡೆದು ಪ್ರಯೋಗ ಕೈಗೊಳ್ಳಲಾಗಿದ್ದು, ಉತ್ತಮ ಹಾಗೂ ವಿಶ್ವಾಸಾರ್ಹ ಫಲಿತಾಂಶ ಬಂದಿದೆ. ಮಣ್ಣು ಪರೀಕ್ಷೆಯನ್ನು ಸಂಪೂರ್ಣವಾಗಿ ಯಾಂತ್ರೀಕರಣಗೊಳಿಸಲಾಗಿದ್ದು, ಯಾವುದೇ ತಜ್ಞರ ಅಗತ್ಯವೂ ಇಲ್ಲ. ಒಂದಿಷ್ಟು ಮಾಹಿತಿ ತಿಳಿದಿರುವ ವ್ಯಕ್ತಿ ಇದ್ದರೆ ಸಾಕು, ಇದನ್ನು ನಿರ್ವಹಿಸಬಹುದು. ಮಣ್ಣು ಪರೀಕ್ಷೆಯಿಂದ ರಸಗೊಬ್ಬರ ಸಮತೋಲಿತ ನೀಡಿಕೆಗೆ ಪೂರಕವಾಗಲಿದೆ. 5 ಕಾಟ್ರೇಜ್‌ಗಳನ್ನು ಏಕಕಾಲಕ್ಕೆ ಖರೀದಿಸಿದರೆ ಯಂತ್ರವನ್ನು ಉಚಿತವಾಗಿ ನೀಡಲಾಗುವುದು. ಸುಲಭ ನಿರ್ವಹಣೆ ಯಂತ್ರ ಇದಾಗಿದ್ದು, 4 ವರ್ಷ ವಾರೆಂಟಿ ಹೊಂದಿದೆ. ಪ್ರಸ್ತುತ 14 ಕೆಜಿ ಭಾರದ ಯಂತ್ರವನ್ನು ಕೇವಲ 4-5 ಕೆಜಿಗೆ ಇಳಿಸಲು ಪ್ರಯೋಗ ನಡೆಯುತ್ತಿದೆ. –ಸಂದೀಪ ಕೊಂಡಾಜಿ, ಕೃಷಿತಂತ್ರ ಸಂಸ್ಥಾಪಕ ಮತ್ತು ಸಿಇಒ
-ಅಮರೇಗೌಡ ಗೋನವಾರ