ಹುಮನಾಬಾದ: ಮನುಷ್ಯ ಆನಾರೋಗ್ಯ ಉಂಟಾದಾಗ ಹೇಗೆ ರಕ್ತಪರೀಕ್ಷೆ ಮಾಡಿಸುತ್ತಾನೋ ಅದೇ ರೀತಿ ಪ್ರತಿ ವರ್ಷ ಬಿತ್ತನೆ ಮಾಡುವ ಮೊದಲು ಹೊಲದಲ್ಲಿನ ಮಣ್ಣು ಪರೀಕ್ಷೆ ಮಾಡಿಸುವುದನ್ನು ರೈತರು ಮರೆಯಬಾರದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಪಟ್ಟಣ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಅಪೇಡಾ ನವದೆಹಲಿ ಹಾಗೂ ಕೆಪೆಕ್ ಸಂಸ್ಥೆ ಬೆಂಗಳೂರು ವತಿಯಿಂದ ನಿರ್ಮಿಸಿದ ಸಮಗ್ರ ಶೀತಲ ಸರಪಳಿ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಬಹುತೇಕ ಜನರು ಗುಣಮಟ್ಟದ ಆಹಾರ ದೊರೆಯದೆ ಆಸ್ಪತ್ರೆಗೆ ಹಣ ಖರ್ಚು ಮಾಡುತ್ತಿದ್ದಾರೆ. ರೈತರು ಬಿತ್ತನೆ ಸಂದರ್ಭದಲ್ಲಿ ಹೊಲದಲ್ಲಿನ ಮಣ್ಣಿನ ಪರೀಕ್ಷೆ ನಡೆಸುವ ಮೂಲಕ ಮಣ್ಣಿನಲ್ಲಿನ ಕೊರತೆ ಪತ್ತೆ ಹಚ್ಚಿ, ನಿಗದಿತ ಔಷಧಗಳು ಬಳಸಬೇಕು. ಅನಾವಶ್ಯಕ ರಾಸಾಯನಿಕಗಳು ಬಳಸುವುದರಿಂದ ಮಣ್ಣು ಹಾಗೂ ಫಸಲು ಕೂಡ ರಾಸಾಯನಿಕವಾಗಿ ಬಿಡುತ್ತದೆ. ಅಲ್ಲದೆ, ಕೋಲಾರ ಜಿಲ್ಲೆಯ ಮಾದರಿಯಲ್ಲಿ ಬೀದರ ಜಿಲ್ಲೆಯ ಕೂಡ ಬಹು ಬೆಳೆಗಳು ಬೆಳೆಸುವ ಪದ್ಧತಿ ಕಂಡು ಬಂದಿದೆ. 52 ಬೆಳೆಗಳು ಇಲ್ಲಿ ಬೆಳೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೈತರು ಬದಲಾಗಬೇಕು. ಹೊಸ ನೀತಿಗಳು ಅನುಸರಿಸಬೇಕು. ಬಹು ಬೆಳೆಗಳು ಬೆಳೆಸುವ ಕಡೆ ನಿಗಾ ವಹಿಸಬೇಕು. ಒಂದು ಬೆಳೆ ಹಾನಿ ಸಂಭವಿಸಿದ್ದರೆ ಇನ್ನೊಂದು ಬೆಳೆ ಲಾಭ ನೀಡುತ್ತದೆ ಎಂಬುವುದು ತಿಳಿದುಕೊಳ್ಳಬೇಕು ಎಂದರು. ಇದಕ್ಕೂ ಮೊದಲು ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ಬೀದರ ಜಿಲ್ಲೆ ಮಳೆ ಆಶ್ರಿತ ಪ್ರದೇಶವಾಗಿದ್ದು, ಇಲ್ಲಿನ ಕಾರಂಜಾ ಡ್ಯಾಂ ಕುಡಿಯುವ ನೀರಿಗೆ ಮಾತ್ರ ಬಳಕೆಯಾಗುತ್ತಿದ್ದು, ಜಿಲ್ಲೆಯಲ್ಲಿ ಹನಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಬೇಕು.
ಕಬ್ಬು ಬೆಳೆಗಾರರಿಗೆ 2400 ರೂ. ನೀಡುವಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿದ್ದು, ಇಂದಿಗೂ ಯಾವ ಕಾರ್ಖಾನೆಗಳು ರೈತರಿಗೆ ನಿಗದಿತ ಹಣ ಪಾವತಿ ಮಾಡುತ್ತಿಲ್ಲ ಎಂದು ದೂರಿದರು.
ನಮ್ಮ ಸರ್ಕಾರ ಅವಧಿಯಲ್ಲಿ ಬಿಎಸ್‌ಎಸ್‌ಕೆ ಬಂದ್ ಆಗದೆ ರೀತಿ ನೋಡಿಕೊಂಡಿದ್ದೇವೆ. ಬೇಕಾದ ಅನುದಾನ ತಂದು ಕಾರ್ಖಾನೆ ನಡೆಸಿದ್ದು, ಇದೀಗ ಪ್ರಭು ಚವ್ಹಾಣ ಸಚಿವರಾದ ನಂತರ ಕಾರ್ಖಾನೆ ಬಂದ್ ಆಗಿದೆ. ಚುನಾವಣೆ ಸಂದರ್ಭದಲ್ಲಿ ಮುಖ್ಯಂತ್ರಿಗಳು ಕೂಡ ನೂರು ಕೋಟಿ ಅನುದಾನ ನೀಡುವ ಭರವಸೆ ಈಡೇರಿಸಬೇಕು. ತಾಲೂಕಿನಲ್ಲಿ 37 ಕೋಟಿ ಮಳೆಹಾನಿ ಹಾನಿ ಸಂಭವಿಸಿದ್ದು, ಕೇವಲ 7 ಕೋಟಿ ಅನುದಾನ ಬಂದಿದೆ. 30 ಕೋಟಿ ಬಾಕಿ ಇರುವ ಅನುದಾನ ಕೂಡಲೇ ರೈತರಿಗೆ ನೀಡಬೇಕು ಎಂದು ಇತರೆ ರೈತರ ಬೇಡಿಕೆಗಳು ಈಡೇರಿಸುವಂತೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ, ಜಿಪಂ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ, ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ್
ಪಾಟೀಲ, ಬಿಜೆಪಿ ಹಿರಿಯ ಮುಖಂಡ ಸುಭಾಷ ಕಲ್ಲೂರ್, ಜಿಪಂ ಸದಸ್ಯ ಗುಡುರೆಡಿ, ವಿಶ್ವನಾಥ ಪಾಟೀಲ, ಚೈತ್ರಾಂಜಲಿ ಮೋಳಕೇರಾ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಡಾ| ಪಿ.ಎಂ. ಮಲ್ಲಿಕಾರ್ಜುನ ಸೇರಿದಂತೆ ಅನೇಕ ಮುಖಂಡರು ಇದ್ದರು.