ತೀರ್ಥಹಳ್ಳಿ: ತಾಲ್ಲೂಕು ವ್ಯಾಪ್ತಿಯಲ್ಲಿ ಕಲ್ಲು, ಮರಳು,ಅಕ್ರಮ ಸಾಗಾಟ ಜೋರಾಗಿ ನಡೆಯುತ್ತಿದೆ.
ಇದೀಗ ಭೂಗರ್ಭ ತೋಡಿ ಮಣ್ಣು ಮಾಫಿಯಾಕ್ಕೆ ಲಗ್ಗೆ ಇಟ್ಟಿರುವ ಅಕ್ರಮಕೋರರು ತಾಲ್ಲೂಕಿನಾದ್ಯಂತ ಕಂದಾಯ ಅರಣ್ಯ ಭೂಮಿ ಜಾಗ ಕಂಡಕಂಡಲ್ಲಿ ಮಣ್ಣು ತೆಗೆದು ಯಾವುದೇ ಪರವಾನಿಗೆ ಇಲ್ಲದೆ ರಾಜಾರೋಷವಾಗಿ ಅಕ್ರಮ ಲೇಔಟ್ ಗೆ ಲಾರಿಗಳಲ್ಲಿ ತಂದು ರಾಷ್ಟ್ರೀಯ ಹೆದ್ದಾರಿ 169ಎ ರಸ್ತೆ ಬದಿಗಳಲ್ಲಿ ಸುರಿದು ಅಕ್ರಮವಾಗಿ ಲೇಔಟ್ ನಿರ್ಮಾಣ ಮಾಡುತ್ತಿದ್ದರೂ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು ಕಣ್ಣು ಕಾಣದಂತೆ ವರ್ತಿಸುತ್ತಿದ್ದಾರೆ.
ಕುಶಾವತಿ ಭಾಗದಲ್ಲಿ ವೀಕೆಂಡ್ ಕರ್ಫ್ಯೂ ವೇಳೆ ತುಂಗಾ ನದಿ ದಡದಲ್ಲಿ ಲೇಔಟ್ ನಿರ್ಮಾಣ ಮಾಡುವವರು ಯಾವುದೇ ಪರವಾನಗಿ ಪಡೆಯದೇ ಅಕ್ರಮವಾಗಿ ಮಣ್ಣನ್ನು ತಂದು ನದಿ ದಡ ಪಾತ್ರಕ್ಕೆ ಸುರಿಯುತ್ತಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ತಾಲ್ಲೂಕು ಆಡಳಿತದ ಅಧಿಕಾರಿಗಳು ತಡೆದು ಕ್ರಮ ಕೈಗೊಂಡಿದ್ದಾರೆ.
ತಾಲ್ಲೂಕಿನಲ್ಲಿ ಇತ್ತೀಚೆಗೆ ಇದೇ ರೀತಿ ಕಾನೂನು ಬಾಹಿರ ಮಣ್ಣುಗಳನ್ನು ತೆಗೆದು ಅಕ್ರಮ ಲೇಔಟ್ ನಿರ್ಮಾಣ ಮಾಡುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾನೂನು ನಿಯಮ ಮೀರಿ ಯಂತ್ರಗಳನ್ನು ಬಳಸಿ ತೆಗೆಯುವುದು ಸಾವಿರಾರು ಲೋಡ್ ಮಣ್ಣು ತಂದು ಲೇಔಟ್ ನಿರ್ಮಾಣ ಮಾಡುತ್ತಿದ್ದು ಈ ಬಗ್ಗೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಭೂ ವಿಜ್ಞಾನ ಅಧಿಕಾರಿಗಳ ಗಮನಕ್ಕೆ ಬಂದರೂ ಮಣ್ಣು ಸವಕಳಿಯಾಗದಂತೆ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿರುವುದು ನೋಡಿದರೆ ಪರೋಕ್ಷವಾಗಿ ಈ ಮಣ್ಣು ಮಾಫಿಯಾದವರ ಜೊತೆ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಸಚಿವರ ಕ್ಷೇತ್ರದಲ್ಲಿ ಈ ರೀತಿ ಮಣ್ಣು ಮಾಫಿಯಾ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಪಟ್ಟಣದ ಜನರ ಮಾತಾಗಿದೆ.