ಬೆಳ್ತಂಗಡಿ: ಚಾರ್ಮಾಡಿ ರಾಷ್ಟೀಯ ಹೆದ್ದಾರಿ 73ರಲ್ಲಿ ಗುಡ್ಡ ಕುಸಿತಗೊಂಡಿರುವ ಸ್ಥಳದಲ್ಲಿ ಜಿಸಿಬಿ ಸಹಾಯದಿಂದ ಮಣ್ಣು ತೆರವು ಕಾರ್ಯ ಭರದಿಂದ ಸಾಗುತ್ತಿದೆ. 5 ಜಿಸಿಬಿಗಳು ನಿನ್ನೆಯಿಂದ ಸತತ ಕಾರ್ಯಾಚರಣೆಯಲ್ಲಿ ತೊಡಗಿದ್ದು ಕೆಲವೆಡೆ ಮತ್ತಷ್ಟು ಆತಂಕದ ಛಾಯೆ ಮನೆ ಮಾಡಿದೆ.
ಗುರುವಾರ ರಾತ್ರಿ 12 ಗಂಟೆವರೆಗೆ ವಾಹನ ಸಂಚಾರ ತಡೆಯೊಡ್ಡುವಂತೆ ಜಿಲ್ಲಾಧಿಕಾರಿ ಬುಧವಾರ ಆದೇಶ ಹೊರಡಿಸಿದ್ದರಿಂದ ಯಾವುದೇ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. 1ನೇ ತಿರುವಿನಿಂದ ಅಣ್ಣಪ್ಪ ಬೆಟ್ಟವರೆಗೆ 20 ಕ್ಕೂ ಹೆಚ್ಚುಕಡೆ ಸಣ್ಣ ಪ್ರಮಾಣದಲ್ಲಿ ಭೂಕುಸಿತವಾಗಿದೆ. 2, 7, 8 ತಿರುವು ಮಧ್ಯೆ 5ಕಡೆ ಗುಡ್ಡೆ ಕುಸಿತವಾಗಿದ್ದು ತೆರವು ಕಾರ್ಯಾಚರಣೆ ಸಾಗಿದೆ.
ಅಣ್ಣಪ್ಪ ಬೆಟ್ಟದಿಂದ ಮೇಲ್ಭಾಗ ಹೊರಟ್ಡಿ ತೆರಳುವ ರಸ್ತೆಯಲ್ಲಿ ಮತ್ತೆ ಮತ್ತೆ ಭೂಕುಸಿತವಾಗುತ್ತಿದ್ದು ನಿನ್ನೆ ರಾತ್ರಿ 3 ಕಡೆಗಳಲ್ಲಿ ಮಣ್ಣಿನ ಸವಕಳಿ ಉಂಟಾಗಿದೆ. ರಸ್ತೆಗೆ ಉರುಳಿದ ಮರಗಳಲ್ಲದೆ ಗಾಳಿಯ ರಭಸಕ್ಕೆ ಸುಮಾರು 25 ಕ್ಕು ಹೆಚ್ಚು ಮರಗಳ ಗೆಲ್ಲು ತುಂಡರಿಸಿ ಬಿದ್ದ ದೃಶ್ಯ ಗಾಳಿಯ ಭೀಕರತೆಯನ್ನು ಚಿತ್ರಿಸುವಂತಿದೆ.
ಚರಂಡಿ ಕಟ್ಟಿರುವುದರಿಂದ ರಸ್ತೆಯಲ್ಲೆ ನೀರು ಹರಿಯುತ್ತಿರುವ ದೃಶ್ಯ ಕಂಡುಬರುತ್ತಿದ್ದು ಸಂಚಾರ ಮುಕ್ತಕ್ಕೆ ಇನ್ನು ಎರಡು ದಿನಗಳು ಬೇಕಾಗುವ ಸಾಧ್ಯತೆ ಇದೆ. ಆಂಬುಲೆನ್ಸ್ ಮತ್ತು ಪೊಲೀಸ್ ವಾಹನ ಘಾಟಿಯುದ್ದಕ್ಕೂ ಗಸ್ತು ತಿರುಗುತ್ತಿದೆ.ಇಂದು ಸಂಜೆಯೊಳಗೆ ಸಂಪೂರ್ಣ ಮಣ್ಣು ತೆರವಾದಲ್ಲಿ ತೆರವು ನಾಳೆಯಿಂದ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.
ವಿದ್ಯುತ್ ವ್ಯತ್ಯಯದಿಂದ ಕೊಟ್ಟಿಗೆ ಹಾರದಲ್ಲಿ ವಾರಗಳಿಂದ ನೆಟವರ್ಕ್ ಇಲ್ಲದೆ ಜನಸಾಮಾನ್ಯರು ಪರದಾಡುತ್ತಿದ್ದಾರೆ.