ಹೊಸದಿಲ್ಲಿ: 2005 ರಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ಶಂಕಿತ ಉಗ್ರ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದ ಎಲ್ಲಾ 22 ಆರೋಪಿಗಳನ್ನು ನಿರ್ದೋಷಿಗಳು ಎಂದು ವಿಶೇಷ ಸಿಬಿಐ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
ಅಪಹರಣ ಮತ್ತು ಹತ್ಯೆಯ ಕುರಿತು ದಾಖಲೆಗಳು ಮತ್ತು ಸೂಕ್ತ ಸಾಕ್ಷಾಧಾರಗಳ ಕೊರತೆ ಹಿನ್ನಲೆಯಲ್ಲಿ ಆರೋಪಿಗಳನ್ನು ನಿರ್ದೋಷಿಗಳು ಎಂದು ವಿಶೇಷ ಕೋರ್ಟ್ ನ ನ್ಯಾಯಾಧೀಶ ಎಸ್.ಜೆ.ಶರ್ಮ ತೀರ್ಪು ನೀಡಿದ್ದಾರೆ.
ನಿರ್ದೋಷಿಗಳೆನಿಸಿದ 22 ಮಂದಿಯ ಪೈಕಿ 21 ಮಂದಿ ಗುಜರಾತ್ ಮತ್ತು ರಾಜಸ್ಥಾನದ ಜ್ಯೂನಿಯಲ್ ಶ್ರೇಣಿಯ ಪೊಲೀಸ್ ಅಧಿಕಾರಿಗಳು.
2005 ರಲ್ಲಿ ಗ್ಯಾಂಗ್‌ಸ್ಟರ್ ಸೊಹ್ರಾಬುದ್ದೀನ್ ಶೇಖ್ ಮತ್ತು ಪತ್ನಿ ಕೌಸರ್ ಬಿ ಅವರನ್ನು ಗುಜರಾತ್‌ನ ಎಟಿಎಸ್ ಪೊಲೀಸರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಅಪಹರಿಸಿ ಗಾಂಧಿನಗರದಲ್ಲಿ ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದರು, ಪತ್ನಿಯನ್ನು ಅತ್ಯಾಚಾರಗೈದು ಹತ್ಯೆಗೈಯಲಾಗಿತ್ತು ಎಂದು ಸಿಬಿಐ ಹೇಳಿತ್ತು.
ಅಪಹರಣಕ್ಕೆ ಸೊಹ್ರಾಬುದ್ದೀನ್ ಆಪ್ತ ತುಳಸಿ ಪ್ರಜಾಪತಿ ಪ್ರತ್ಯಕ್ಷ ದರ್ಶಿಯಾಗಿದ್ದು,ಆತನನ್ನೂ 2006ರಲ್ಲಿ ಬನಸ್ಕಾಂತದ ಚಪ್ರಿ ಎಂಬಲ್ಲಿ ಹತ್ಯೆಗೈಯಲಾಗಿತ್ತು.
2013ರಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ಚಾರ್ಜ್ ಶೀಟ್ ದಾಖಲು ಮಾಡಿತ್ತು. ಬಳಿಕ ಶಾ ಅವರಿಗೆ ಕೋರ್ಟ್ ಕ್ಲೀನ್ ಚಿಟ್ ನೀಡಿತ್ತು.